Artificial Rain In Delhi: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರದಲ್ಲೇ ಕೃತಕ ಮಳೆ? ಕಾರಣ ಏನು ಗೊತ್ತಾ? ಇದನ್ನು ಓದಿ
ದೆಹಲಿ ನವೆಂಬರ್ 19: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾದ ಹಿನ್ನೆಲೆಯಲ್ಲಿ ಕೃತಕ ಮಳೆಗೆ ಕೇಂದ್ರವು ಅನುಮತಿ ನೀಡಬೇಕೆಂದು ಪರಿಸರ ಸಚಿವ ಗೋಪಾಲ್ ರೈ ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ಹೆಚ್ಚುತ್ತಿದ್ದು ಪರಿಹಾರಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಗೋಪಾಲ್ ರೈ ಆರೋಪಿಸಿದ್ದಾರೆ.
ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಹದಗೆಡುತ್ತಿರುವ ವಾಯುಮಾಲಿನ್ಯವನ್ನು ನಿಭಾಯಿಸಲು ಕೃತಕ ಮಳೆಯನ್ನು ತರಿಸುವ ಪ್ರಯತ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಯನ್ನು ಕೋರಿದ್ದಾರೆ. ದೆಹಲಿಯಲ್ಲಿ ಕಳಪೆ ಗಾಳಿಯನ್ನು ಕಡಿಮೆ ಮಾಡಲು ಕೃತಕ ಮಳೆ ಸುರಿಸುವುದರ ಅನಿವಾರ್ಯತೆ ಇದೆ. ಈ ಬಗ್ಗೆ ಒಪ್ಪಿಗೆ ನೀಡುವಂತೆ ಕೇಂದ್ರಕ್ಕೆ ಪದೇ ಪದೇ ಮನವಿಗಳನ್ನು ಸಲ್ಲಿಸಲಾಗುತ್ತಿದೆ. ಆದರೂ ಕೂಡ ಕೇಂದ್ರ ಸರ್ಕಾರ ಕೃತಕ ಮಳೆ ಸುರಿಸಲು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗೋಪಾಲ್ ರೈ ದೂರಿದ್ದಾರೆ.

ಎಎಪಿ ಸರ್ಕಾರದ ಸಚಿವ ಗೋಪಾಲ್ ರೈ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, 'ಕಳೆದ ಮೂರು ದಿನಗಳಿಂದ ಯುಪಿ, ಹರಿಯಾಣ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದಾದ್ಯಂತ ವಾಯುಮಾಲಿನ್ಯ ಹೆಚ್ಚಾಗಿದೆ. ಇದರಿಂದಾಗಿ ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೆ ದೆಹಲಿಯಲ್ಲಿ ಗ್ರಾಪ್-4 ನಿಯಮಗಳನ್ನು ಜಾರಿಗೆ ತರಲಾಗಿದೆ. ವಾಹನಗಳಿಂದ ಹರಡುವ ಮಾಲಿನ್ಯವನ್ನು ತಡೆಯಲು ಕೆಲ ವಾಹನಗಳನ್ನು ಸಹ ನಿಷೇಧಿಸಲಾಗಿದೆ. ಆದರೆ ವಾಯುಮಾಲಿನ್ಯ ಕಡಿಮೆಯಾಗುತ್ತಿಲ್ಲ. ಹೀಗಾಗಿ ಈಗ ದೆಹಲಿಯಲ್ಲಿ ಕೃತಕ ಮಳೆ ಸುರಿಸುವ ಅಗತ್ಯವಿದ್ದು, ಇದಕ್ಕಾಗಿ ಇಂದು ಮತ್ತೊಮ್ಮೆ ಕೇಂದ್ರ ಪರಿಸರ ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ' ಎಂದಿದ್ದಾರೆ.
ಅದಾಗ್ಯೂ ದೆಹಲಿ ಸರ್ಕಾರ ವಾಯುಮಾಲಿನ್ಯ ನಿಯಂತ್ರಿಸಲು ಕೆಲ ನಿರ್ಬಂಧಗಳನ್ನ ಹೇರಿದೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ IV ರ ಭಾಗವಾಗಿ ದೆಹಲಿ ಸರ್ಕಾರ ಟ್ರಕ್‌ಗಳು ಮತ್ತು ಖಾಸಗಿ ವಾಹನಗಳ ಮೇಲೆ ಕೆಲ ನಿಷೇಧ ಹೇರಿದೆ. ವಾಹನ ಮತ್ತು ಕೈಗಾರಿಕಾ ಮಾಲಿನ್ಯವನ್ನು ಕಡಿಮೆ ಮಾಡಲು ನಾವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಗರಕ್ಕೆ ಪ್ರವೇಶಿಸುವ ವಾಹನಗಳ ಸಂಖ್ಯೆಯನ್ನು ನಿಗ್ರಹಿಸುವ ಉದ್ದೇಶದಿಂದ ಖಾಸಗಿ ವಾಹನಗಳು ಮತ್ತು ಟ್ರಕ್‌ಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ.
ಆದರೆ ಇದು ಸಾಕಾಗುತ್ತಿಲ್ಲ. ದಿನನಿತ್ಯ ದಟ್ಟ ಮಂಜುವಿನಂತೆ ಕೆಟ್ಟ ಗಾಳಿ ದೆಹಲಿಯನ್ನು ಆವರಿಸುತ್ತಿದೆ. ಇದರಿಂದಾಗಿ ಜನರ ಆರೋಗ್ಯದ ಬಗ್ಗೆ ಆತಂಕ ಶುರುವಾಗಿದೆ. ಹೀಗಾಗಿ ಕೃತಕ ಮಳೆಯಿಂದಾಗಿ ಗಾಳಿಯಲ್ಲಿನ ಧೂಳಿನ ಕಣಗಳು ಕಡಿಮೆಯಾಗುತ್ತದೆ. ಇದು ಕೊಂಚ ಮಟ್ಟಿಗೆ ಪರಿಹಾರವನ್ನು ನೀಡಬಹುದು ಎಂದು ರೈ ಹೇಳಿದರು.
ಕೃತಕ ಮಳೆ ಎಂದರೇನು?
ಮೋಡ ಬಿತ್ತನೆ ಅಥವಾ ಕೃತಕ ಮಳೆ ಒಂದು ರೀತಿಯ ಹವಾಮಾನ ಮಾರ್ಪಡಿಸುವಿಕೆ ತಂತ್ರ್ಞಾನವಾಗಿದ್ದು ಮೋಡ ಬಿತ್ತನೆಯು ಮಳೆಯನ್ನು ಸೃಷ್ಟಿಸಲು ಮೋಡಗಳಲ್ಲಿನ ತೇವಾಂಶದ ಘನೀಕರಣವನ್ನು ವೇಗಗೊಳಿಸುವ ತಂತ್ರವಾಗಿದೆ. ಸಿಲ್ವರ್ ಅಯೋಡೈಡ್ ಅಥವಾ ಕ್ಲೋರೈಡ್ ನಂತಹ ಉಪ್ಪಿನ ಕಣಗಳನ್ನು ನೆಲದ ಮೇಲೆ ವಿಮಾನಗಳು ಅಥವಾ ಪ್ರಸರಣ ಸಾಧನಗಳನ್ನು ಬಳಸಿಕೊಂಡು ಮೋಡಗಳ ಮೇಲೆ ಸಿಂಪಡಿಸುವ ಮೂಲಕ ಇದನ್ನು ಮಾಡಲಾಗುತ್ತದೆ.
ಏರುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಸರಕಾರ ಬೆಸ-ಸಮ ಯೋಜನೆ, ಎಲ್ಲಾ ಶಾಲೆಗಳಲ್ಲಿ ವೈಯಕ್ತಿಕ ತರಗತಿಗಳನ್ನು ಅಮಾನತುಗೊಳಿಸುವುದು ಮತ್ತು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ IV ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಿಸಿದೆ.
ನವೆಂಬರ್ 2023 ರಲ್ಲಿ ದೆಹಲಿ ಸರ್ಕಾರ ನಗರದಲ್ಲಿ ಎಕ್ಯೂಐ ಮಟ್ಟವನ್ನು ಕಡಿಮೆ ಮಾಡಲು ಮೋಡ ಬಿತ್ತನೆಯ ಮೂಲಕ ಕೃತಕ ಮಳೆಯ ಸಾಧ್ಯತೆಯನ್ನು ಚರ್ಚಿಸಲು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಆದರೆ, ಸುಪ್ರೀಂ ಕೋರ್ಟ್ ಎಎಪಿ ಸರ್ಕಾರಕ್ಕೆ ಬದಲಾಗಿ ಕೇಂದ್ರವನ್ನು ಸಂಪರ್ಕಿಸಿ ಮತ್ತು ಅದನ್ನು ಜಾರಿಗೆ ತರಲು ಅನುಮತಿ ಪಡೆಯುವಂತೆ ಕೇಳಿತ್ತು. ಇದೀಗ ದೆಹಲಿ ಸಚಿವರು ಇದಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಸಂಬಂಧಪಟ್ಟ ಇಲಾಖೆಗಳ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಕೇಂದ್ರ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ.
ಹೀಗಾಗಿ ಪರಿಸರ ಸಚಿವ ಗೋಪಾಲ್ ರೈ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ. ಪ್ರಧಾನಿ ಮತ್ತು ಕೇಂದ್ರ ಪರಿಸರ ಸಚಿವರಿಗೆ ಮಾಲಿನ್ಯದ ಬಗ್ಗೆ ಸಭೆ ನಡೆಸಲು ಸಮಯವಿಲ್ಲ.ದೇಶದ ಜನರು ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಸಾರ್ವಜನಿಕರಿಗೆ ಉತ್ತರಿಸಬೇಕಾಗುತ್ತದೆ. ಕೇಂದ್ರದ ಬಿಜೆಪಿ ಸರ್ಕಾರದಿಂದ ಏನನ್ನೂ ಮಾಡಲಾಗದಿದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಪರಿಸರ ಸಚಿವ ಗೋಪಾಲ್ ರೈ ಕಿಡಿ ಕಾರಿದ್ದಾರೆ.












Click it and Unblock the Notifications