ಬಿಗಿ ಭದ್ರತೆ, ಮುಸ್ಲಿಂ ಬಾಂಧವರ ಬಹಿಷ್ಕಾರದ ನಡುವೆ ಜ್ಞಾನವಾಪಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ
ವಾರಣಾಸಿ, ಆಗಸ್ಟ್. 04: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡ ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣಕ್ಕೆ ಆಗಮಿಸಿ ಬಿಗಿ ಭದ್ರತೆಯ ನಡುವೆ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಸುಮಾರು 7 ಗಂಟೆಗೆ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ಪ್ರಾರಂಭವಾಗಿದೆ.
ಶುಕ್ರವಾರ ಮಧ್ಯಾಹ್ನ 12 ಗಂಟೆಯವರೆಗೆ ಸಮೀಕ್ಷೆ ನಡೆಯಲಿದ್ದು, ನಂತರ ಊಟದ ವಿರಾಮ ಬಳಿಕ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮತ್ತೆ ಸಮೀಕ್ಷೆ ಆರಂಭವಾಗಲಿದೆ. 17 ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ಪೂರ್ವ ಅಸ್ತಿತ್ವದಲ್ಲಿರುವ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸುವ ಗುರಿಯನ್ನು ಹೊಂದಿದೆ. ಸಮೀಕ್ಷೆಯನ್ನು ನಡೆಸಲು ಅಲಹಾಬಾದ್ ಹೈಕೋರ್ಟ್ ಗುರುವಾರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಅನುಮತಿ ನೀಡಿದೆ.

"ಎಲ್ಲ ಜನರು (ಎಎಸ್‌ಐ ಅಧಿಕಾರಿಗಳು ಸೇರಿದಂತೆ) ಅಲ್ಲಿಗೆ ತಲುಪಿದ್ದಾರೆ. ಸಮೀಕ್ಷೆ ಪ್ರಾರಂಭವಾಗಿದೆ. ನಾವೂ ಒಳಗೆ ಹೋಗುತ್ತಿದ್ದೇವೆ" ಎಂದು ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ ಎಎನ್‌ಐಗೆ ತಿಳಿಸಿದ್ದಾರೆ. ಎಎಸ್‌ಐ ಸಮೀಕ್ಷೆ ಆರಂಭವಾದಾಗ ಜಿಲ್ಲಾಡಳಿತದಿಂದ ನೇಮಕಗೊಂಡವರು ಮಾತ್ರ ಆವರಣದಲ್ಲಿ ಹಾಜರಿದ್ದರು. ಇದೇ ವೇಳೆ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿ ಸದಸ್ಯರು ಸಮೀಕ್ಷೆಯನ್ನು ಬಹಿಷ್ಕರಿಸಿದ್ದಾರೆ.
ಈ ಹಿಂದಿನ ಸಮೀಕ್ಷೆಯ ಸಮಯದಲ್ಲಿ ಶಿವ ಮತ್ತು ಪಾರ್ವತಿಯ ಶಿಲ್ಪಗಳು, ವರಾಹ (ವಿಷ್ಣುವಿನ ಹಂದಿ ಅವತಾರ), ಗಂಟೆಗಳು, ತ್ರಿಶೂಲಗಳು ಮತ್ತು ಇತರ ಹಲವು ಪುರಾವೆಗಳು ಸೇರಿದಂತೆ ಹಲವಾರು ಕಲಾಕೃತಿಗಳು ಆವರಣದಲ್ಲಿ ಕಂಡುಬಂದಿವೆ. ಇವೆಲ್ಲವೂ ಇದು ದೇವಾಲಯ ಎಂಬುದನ್ನು ಸೂಚಿಸುತ್ತವೆ ಎಂದು ಹಿಂದೂ ಸಮುದಾಯದವರ ಕಡೆಯ ಸೋಹನ್‌ಲಾಲ್ ಆರ್ಯ ಹೇಳಿದ್ದಾರೆ.

ಗುರುವಾರ, ಅಲಹಾಬಾದ್ ಹೈಕೋರ್ಟ್ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ ಮತ್ತು ಉದ್ದೇಶಿತ ಕ್ರಮವು ನ್ಯಾಯಯುತವಾಗಿ ಅಗತ್ಯ ಮತ್ತು ಎರಡೂ ಕಡೆಯವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ತೀರ್ಪು ನೀಡಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಕಾನೂನು ವಿವಾದಕ್ಕೆ ಮುಸ್ಲಿಂ ಪರವಾಗಿ ಪ್ರತಿನಿಧಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ನಂತರ ಈ ಆದೇಶ ಬಂದಿದೆ.
ಬಿಜೆಪಿ ನಾಯಕರು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಆ ಸ್ಥಳದಲ್ಲಿ ದೇವಾಲಯದ ಬಗ್ಗೆ ಸತ್ಯ ಈಗ ಹೊರಬರಲಿದೆ ಎಂದು ಹೇಳಿದ್ದಾರೆ. "ಇದೊಂದು ಉತ್ತಮ ತೀರ್ಪು. ಭಾರತೀಯರಾದ ನಮಗೆ ಇದು ಭರವಸೆ ನೀಡುತ್ತದೆ. ಸತ್ಯ ಯಾವಾಗಲೂ ಹೊರಬರುತ್ತದೆ. ಆದರೆ, ಸಮಯ ತೆಗೆದುಕೊಳ್ಳುತ್ತದೆ" ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದರು.












Click it and Unblock the Notifications