Article 370: ಕೇಂದ್ರ ಸರ್ಕಾರದ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್!
ಆರ್ಟಿಕಲ್ 370 ರದ್ದತಿಯಲ್ಲಿ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಸಂಸತ್, ರಾಷ್ಟ್ರಪತಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಕೇಂದ್ರವು ಕೆಲವು ಅಧಿಕಾರವನ್ನು ಪ್ರಯೋಗಿಸಬಹುದು. ಆರ್ಟಿಕಲ್ 370 ತಾತ್ಕಾಲಿಕ ನಿಯಮವಷ್ಟೇ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.
ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಜಮ್ಮುಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದ ಮೇಲೆ ಕೇಂದ್ರ ಸರ್ಕಾರಕ್ಕೆ ಸಾರ್ವಭೌಮತ್ವ ಸಾಧಿಸಲು ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ತೀರ್ಪು ನೀಡಿದ್ದಾರೆ. ಆರ್ಟಿಕಲ್ 370 ರದ್ದತಿ ಮಾಡಲು ರಾಷ್ಟ್ರಪತಿಗೆ ಅಧಿಕಾರವಿದೆ. ಆದರೆ ರಾಜ್ಯದ ವಿಧಾನಸಭೆಯ ಅನುಮೋದನೆಯ ಅಗತ್ಯವಿಲ್ಲ ಎಂದು ಕೋರ್ಟ್ ಕೇಳಿದೆ.
ಜೊತೆಗೆ ಸೆಪ್ಟೆಂಬರ್ 30, 2024ರೊಳಗೆ ಚುನಾವಣೆಗಳು ನಡೆಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದುಹಾಕುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಹಿಂದಿನ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ ಸಂವಿಧಾನದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ಆಗಸ್ಟ್ 5, 2019 ರ ನಿರ್ಧಾರವು ಸಾಂವಿಧಾನಿಕವಾಗಿತ್ತೇ ಎಂಬುದನ್ನು ನಿರ್ಧರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ತೀರ್ಪು ನೀಡಿದೆ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಸೇರಿದಂತೆ ಪೀಠದ ಇತರ ಸದಸ್ಯರು ಈ ವೇಳೆ ಹಾಜರಿದ್ದರು.
ಆಗಸ್ಟ್ 5, 2019 ರಂದು ಕೇಂದ್ರ ಸರ್ಕಾರ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿತು. ಇದು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು. ಜೊತೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು.
ಆರ್ಟಿಕಲ್ 370 ರದ್ಧತಿ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಗುರುತಿನ ಮೇಲೆ ಪ್ರಭಾರ ಬೀರಲಿದೆ. ಜೊತೆಗೆ ಈ ಪ್ರದೇಶದ ಪ್ರದೇಶದ ಸ್ವಾಯತ್ತತೆ ಮತ್ತು ಜನಸಂಖ್ಯಾ ಸಂಯೋಜನೆಗೆ ಅದರ ಸಂಭಾವ್ಯ ಪರಿಣಾಮಗಳ ಬಗ್ಗೆ ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು. ಈ ನೆಲೆಯಲ್ಲೇ ಅರ್ಜಿದಾರರು ಆರ್ಟಿಕಲ್ 370 ರದ್ಧತಿಯು ಸಂವಿಧಾನಬಾಹಿರವಾಗಿದೆ ಎಂದು ವಾದಿಸಿದರು.
ಪೂರ್ಣ ಪ್ರಮಾಣದ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರ್ಕಾರವು ತನಗಿರುವ ಅಖಂಡ ಬಹುಮತ ಮತ್ತು ಕಾರ್ಯನಿರ್ವಾಹಕ ಆದೇಶಗಳನ್ನು ದುರುಪಯೋಗ ಮಾಡಿಕೊಂಡಿದೆ. ಇದು ಒಕ್ಕೂಟ ವ್ಯವಸ್ಥೆ ಮತ್ತು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದ ನಡೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಉಳಿದ ಭಾಗಗಳೊಂದಿಗೆ ಏಕೀಕರಣಕ್ಕೆ ಅಡ್ಡಿಪಡಿಸುತ್ತದೆ. ಈ ಪ್ರದೇಶದ ಅಭಿವೃದ್ಧಿಯನ್ನು ಸೀಮಿತಗೊಳಿಸುತ್ತದೆ ಎಂಬ ಕಾರಣಕ್ಕಾಗಿ ರದ್ದುಗೊಳಿಸಲಾಯಿತು ಎಂದು ಕೇಂದ್ರ ಸರಕಾರವು ತನ್ನ ವಾದವನ್ನು ಮಂಡಿಸಿತು. ರದ್ಧು ನಿರ್ಧಾರವು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ, ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಉತ್ತೇಜಿಸಲು ಮತ್ತು ಪ್ರದೇಶದಲ್ಲಿ ಉತ್ತಮ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಾದಿಸಲಾಯಿತು. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣವಾಗಿ ಅನ್ವಯವಾಗದ ರಾಷ್ಟ್ರೀಯ ಕಾನೂನುಗಳು ಮತ್ತು ಕಾರ್ಯಕ್ರಮಗಳ ಅನ್ವಯಕ್ಕೆ ಇದು ಅನುಕೂಲವಾಗುತ್ತದೆ.












Click it and Unblock the Notifications