Andhra Pradesh Opinion Poll: ಆಂಧ್ರದಲ್ಲಿ ಟಫ್ ಫೈಟ್- ಮುನ್ನೆಲೆಗೆ ಬರಲಿದೆಯೇ ಹೊಸ ಪಕ್ಷ? ಸಮೀಕ್ಷೆ ಹೇಳುವುದೇನು? ಅಂಕಿಅಂಶ
ಹೈದರಾಬಾದ್, ಆಗಸ್ಟ್ 11: ಮುಂದಿನ ವರ್ಷ ನಡೆಯಲಿರುವ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಆಂಧ್ರ ಪ್ರದೇಶದಲ್ಲಿ ರಾಷ್ಟ್ರೀಯ ಪಕ್ಷಗಳು ಲೆಕ್ಕಕ್ಕೆ ಇಲ್ಲದಿದ್ದರೂ, ಈ ರಾಜ್ಯವು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆಂಧ್ರದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಗಳ ನಡುವೆ ಮತ್ತೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. 'ಸ್ಮಾಲ್ ಬಾಕ್ಸ್ ಇಂಡಿಯಾ' ಸಂಸ್ಥೆಯು ನೀಡಿರುವ ಸಮೀಕ್ಷೆ ಹೇಳುವುದೇನು? ಅಂಕಿಅಂಶ, ವಿವರಗಳನ್ನು ತಿಳಿಯಿರಿ.
ಸ್ಮಾಲ್ ಬಾಕ್ಸ್ ಇಂಡಿಯಾ ಹಿನ್ನೆಲೆ ಏನು?
ಸ್ಮಾಲ್ ಬಾಕ್ಸ್ ಇಂಡಿಯಾ ಸಂಸ್ಥೆಯು ಈ ಹಿಂದೆ ಗುಜರಾತ್, ದೆಹಲಿ ಮಹಾನಗರ ಪಾಲಿಕೆ, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಲ್ಲಿ ಸಮೀಕ್ಷೆಗಳನ್ನು ನಡೆಸಿತ್ತು. ಈ ಸಮೀಕ್ಷೆಗಳು ನಿಖರ ಫಲಿತಾಂಶವನ್ನು ನೀಡಿದ್ದವು. ಸ್ಮಾಲ್ ಬಾಕ್ಸ್ ಇಂಡಿಯಾ ಸಂಸ್ಥೆಯು ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿತ್ತು. ಹಿಮಾಚಲ ಹಾಗೂ ಕರ್ನಾಟಕದ ಫಲಿತಾಂಶಗಳನ್ನು ಸರಿಯಾಗಿ ಊಹಿಸಿತ್ತು. ಇದೇ ಸಂಸ್ಥೆಯು ಈಗ ಆಂಧ್ರ ಪ್ರದೇಶ ಚುನಾವಣಾಪೂರ್ವ ಸಮೀಕ್ಷೆಯನ್ನು ಪ್ರಕಟಿಸಿದೆ.

ಆಂಧ್ರದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಹವಾ
ಆಂಧ್ರದಲ್ಲಿ ಪ್ರಾದೇಶಿಕ ಪಕ್ಷಗಳು ರಾಜಕಾರಣದ ಮುನ್ನೆಲೆಯಲ್ಲಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿವೆ. ಜಗನ್ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಗಳ ನಡುವೆ ಪೈಪೋಟಿ ಇದೆ. ಈ ಮೂರು ಪಕ್ಷಗಳು ಆಂಧ್ರದಲ್ಲಿ ಭಾರೀ ಸದ್ದು ಮಾಡುತ್ತಿವೆ.
ಸ್ಮಾಲ್ ಬಾಕ್ಸ್ ಸಮೀಕ್ಷೆ ಹೇಳುವುದೇನು?
ಆಂಧ್ರದಲ್ಲಿ ಒಟ್ಟು 175 ವಿಧಾನಸಭಾ ಕ್ಷೇತ್ರಗಳಿವೆ. ಸ್ಮಾಲ್ ಬಾಕ್ಸ್ ಸಮೀಕ್ಷೆ ಪ್ರಕಾರ, ವೈಎಸ್‌ಆರ್ ಕಾಂಗ್ರೆಸ್‌ಗೆ ಶೇ 45 ಮತಗಳು, ಟಿಡಿಪಿಗೆ ಶೇ 43 ಮತಗಳು, ಜನಸೇನಾ ಪಕ್ಷಕ್ಕೆ ಶೇ 9 ಮತಗಳು ಹಾಗೂ ಪಕ್ಷೇತರರಿಗೆ ಶೇ 3 ಮತಗಳು ಬೀಳಲಿವೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಆಂಧ್ರದಲ್ಲಿ ಟಫ್ ಫೈಟ್ ಏರ್ಪಡುವ ಸಾಧ್ಯತೆ ಇದೆ. ಕಳೆದ ಬಾರಿಯಂತೆ ಈ ಬಾರಿಯು ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ನಡುವೆ ತೀವ್ರ ಪೈಪೋಟಿ ಏರ್ಪಡುವುದು ಗ್ಯಾರಂಟಿಯಾಗಿದೆ.
ಈ ಬಾರಿಯಾದರೂ ಮೋಡಿ ಮಾಡುವರೇ ಪವನ್ ಕಲ್ಯಾಣ್?
ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿತ್ತು. ಈ ಬಾರಿ ಉತ್ತಮ ಸಾಧನೆ ಮಾಡಬಹುದು ಎಂಬ ಮಾತುಗಳು ಕೇಳಿಬಂದಿವೆ. ಪವನ್ ಕಲ್ಯಾಣ್ ಅವರು ಯಾತ್ರೆಯನ್ನು ಕೈಗೊಂಡು ಜನರನ್ನು ಸೆಳೆಯುತ್ತಿದ್ದಾರೆ. ಆದರೆ, ಅವರನ್ನು ನೋಡಲು ಸೇರುವ ಲಕ್ಷಾಂತರ ಜನರು ಅವರ ಪಕ್ಷಕ್ಕೆ ವೋಟು ಹಾಕುವರೇ? ಎಂಬ ಪ್ರಶ್ನೆ ಮೊದಲಿನಿಂದಲೂ ಕಾಡುತ್ತಿದೆ.

ಬಿಜೆಪಿ ಜೊತೆ ಕೈಜೋಡಿಸಲು ಮುಂದಾದ ಮೂರು ಪಕ್ಷಗಳು
ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಲು ಮೂರು ಪಕ್ಷಗಳು ಮುಂದಾಗಿವೆ. ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಈಗಾಗಲೇ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ನಾಯಕ ಜಗನ್ ಮೋಹನ ರೆಡ್ಡಿ ಅವರು ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸುವ ಮೂಲಕ ಎನ್‌ಡಿಎ ಸೇರಲು ಕಾತರರಾಗಿದ್ದಾರೆ. ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಪ್ರಧಾನಿ ಮೋದಿಗೆ ನಿಕಟವರ್ತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜನಸೇನಾ ಪಕ್ಷವು ಎನ್‌ಡಿಎ ಜೊತೆ ಕೈಜೋಡಿಸಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications