ಪೂರ್ಣ ಬಹುಮತದಲ್ಲಿ ಪಂಚ ರಾಜ್ಯದಲ್ಲಿ ಗೆಲ್ಲುತ್ತೇವೆ: ಪ್ರಧಾನಿ ಮೋದಿ ವಿಶ್ವಾಸ
ನವದೆಹಲಿ, ಫೆಬ್ರವರಿ 09: ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ, ಮಣಿಪುರ ಎಲ್ಲಾ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಗೆಲ್ಲುವ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ವ್ಯಕ್ತಪಡಿಸಿದ್ದಾರೆ. "ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಜಯ ಸಾಧಿಸಲಿದೆ ಮತ್ತು ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಈ ನಡುವೆ ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ನಾನು ಎಲ್ಲಾ ರಾಜ್ಯಗಳಲ್ಲಿ ಜನರಲ್ಲಿ ಬಿಜೆಪಿಯತ್ತ ಒಲವು ಇರುವುದನ್ನು ನಾನು ನೋಡಿದ್ದೇನೆ. ನಾವು ಪೂರ್ಣ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಈ ಐದು ರಾಜ್ಯಗಳ ಜನರ ಸೇವೆ ಮಾಡಲು ಜನರು ಬಿಜೆಪಿಗೆ ಅವಕಾಶ ನೀಡುತ್ತಾರೆ," ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. 'ಸಾಥ್, ಸಬ್ಕಾ ವಿಕಾಸ್' ಎಂಬ ತಮ್ಮ ಪಕ್ಷದ ಘೋಷಣೆಯನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, "ಚುನಾವಣಾ ಸಮಯವಾಗಲಿ ಅಥವಾ ಇಲ್ಲದಿರಲಿ, ಬಿಜೆಪಿ ಅಧಿಕಾರದಲ್ಲಿದ್ದರೂ ಅಥವಾ ಸಮ್ಮಿಶ್ರ ಸರ್ಕಾರದಲ್ಲಿ ಇದ್ದರೂ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತದೆ," ಎಂದು ಭರವಸೆ ನೀಡಿದರು.

ಬಿಜೆಪಿ ಆಡಳಿತ ವಿರೋಧಿ ಅಲೆ ಇದೆಯೇ?
"ನಾವು ಅಧಿಕಾರದಲ್ಲಿದ್ದಾಗ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಮಂತ್ರದೊಂದಿಗೆ ಮಂತ್ರದೊಂದಿಗೆ ಕೆಲಸ ಮಾಡುತ್ತೇವೆ," ಎಂದು ಹೇಳಿದ ಪ್ರಧಾನಿ ಮೋದಿ, ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುವುದನ್ನು ನಿರಾಕರಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಆಡಳಿತ ಪರವಾದ ವಾತಾವರಣ ಇದೆ ಎಂದು ಹೇಳಿದ್ದಾರೆ. "ಎಲ್ಲಿ ಬಿಜೆಪಿಗೆ ಸರಿಯಾಗಿ ಕೆಲಸ ಮಾಡಲು ಅವಕಾಶ ದೊರೆಯಿತೋ ಅಲ್ಲಿ 'ಆಡಳಿತ-ವಿರೋಧಿ' ಬದಲಿಗೆ 'ಆಡಳಿತದ ಪರ' ವಾತಾವರಣವಿದೆ. ಚುನಾವಣೆಯಲ್ಲಿ ಬಿಜೆಪಿ ಯಾವಾಗಲೂ ಆಡಳಿತ ಪರ ಅಲೆಯಿಂದಾಗಿ ಗೆಲುವು ಸಾಧಿಸಲಿದೆ," ಎಂದು ತಿಳಿಸಿದರು.

ಕೆಲಸ ನೋಡಿ ಜನರು ಅಧಿಕಾರ ನೀಡುತ್ತಾರೆ ಎಂದ ಮೋದಿ
ಇನ್ನು 2014, 2017, 2019 ರ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಸತತವಾಗಿ ವಿಜಯಶಾಲಿಯಾದ ಉತ್ತರ ಪ್ರದೇಶದ ಉದಾಹರಣೆಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂಬುವುದನ್ನು ನಿರಾಕರಿಸಿದ್ದಾರೆ. "ಉತ್ತರ ಪ್ರದೇಶದ ಜನರು ಈಗಾಗಲೇ ಒಮ್ಮೆ ಅಧಿಕಾರಕ್ಕೆ ಬಂದು ನಂತರ ಹೋಗು ಎಂಬ ಹಳೆಯ ಸಿದ್ಧಾಂತವನ್ನು ಬಿಟ್ಟು ಬಿಟ್ಟಿದ್ದಾರೆ. 2014ರಲ್ಲಿ ನಮ್ಮ ಸರ್ಕಾರದ ಕಾರ್ಯವೈಖರಿಯನ್ನು ಜನ ನೋಡಿ 2017ರಲ್ಲಿ ಹಾಗೂ ಮತ್ತೆ 2019ರಲ್ಲಿಯೂ ಅಧಿಕಾರ ನೀಡಿದ್ದಾರೆ. ಈಗ 2022 ಜನರು ಮತ್ತೆ ನಮ್ಮ ಕೆಲಸವನ್ನು ನೋಡಿ ಅಧಿಕಾರ ನೀಡುತ್ತಾರೆ," ಎಂದು ಹೇಳಿದ್ದಾರೆ.

"ರಾಜವಂಶದ ರಾಜಕೀಯ"ದ ವಿರುದ್ಧ ಮೋದಿ ವಾಗ್ದಾಳಿ
ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ "ರಾಜವಂಶದ ರಾಜಕೀಯ" ದ ವಿಚಾರದಲ್ಲಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ರಾಜವಂಶದ ರಾಜಕೀಯವು ಪ್ರಜಾಪ್ರಭುತ್ವದ ದೊಡ್ಡ ಬೆದರಿಕೆ ಮತ್ತು ದೊಡ್ಡ ಶತ್ರು," ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಲ್ಲಿನ ನಕಲಿ ಸಮಾಜವಾದಿಗಳ ಬಗ್ಗೆ ವಿವರಣೆ ನೀಡಿದರು. ಈ ಪಕ್ಷಗಳು ತಮ್ಮ "ಪರಿವಾರವಾದ" ಬಗ್ಗೆ ಕಾಳಜಿ ವಹಿಸುತ್ತವೆ ಎಂದು ಹೇಳಿದರು. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಲ್ಲಿ ಕುಟುಂಬದಿಂದ 45 ಮಂದಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಈ ಹಿಂದೆ ನನಗೆ ಪತ್ರವೊಂದು ಬಂದಿತ್ತು ಎಂದು ಹೇಳಿದ ಪ್ರಧಾನಿ ಮೋದಿ, "25 ವರ್ಷ ಮೇಲ್ಪಟ್ಟವರಿಗೆಲ್ಲ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ ಎಂದು ಬೇರೆಯವರು ಹೇಳಿದ್ದಾರೆ. ಈ ರಾಜವಂಶದ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಅಪಾಯವಲ್ಲವೇ?," ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತಿದೆ ಎಂದು ಪುನರುಚ್ಛರಿಸಿದರು. "ಬಿಜೆಪಿಯು ಸಾಮೂಹಿಕ ನಾಯಕತ್ವವನ್ನು ನಂಬುತ್ತದೆ. ನಾವು ಸಾಮೂಹಿಕವಾಗಿ ಕೆಲಸ ಮಾಡುವ ಅಭ್ಯಾಸವನ್ನು ಹೊಂದಿದ್ದೇವೆ," ಎಂದು ತಿಳಿಸಿದರು.

ಬಿಜೆಪಿಯಲ್ಲೂ ವಂಶಾಡಳಿತ ನಾಯಕರಿಲ್ಲವೇ?
ಇನ್ನು ಬಿಜೆಪಿಯಲ್ಲಿಯೂ ವಂಶಾಡಳಿತ ನಾಯಕರಿದ್ದಾರೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, "ಒಂದು ಕುಟುಂಬದಿಂದ ಒಬ್ಬರು ಅಥವಾ ಇಬ್ಬರಿಗೆ ಟಿಕೆಟ್ ಸಿಗುವುದಕ್ಕೂ, ಚುನಾವಣೆ ಗೆಲ್ಲುವುದಕ್ಕೂ, ಪಕ್ಷದಲ್ಲಿನ ಎಲ್ಲ ಪ್ರಮುಖ ರಾಜಕೀಯ ಸ್ಥಾನಮಾನಗಳಲ್ಲಿ ಒಂದೇ ಕುಟುಂಬದವರು ಇರುವುದಕ್ಕೂ ವ್ಯತ್ಯಾಸವಿದೆ. ರಾಜವಂಶಸ್ಥ ಪಕ್ಷಗಳಲ್ಲಿ ಅಧ್ಯಕ್ಷ, ಸಂಸದೀಯ ಮಂಡಳಿ ಮುಖ್ಯಸ್ಥರಂತಹ ಸ್ಥಾನಗಳನ್ನು ಒಬ್ಬ ವ್ಯಕ್ತಿ ಅಥವಾ ಆ ವ್ಯಕ್ತಿಯ ಕುಟುಂಬವೇ ನಿರ್ವಹಣೆ ಮಾಡುತ್ತದೆ. ತಂದೆ ಇಲ್ಲದಿದ್ದರೆ ಮಗ ಅಧಿಕಾರ ವಯಿಸಿಕೊಳ್ಳುತ್ತಾರೆ," ಎಂದು ಹೇಳಿದರು. ಇನ್ನು ಉದಾಹರಣೆಗಳನ್ನು ಉಲ್ಲೇಖಿಸಿದ ಪ್ರಧಾನಿ, "ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ರಾಜಕೀಯ ಪಕ್ಷಗಳು ದಶಕಗಳಿಂದ ರಾಜವಂಶದ ರಾಜಕೀಯವನ್ನು ನಡೆಸಿವೆ. ಹರಿಯಾಣ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ತಮಿಳುನಾಡು ಪಕ್ಷಗಳಲ್ಲಿ ರಾಜವಂಶದ ರಾಜಕಾರಣ ಮೇಲುಗೈ ಸಾಧಿಸಿದೆ. ಕುಟುಂಬವು ಪಕ್ಷವನ್ನು ನಡೆಸುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವಾಗಿದೆ," ಎಂದು ಹೇಳಿದರು. (ಒನ್‌ಇಂಡಿಯಾ ಸುದ್ದಿ)











Click it and Unblock the Notifications