Anantnag encounter; 48 ಗಂಟೆ ಬಳಿಕವೂ ಒಬ್ಬ ಯೋಧ ನಾಪತ್ತೆ
ಶ್ರೀನಗರ, ಸೆಪ್ಟೆಂಬರ್ 15; ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಗುಂಡಿನ ಕಾಳಗ ಮುಂದುವರೆದಿದೆ. ಭಾರತೀಯ ಸೇನೆಯ ಒಬ್ಬ ಯೋಧ ಇನ್ನೂ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರೆದಿದೆ.
ಅನಂತ್‌ನಾಗ್ ಜಿಲ್ಲೆಯ ಗುಡೋಲೆ ದಟ್ಟ ಅರಣ್ಯ ಪ್ರದೇಶದಲ್ಲಿ ಲಷ್ಕರ್-ಏ-ತೋಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಇದೆ. ಭದ್ರತಾ ಪಡೆಗಳು ಮಂಗಳವಾರದಿಂದ ಅವರ ಜೊತೆ ಗುಂಡಿನ ಚಕಮಕಿ ನಡೆಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಗುರುವಾರ ಇಬ್ಬರು ಉಗ್ರರನ್ನು ಸಹ ಭದ್ರತಾ ಪಡೆಗಳು ಸುತ್ತುವರೆದಿವೆ ಎಂದು ಹೇಳಿದ್ದಾರೆ. ಈ ಕಾರ್ಯಾಚರಣೆ ಆರಂಭಗೊಂಡು 48 ಗಂಟೆಗಳು ಕಳೆದಿವೆ. ಭಾರತೀಯ ಸೇನೆಯ ಒಬ್ಬ ಯೋಧ ಇನ್ನೂ ನಾಪತ್ತೆಯಾಗಿದ್ದಾರೆ. ಉಗ್ರರು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆಯೇ? ಎಂದು ಶಂಕಿಸಲಾಗಿದೆ.
ಮೂವರು ಹುತಾತ್ಮ; ಮಂಗಳವಾರ ರಾತ್ರಿ ಉಗ್ರರು ಅಡಗಿರುವ ಮಾಹಿತಿ ಇತ್ತು. ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ದೋನಕ್ ಮತ್ತು ಡಿವೈಎಸ್‌ಪಿ ಹುಮಾಯಾನ್ ಭಟ್ ಹುತಾತ್ಮರಾಗಿದ್ದರು. ಬುಧವಾರದಿಂದಲೂ ಅಡಗಿರುವ ಉಗ್ರರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡಡೆಸುತ್ತಿವೆ.
ಪೊಲೀಸರ ಪ್ರಕಾರ ಭದ್ರತಾ ಪಡೆಗಳು ಸುತ್ತುವರೆದಿರುವ ಉಗ್ರರಲ್ಲಿ ಒಬ್ಬ ಉಜೈರ್ ಖಾನ್. ಉಗ್ರರು ಅಡಗಿರುವ ಪ್ರದೇಶ ದಟ್ಟವಾದ ಅರಣ್ಯವಾದ ಕಾರಣ ಅವರ ವಿರುದ್ಧದ ಕಾರ್ಯಾಚರಣೆ ನಿಧಾನವಾಗುತ್ತಿದೆ.
ಉಗ್ರರು ಅಡಗಿರುವ ಪ್ರದೇಶದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು. ಆದ್ದರಿಂದ ಕೆಲವು ಕಾಲ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ನಿಲ್ಲಿಸಿದ್ದವು. ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಮೇಜರ್ ಜನರಲ್ ಬಲಬೀರ್ ಸಿಂಗ್ ಉಗ್ರರ ವಿರುದ್ಧದ ಕಾರ್ಯಾಚರಣೆಯ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಾ, ಸೂಚನೆಗಳನ್ನು ನೀಡುತ್ತಿದ್ದಾರೆ.
ಅಡಗಿರುವ ಪ್ರದೇಶದಿಂದ ಬೇರೆ ಕಡೆ ಉಗ್ರರು ಸಾಗದಂತೆ ಕಾರ್ಯತಂತ್ರ ರೂಪಿಸಿ ಅವರನ್ನು ಸುತ್ತುವರೆಯಲಾಗಿದೆ. ಕಾರ್ಯಾಚರಣೆ ಎಷ್ಟು ಹೊತ್ತು ಸಾಗಲಿದೆ? ಎಂದು ಅಂದಾಜಿಸಿಲ್ಲ. ಮೂವರು ಉಗ್ರರಲ್ಲಿ ಒಬ್ಬನ ಹತ್ಯೆಯಾಗಿದೆ ಎಂದು ಶಂಕಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದೊಡ್ಡ ಉಗ್ರರ ದಾಳಿ ಇದಾಗಿದೆ. ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಆಶಿಶ್ ದೋನಕ್ ಪಾರ್ಥಿವ ಶರೀರವನ್ನು ಹರ್ಯಾಣಕ್ಕೆ ತರಲಾಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಮತ್ತೊಬ್ಬ ಯೋಧ ಹುತಾತ್ಮ; ಅನಂತ್‌ನಾಗ್ ಜಿಲ್ಲೆಯ ಗುಡೋಲೆ ಪ್ರದೇಶದಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯೋಧ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಶುಕ್ರವಾರವೂ ಸಹ ಉಗ್ರರ ಜೊತೆಗಿನ ಗುಂಡಿನ ಕಾಳಗ ಮುಂದುವರೆದಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಯೋಧನ ಗುರುತು ಇನ್ನೂ ಪತ್ತೆಯಾಗಬೇಕಿದೆ.












Click it and Unblock the Notifications