ಕಾಶಿ ಜ್ಞಾನವಾಪಿ ಬಳಿಕ ಮತ್ತೊಂದು ಮಸೀದಿ: ಎಎಸ್‌ಐ ಸಮೀಕ್ಷೆಗೆ ಹೈಕೋರ್ಟ್ ಆದೇಶ
ಭೋಪಾಲ್ ಮಾರ್ಚ್ 12: ಉತ್ತರ ವಾರಾಣಾಸಿಯ ಜ್ಞಾನವಾಪಿ ಮಸೀದಿ ಈ ಹಿಂದೆ ದೇಗುಲವಾಗಿತ್ತೇ ಎಂಬುದರ ಕುರಿತು ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆದ ಬೆನ್ನಲ್ಲೇ ಮಧ್ಯಪ್ರದೇಶದಲ್ಲೂ 11ನೇ ಶತಮಾನದ ದೇಗುಲ/ಮಸೀದಿಯೊಂದರ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಆದೇಶಿಸಿದೆ.
ಮಧ್ಯಪ್ರದೇಶ ಧಾರ್‌ನಲ್ಲಿ ಭೋಜ್‌ಶಾಲಾ ದೇಗುಲ ಸಮುಚ್ಚಯ ಮತ್ತು ಕಮಾಲ್ ಮೌಲಾ ಮಸೀದಿಯೇ ಸಮೀಕ್ಷೆಗೆ ಒಳಪಡಿಸಲಿರುವ ವಿವಾದಿತ ಕಟ್ಟಡ. ಹಿಂದೂಗಳು ಇದನ್ನು ಭೋಜ ರಾಜ ನಿರ್ಮಿಸಿದ ವಾಗ್ದೇವಿ (ಸರಸ್ವತಿ) ದೇಗುಲ ಎನ್ನುತ್ತಾರೆ ಹಾಗೂ ಅಲ್ಲಾವಿದ್ದೀನ್ ಖಿಲ್ಜಿ ಆಡಳಿತದಲ್ಲಿ ಧ್ವಂಸಗೊಳಸಿ ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ದೂರುತ್ತಾರೆ. ಆದರೆ ಇದು ದೇಗುಲವಲ್ಲ, ಕಮಲ್ ಮೌಲಾ ಮಸೀದಿ ಎಂಬುದು ಮುಸ್ಲಿಮರ ವಾದ.

ಇಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸುವ ಸಂಬಂಧ ಉಭಯ ಬಣಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಆಗಾಗ್ಗೆ ನಿರ್ಮಾಣ ಆಗುತ್ತಿರುತ್ತದೆ. ಅದರಲ್ಲೂ ಸರಸ್ವತಿ ಆರಾಧನೆಯ ಬಸಂತ ಪಂಚಮಿಯು ಮುಸ್ಲಿಮರ ನಮಾಜ್ ನಡೆಯುವ ಶುಕ್ರವಾರವೇ ಬಂದಾಗ ಪೂಜೆ/ಪ್ರಾರ್ಥನೆ ವಿವಾದ ಮತ್ತಷ್ಟು ಭುಗಿಲೇಳುತ್ತದೆ. ಹೀಗಾಗಿ 2003ರಿಂದ ಇಲ್ಲಿ ಪ್ರತಿ ಮಂಗಳವಾರ ಹಿಂದೂಗಳಿಗೆ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಪುರಾತತ್ವ ಇಲಾಖೆ ವಶದಲ್ಲಿರುವ ಈ ದೇಗುಲವನ್ನು ಮರಳಿ ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಹಿಂದೂ ಸಂಘಟನೆಗಳು ವಾದಿಸಿದ್ದವು. ಇದನ್ನು ಮುಸ್ಲಿಂ ಬಣ ವಿರೋಧಿಸಿತ್ತು. ಈ ಕುರಿತು ವಾದ-ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಇದೀಗ ವಿವಾದಿತ ಪ್ರದೇಶದ ಇತಿಹಾಸ ಅರಿಯಲು ಪುರಾತತ್ವ ಇಲಾಖೆಯಿಂದ ಸಮೀಕ್ಷೆಗೆ ಆದೇಶಿಸಿದೆ. ವಿಶೇಷವೆಮದರೆ ಕಾಶಿ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳ ಪರವಕೀಲರಾಗಿರುವ ವಿಷ್ಣು ಶಂಕರ್ ಜೈನ್ ಅವರ ಕೋರಿಕೆ ಅನ್ವಯ ಇಲ್ಲಿ ಸಮೀಕ್ಷೆಗೆ ಆದೇಶ ಹೊರಬಿದ್ದಿದೆ.
ಜ್ಞಾನವಾಪಿ
ಮೂವತ್ತೊಂದು ವರ್ಷಗಳ ಹಿಂದೆ, ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ವ್ಯಾಸ ಕುಟುಂಬದ ಹಿಂದೂ ಅರ್ಚಕರೊಬ್ಬರು ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿದ್ದರು. ಆದರೀಗ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯೊಳಗೆ ವ್ಯಾಸ ಕುಟುಂಬದ ಸದಸ್ಯರಾದ ಜಿತೇಂದ್ರ ನಾಥ್ ವ್ಯಾಸ್ ಮೊದಲ ಬಾರಿಗೆ ಪೂಜೆ ಮಾಡಿದೆ. ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ವಿಗ್ರಹಗಳ ಮುಂದೆ ಅರ್ಚಕರು ಪ್ರಾರ್ಥನೆಗಳನ್ನು ಮಾಡಬಹುದು ಎಂದು ಜಿಲ್ಲಾ ನ್ಯಾಯಾಲಯವು ಹೇಳಿದೆ.
ಕಾಶಿ ವಿಶ್ವನಾಥ ದೇಗುಲದ ಸನಿಹ ಇರುವ ಜ್ಞಾನವಾಪಿ ಮಸೀದಿ (gyanvapi Case) ಆವರಣದಲ್ಲಿ ಹಿಂದೂಗಳು ಕೂಡ ಪೂಜೆ ಮಾಡಬಹುದು ಎಂದು ವಾರಾಣಸಿ ಜಿಲ್ಲಾ ಕೋರ್ಟ್ ಆದೇಶ ನೀಡಿದೆ. ಈ ಪ್ರಕರಣವು ಮಸೀದಿ ಆವರಣದಲ್ಲಿರುವ ಸೋಮನಾಥ ವ್ಯಾಸ್ ನೆಲಮಾಳಿಗೆಗೆ ಸಂಬಂಧಿಸಿದ್ದಾಗಿದೆ. ಸೋಮನಾಥ್ ಅವರ ಕುಟುಂಬವು 1993ರವರೆಗೆ ಇಲ್ಲಿ ಪೂಜೆ ಸಲ್ಲಿಸುತ್ತಿತ್ತು. ರಾಜ್ಯ ಸರ್ಕಾರದ ಆದೇಶದ ನಂತರ ನೆಲಮಾಳಿಗೆಯಲ್ಲಿ ಪೂಜೆ ನಿಲ್ಲಿಸಲಾಗಿತ್ತು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಮಸೀದಿ ಆವರಣದಲ್ಲಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ಸಮಯದಲ್ಲಿ ನೆಲಮಾಳಿಗೆಯನ್ನು ಸ್ವಚ್ಛಗೊಳಿಸಲಾಗಿದೆ. ಜನವರಿ 17 ರಂದು ವ್ಯಾಸ್ ಅವರ ನೆಲಮಾಳಿಗೆಯನ್ನು ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿತ್ತು. ಇದೀಗ ಕೋರ್ಟ್ ಆದೇಶ ಹಿಂದೂಗಳ ಪರ ಬಂದಿದೆ. ಇದಕ್ಕೂ ಮೊದಲು ಮಸೀದಿ ಪಶ್ಚಿಯ ಭಾಗದ ಗೋಡೆಯಲ್ಲಿರುವ ಶೃಂಗಾರ ಗೌರಿ ಮೂರ್ತಿಯಿದ್ದು, ಪೂಜೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಐವರು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ಆ ಪ್ರಕರಣವು ಇನ್ನೂ ಚಾಲ್ತಿಯಲ್ಲಿದೆ. ಅದರ ಭಾಗವಾಗಿಯೇ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಇಡೀ ಪ್ರಕರಣವು ವಿವಿಧ ಹಂತದಲ್ಲಿ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿದೆ.











Click it and Unblock the Notifications