Odisha Train Accident: ರಕ್ಷಣಾ ಕಾರ್ಯದಲ್ಲಿದ್ದದ್ದು 2300 ಸಿಬ್ಬಂದಿ, 53 ಗಂಟೆ ನಿರಂತರ ಕಾರ್ಯ, ವಿವರ ಇಲ್ಲಿದೆ
ಬೆಂಗಳೂರು, ಜೂನ್ 07: ಭಾರತದ ಮಟ್ಟಿಗೆ ಜೂನ್ 2ರಂದು ನಡೆದ ಒಡಿಶಾ ರೈಲು ದುರಂತ ಇದುವರೆಗಿನ ಮಹಾ ರೈಲು ಅವಘಡ ಎನ್ನಲಾಗುತ್ತಿದೆ. ಭಾರತೀಯ ರೈಲ್ವೆ ಸಚಿವರು ಸೇರಿದಂತೆ ಸಾವಿರಾರು ಸಿಬ್ಬಂದಿ ಯಾವ ಪೂರ್ವ ಯೋಜನೆ ಇಲ್ಲದೇ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಅನೇಕ ಜೀವ ರಕ್ಷಣೆ ಜೊತೆಗೆ ಸಂಚಾರ ಸುಗಮಕ್ಕೂ ಅವಕಾಶ ಮಾಡಿಕೊಡಲಾಯಿತು.
ಅಪಘಾತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದ ತಂಡ ಘಟನೆಯ ಬಾಲಸೂರ್ ಸ್ಥಳಕ್ಕೆ ಭೇಟಿ ನೀಡಿತು. ಅಪಘಾತ ಕುರಿತು ಸಾಧ್ಯವಾದಷ್ಟು ಬೇಗ ತಾಂತ್ರಿಕತೆ ಅರಿತು ತಂಡ ಕಾರ್ಯೋನ್ಮುಖವಾಯಿತು. ಸಚಿವರು, ಅಧಿಕಾರಿಗಳು ಮತ್ತು ತಜ್ಞರು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದರು.

ಕೇಂದ್ರ ಸಚಿವರ ನೇತೃತ್ವದಲ್ಲಿ ಒಟ್ಟು 2300 ಮಂದಿ ಸಿಬ್ಬಂದಿ ನಿರಂತರ 51 ಗಂಟೆಗಳ ಕಾಲ ಜನರ ರಕ್ಷಣೆ, ಶವಗಳ ಸ್ಥಳಾಂತರ, ಆಸ್ಪತ್ರೆ ಸಾಗಾಣೆ ಮತ್ತು ರೈಲ್ವೆ ಹಳಿ ಮರುಸ್ಥಾಪನೆಗೆ ಕಾರ್ಯಾಚರಣೆ ಮಾಡಿದ್ದಾರೆ.
ಮೊದಲು ಘಟನಾ ಸ್ಥಳದಲ್ಲಿ ಕನಿಷ್ಠ 70 ಸದಸ್ಯರನ್ನು ಒಳಗೊಂಡ ಎಂಟು ತಂಡಗಳನ್ನು ರಚಿಸಲಾಗಿದೆ. ನಂತರ ಈ ಎರಡು ತಂಡಗಳಲ್ಲಿ ಪ್ರತಿಯೊಂದನ್ನು ಹಿರಿಯ ವಿಭಾಗ ಇಂಜಿನಿಯರ್‌ಗಳು (ಎಸ್‌ಎಸ್‌ಇ) ಮೇಲ್ವಿಚಾರಣೆ ಮಾಡಿದರು. ಇದಲ್ಲದೆ, ಈ ಎಸ್‌ಎಸ್‌ಇಯನ್ನು ಒಬ್ಬ ಡಿಆರ್‌ಎಂ ಮತ್ತು ಒಬ್ಬ ಜಿಎಂ ರೈಲ್ವೇ ಮೇಲ್ವಿಚಾರಣೆಯನ್ನು ಮಾಡಿದರು. ಇವೆಲ್ಲದರ ಮೇಲೆ ರೈಲ್ವೆ ಮಂಡಳಿಯ ಸದಸ್ಯರು ನಿಗಾ ವಹಿಸಿದ್ದರು. ಈ ಮೂಲಕ ಪ್ರತಿ ಹಂತದಲ್ಲೂ ವಿಳಂಬವಾಗದಂತೆ ಜನರ ಕ್ಷಣೆಯ ಕಾರ್ಯ ನಡೆಸಲಾಯಿತು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ಎಎನ್‌ಐ ವರದಿ ಮಾಡಿದೆ.

ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಮಾಹಿತಿ
ರೈಲ್ವೆ ಮಂಡಳಿಯ ಅಧ್ಯಕ್ಷರನ್ನು ಕಟಕ್‌ನ ಆಸ್ಪತ್ರೆಯಲ್ಲಿ ನಿಯೋಜಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವ ಪ್ರಯಾಣಿಕರಿಗೆ ಗರಿಷ್ಠ ಪರಿಹಾರ ಖಚಿತತೆಗಾಗಿ ಡಿಜಿ ಹೆಲ್ತ್ ಅನ್ನು ಭುವನೇಶ್ವರದ ಆಸ್ಪತ್ರೆಗೆ ಕಳುಹಿಸಲಾಗಿತ್ತು. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮಾತ್ರವಲ್ಲದೆ ಆಸ್ಪತ್ರೆಯಲ್ಲಿರುವವರ ಸೌಕರ್ಯಕ್ಕಾಗಿ ಕೆಲವು ಸೂಚನೆಗಳನ್ನು ನೀಡಲಾಗಿತ್ತು. ಸಿಬ್ಬಂದಿ ಮೇಲೆ ಅಧಿಕಾರಿಗಳನ್ನು ಮೇಲ್ವಿಚಾರಣೆಗೆ ನೇಮಿಸಲಾಗಿತ್ತು.
ಅಪಘಾತದಿಂದ ಮಾರ್ಗ ಬಂದ್ ಆಗಿದ್ದರಿಂದ ರೈಲ್ವೇ ಸಚಿವಾಲಯವು ದೆಹಲಿಯಲ್ಲಿನ ರೈಲ್ವೇ ಸಚಿವ ಪ್ರಧಾನ ಕಛೇರಿಯಲ್ಲಿನ ವಾರ್ ರೂಮ್ ಮೂಲಕ 24 ಗಂಟೆಗಳ ಬೆಳವಣಿಗೆಗಳ ಮೇಲೆ ನಿರಂತರ ನಿಗಾ ಇಟ್ಟಿತ್ತು. ರಕ್ಷಣಾ ಕಾರ್ಯ, ಆಸ್ಪತ್ರೆ ಸಾಗಾಟದ ಕವರೇಜ್‌ಗೆ ಸ್ಥಳದಲ್ಲಿ ನಾಲ್ಕು ಲೈವ್ ಕ್ಯಾಮೆರಾಗೆ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ಉನ್ನತ ಮಟ್ಟದ ಅಧಿಕಾರಿಗಳು ನೋಡಿಕೊಳ್ಳುತ್ತದ್ದರು. ದೃಶ್ಯಾವಳಿ ಆಧರಿಸಿ ಅಗತ್ಯ ಸೂಚನೆ, ಪ್ರಗತಿ ವಿವರ ನೀಡುತ್ತಿದ್ದರು ಎನ್ನಲಾಗಿದೆ.
ರಕ್ಷಣಾ ಕಾರ್ಯದ ನಂತರ ತಾಂತ್ರಿಕ ಸಿಬ್ಬಂದಿ ತಂಡದೊಂದಿಗೆ ಹಳಿ ಮರುಸ್ಥಾಪನೆ ಕಾರ್ಯವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದ ತಂಡ ನಡೆಸಿತು. ಘಟನೆ ನಡೆದ ಎರಡು ದಿನಕ್ಕೆ ಅದೇ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಎಎನ್‌ಐ ವರದಿ ಮಾಡಿದೆ.












Click it and Unblock the Notifications