Shashi Tharoor: ಕಾಂಗ್ರೆಸ್‌ಗೆ ಮತ್ತೊಂದು ಬಿಗ್ ಶಾಕ್: ಬಿಜೆಪಿ ಸೇರುವತ್ತ ಪ್ರಭಾವಿ ನಾಯಕ ಶಶಿ ತರೂರ್ !
Shashi Tharoor: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್‌ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಕಾಂಗ್ರೆಸ್‌ನಿಂದ ಇತ್ತೀಚಿನ ವರ್ಷಗಳಲ್ಲಿ ಹಲವು ಪ್ರಭಾವಿ ನಾಯಕರು ದೂರ ಸರಿದಿದ್ದಾರೆ. ಹಲವು ನಾಯಕರು ಬಿಜೆಪಿ ಪಕ್ಷವನ್ನು ಸೇರಿ ಕೇಂದ್ರ ಬಿಜೆಪಿಯಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಬೇರೆ ಅವರನ್ನು ಬೆಳೆಯಲು ಬಿಡುತ್ತಿಲ್ಲ. ಇಲ್ಲವೇ ಕಾಂಗ್ರೆಸ್‌ನ ಪ್ರಭಾವಿ ನಾಯಕರಿಗೆ ಗೌರವ, ಅವಕಾಶ ಹಾಗೂ ಪ್ರಮುಖ ಹುದ್ದೆಗಳನ್ನು ನೀಡುತ್ತಿಲ್ಲ ಎನ್ನುವ ಆರೋಪಗಳು ಇವೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಬುದ್ಧಿವಂತ ನಾಯಕ ಎಂದೇ ಖ್ಯಾತಿ ಗಳಿಸಿರುವ ಶಶಿ ತರೂರ್ ಅವರು ಬಿಜೆಪಿ ಸೇರುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆ ಎನ್ನುವುದು. ಇದೇನಾದರೂ ಆದರೆ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಸಂಕಷ್ಟ ಎದುರಾಗುವುದು ಖಚಿತ.
ಕಾಂಗ್ರೆಸ್ ಪಕ್ಷವು ಅಧಿಕಾರ ಕಳೆದುಕೊಂಡ ಮೇಲೆ ಹಲವು ಪ್ರಭಾವಿ ಕಾಂಗ್ರೆಸ್ ನಾಯಕರು ಪಕ್ಷವನ್ನು ತೊರೆದಿದ್ದಾರೆ. ಇನ್ನೂ ಕೆಲವು ನಾಯಕರು ಬಿಜೆಪಿ ಬಾಗಿಲು ತಟ್ಟಿದ್ದಾರೆ. ಕಳೆದ ಎರಡು ವರ್ಷದ ಅವಧಿಯಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯವಾಗಿ ಸೋತಿದೆ. ಅಲ್ಲದೆ ಹರಿಯಾಣದಲ್ಲಿ ಇನ್ನೇನು ಗೆಲ್ಲುವ ಹಂತದಲ್ಲಿದ್ದ ಕಾಂಗ್ರೆಸ್ ಪಕ್ಷವು ಅತಿಯಾದ ಆತ್ಮವಿಶ್ವಾಸದಿಂದ ಮುಗ್ಗರಿಸಿದೆ. ಇನ್ನು ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಪೈಪೋಟಿ ಕೊಟ್ಟು ಸೋತಿದ್ದರೆ. ದೆಹಲಿಯಲ್ಲಿ ಶೂನ್ಯ ಸಾಧನೆ ಮಾಡಿದೆ. ಇದೀಗ ಕಾಂಗ್ರೆಸ್‌ನಲ್ಲಿ ಇರುವ ಮುತ್ಸದ್ದಿ ರಾಜಕಾರಣಿಗಳು ಸಹ ಪಕ್ಷದಿಂದ ಹೊರ ನಡೆಯುವ ಮುನ್ಸೂಚನೆ ಸಿಕ್ಕಿದೆ.

ಸೆಲ್ಫಿ ಫೋಟೋ ವೈರಲ್: ಶಶಿ ತರೂರ್ ಅವರು ಕಾಂಗ್ರೆಸ್ ಹೈಕಮಾಂಡ್‌ನ ಮೇಲೆ ಮುನಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅವರು ಕೇಂದ್ರ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ನಗುತ್ತಲ್ಲೇ ಸೆಲ್ಫಿ ತೆಗೆದುಕೊಂಡಿರುವುದು ಭಾರೀ ವೈರಲ್ ಆಗಿದೆ. ಈ ಫೋಟೋವನ್ನು ಶಶಿ ತರೂರ್ ಅವರೇ ಕ್ಲಿಕ್ಕಿಸಿದ್ದು, ತಮ್ಮ ಸೋಷಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಕೇರಳ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ. ಇದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವೇ ತನ್ನ ನಿರ್ಧಾರವನ್ನು ತಿಳಿಸಬೇಕು ಎಂದು ಅವರು ಹೇಳಿದ್ದರು.
ಅಲ್ಲದೆ ಕೇರಳದ ಆಡಳಿತರೂಢ ಎಲ್‌ಡಿಎಫ್ ಸರ್ಕಾರದ ನಿರ್ಧಾರ ಹಾಗೂ ಯೋಜನೆಗಳಿಂದಾಗಿ ಕೇರಳ ಅಭಿವೃದ್ಧಿಯಾಗಿದೆ ಎಂದೂ ಶಶಿ ತರೂರ್ ಅವರು ಹೇಳಿದ್ದರು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಶಶಿ ತರೂರ್ ಅವರಿಗೆ ಸಮನ್ಸ್ ಸಹ ಜಾರಿ ಮಾಡಿತ್ತು.
ನಿಮಗೆ ಬೇಡವೇ ಹೇಳಿ: ಇನ್ನು ಈಚೆಗೆ ಶಶಿ ತರೂರ್ ಅವರು ಕಾಂಗ್ರೆಸ್ ಹೈಕಮಾಂಡ್ ಅನ್ನು ಉದ್ದೇಶಿಸಿ ನಿಮಗೆ ಅವಶ್ಯಕತೆ ಇಲ್ಲವೇ ಹೇಳಿ ಬಿಡಿ ನಾನು ನನ್ನ ಬೇರೆ ಆಯ್ಕೆಗಳ ಬಗ್ಗೆ ಯೋಚಿಸುತ್ತೀನಿ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುವ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಶಿವರಾತ್ರಿಯ ಟ್ವೀಟ್: ಶಶಿ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಚರ್ಚೆಗಳ ನಡುವೆಯೇ ಅವರು ಮಹಾಶಿವರಾತ್ರಿಯಂದು ಒಂದು ಟ್ವೀಟ್ ಮಾಡಿದ್ದಾರೆ. ನಾನು ಮಹಾಶಿವರಾತ್ರಿಯಂದು ಜನಿಸಿದ್ದೇನೆ. ಶಿವನ ಹಣೆಯ ಮೇಲೆ ಅರ್ಧಚಂದ್ರನಿದ್ದಾನೆ ಅದೇ ಕಾರಣಕ್ಕೆ ನನಗೆ ಶಶಿ ಎಂದು ಹೆಸರಿಟ್ಟಿದ್ದಾರೆ. ಇನ್ನು ಕೇರಳದ ಕ್ಯಾಲೆಂಡರ್‌ನಲ್ಲಿ, ನನ್ನ "ನಕ್ಷತ್ರದ ಹುಟ್ಟುಹಬ್ಬ" ಇಂದು. (ಕೇರಳದಲ್ಲಿ ಹುಟ್ಟು ಹಬ್ಬದ ಜೊತೆಗೆ ನಕ್ಷತ್ರ ದಿನವನ್ನೂ ಹುಟ್ಟುಹಬ್ಬ ಎಂದು ಆಚರಿಸುವ ಪದ್ಧತಿ ಇದೆ) ಇಂದು ನನ್ನ ಕುಟುಂಬಕ್ಕೆ ಯಾವಾಗಲೂ ಬಹಳ ವಿಶೇಷವಾದ ದಿನವಾಗಿದೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.












Click it and Unblock the Notifications