ಅಯೋಧ್ಯೆ ವಿವಾದ : ಮೇ 10ರಂದು ಸಂಧಾನಕಾರರ ವರದಿ ವಿಚಾರಣೆ
ನವದೆಹಲಿ, ಮೇ 09: ಅಯೋಧ್ಯೆ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ಐವರು ಸದಸ್ಯರ ನ್ಯಾಯಪೀಠವು ಮೂವರು ಸಂಧಾನಕಾರರನ್ನು ನೇಮಿಸಿದ್ದು ತಿಳಿದಿರಬಹುದು. ಈ ಸಂಧಾನಕಾರರು ನೀಡಿರುವ ವರದಿ ವಿಚಾರಣೆಯನ್ನು ಮೇ 10ರಿಂದ ಸುಪ್ರೀಂಕೋರ್ಟ್ ನಡೆಸಲಿದೆ.
ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತಂತೆ ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಲಿದೆ.

ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದು, ಸಂಧಾನ ಪ್ರಕ್ರಿಯೆಯನ್ನು 4 ವಾರದೊಳಗೆ ಆರಂಭಿಸಿ, 8 ತಿಂಗಳೊಳಗೆ ಮುಗಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು.
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದೆ.












Click it and Unblock the Notifications