"ಇದು ಭಾರತದ ಜನರು ನನಗೆ ಕೊಟ್ಟದ್ದು.." ದೆಹಲಿ ಬಂಗಲೆ ಖಾಲಿ ಮಾಡುವಾಗ ಭಾವುಕರಾದ ರಾಹುಲ್ ಗಾಂಧಿ
ದೆಹಲಿ ಏಪ್ರಿಲ್ 22: ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ರಾಹುಲ್ ಗಾಂಧಿ ಖಾಲಿ ಮಾಡಿದ್ದು, ಕೆಲ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.
2019ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ, ಕರ್ನಾಟಕದ ಕೋಲಾರದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಮೋದಿ ಎಂಬ ಹೆಸರಿನ ಎಲ್ಲರೂ ಒಂದೇ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

ಈ ಕುರಿತು ಬಿಜೆಪಿ ಶಾಸಕರೊಬ್ಬರು ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ತರುವಾಯ ರಾಹುಲ್ ಗಾಂಧಿ ಅವರು ಪ್ರಜಾಪ್ರತಿನಿಧಿ ಕಾಯ್ದೆಯಡಿಯಲ್ಲಿ ತಮ್ಮ ಸಂಸದ ಸ್ಥಾನವನ್ನು ಕಳೆದುಕೊಂಡಿದ್ದಾರೆ. ರಾಹುಲ್ ವಿರುದ್ಧ ಕ್ರಮ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ರೀತಿ ರಾಹುಲ್ ಕೋರ್ಟ್‌ಗೆ ಮನವಿ ಕೂಡ ಮಾಡಿದ್ದಾರೆ. ಮೇಲ್ಮನವಿಯಲ್ಲೂ ರಾಹುಲ್ ಗಾಂಧಿ ವಿರುದ್ಧ ತೀರ್ಪು ಬಂದಿರುವುದರಿಂದ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ.
ಸಂಸದ ಸ್ಥಾನ ಕಳೆದುಕೊಂಡಿರುವ ರಾಹುಲ್ ಗಾಂಧಿ ಅವರು ನಿಯಮಾನುಸಾರ ಸಂಸದರಿಗಾಗಿ ಸರ್ಕಾರಿ ಬಂಗಲೆಯಲ್ಲಿ ವಾಸ ಮಾಡುವಂತಿಲ್ಲ. ಅವರು ವಾಸವಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಕಳೆದ ತಿಂಗಳು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಕಳುಹಿಸಲಾಗಿತ್ತು. ನೋಟಿಸ್ ಬಂದಾಗಿನಿಂದ ರಾಹುಲ್ ಗಾಂಧಿಗೆ ಸೇರಿದ ವಸ್ತುಗಳನ್ನು ಅಲ್ಲಿಂದ ತೆಗೆದುಕೊಂಡು ಹೋಗಲಾಗುತ್ತಿದೆ.

ಸರ್ಕಾರಿ ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ
ಇಂದು ಅಂದರೆ ಏಪ್ರಿಲ್ 22ರೊಳಗೆ ಅಧಿಕೃತ ನಿವಾಸ ಖಾಲಿ ಮಾಡುವಂತೆ ತಿಳಿಸಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಇಂದು ಮನೆ ಖಾಲಿ ಮಾಡಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆಸಿ ವೇಣುಗೋಪಾಲ್ ಅವರ ಸಮ್ಮುಖದಲ್ಲಿ ರಾಹುಲ್ ಗಾಂಧಿ ಅವರು ತುಘಲಕ್ ಲೇನ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯ ಕೀಗಳನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, "ಭಾರತದ ಜನರು 19 ವರ್ಷಗಳಿಂದ ಈ ಮನೆಯನ್ನು ನನಗೆ ನೀಡಿದ್ದಾರೆ, ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಆದರೆ ಆ ಮನೆಯನ್ನು ನನ್ನಿಂದ ಕಸಿದುಕೊಳ್ಳಲಾಗಿದೆ. ಅದಕ್ಕೆ ಬೆಲೆ ನೀಡಬೇಕಾಗುತ್ತದೆ. ನನ್ನ ವಿರುದ್ಧ ಮಾಡಿದ ಪಿತೂರಿಗೆ ತಕ್ಕ ಪಾಠ ಕಲಿಸಲು ನಾನು ಸಿದ್ಧನಿದ್ದೇನೆ'' ಎಂದು ರಾಹುಲ್ ಗಾಂಧಿ ಹೇಳಿದರು.
2005 ರಲ್ಲಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ, ರಾಹುಲ್ ಗಾಂಧಿಗೆ 12 ತುಘಲಕ್ ಲೇನ್ ಬಂಗಲೆಯನ್ನು ಮಂಜೂರು ಮಾಡಲಾಯಿತು. ಕಳೆದ 19 ವರ್ಷಗಳಿಂದ ರಾಹುಲ್ ಗಾಂಧಿ ಅಲ್ಲಿ ವಾಸವಾಗಿದ್ದರು. ಅವರನ್ನು ಅನರ್ಹಗೊಳಿಸಿದ ಬಳಿಕ ಬಂಗಲೆ ತೆರವು ಮಾಡಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು.
ರಾಹುಲ್ ಗಾಂಧಿ ಈಗ ಎಲ್ಲಿ ವಾಸ ಮಾಡುತ್ತಾರೆ?
ಇದೀಗ ರಾಹುಲ್ ಗಾಂಧಿ ಮನೆ ಖಾಲಿ ಮಾಡಿದ್ದು, ಮುಂದೆ ಎಲ್ಲಿ ಉಳಿಯುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಕಾಂಗ್ರೆಸ್ ಮಾಜಿ ಅಧ್ಯಕ್ಷೆ (ಸೋನಿಯಾ ಗಾಂಧಿ) ಅವರ 10 ಜನ್‌ಪಥ್ ನಿವಾಸದಲ್ಲಿ ಕೆಲಕಾಲ ಉಳಿದು ನಂತರ ಏನು ಮಾಡಬಹುದೆಂದು ನೋಡುತ್ತೇನೆ' ಎಂದರು.
ಪ್ರಿಯಾಂಕಾ ಗಾಂಧಿ ಕೂಡ "ನನ್ನ ಸಹೋದರ ಹೇಳುತ್ತಿರುವುದು ನಿಜ. ಅವರು ಸರ್ಕಾರದ ಬಗ್ಗೆ ಸತ್ಯವನ್ನು ಮಾತನಾಡಿದ್ದಾರೆ, ಅದಕ್ಕಾಗಿಯೇ ಇದೆಲ್ಲ ಆಗುತ್ತಿದೆ. ಆದರೆ ಅವರು ತುಂಬಾ ಧೈರ್ಯಶಾಲಿ, ಅವರು ಎಂದಿಗೂ ಹೆದರುವುದಿಲ್ಲ, ಅವರು ತಮ್ಮ ಹೋರಾಟವನ್ನು ಮುಂದುವರಿಸುತ್ತಾರೆ" ಎಂದು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ''ರಾಹುಲ್ ಗಾಂಧಿ ಮನೆಬಿಟ್ಟು ಹೋಗುವುದು ಸಮಸ್ಯೆಯಲ್ಲ.. ಆದರೆ ಮೋದಿ ಸರಕಾರ ರಾಹುಲ್ ಗಾಂಧಿಯವರನ್ನು ರಾಜಕೀಯ ಸೇಡಿನ ಕೃತ್ಯವೆಂಬಂತೆ ಟಾರ್ಗೆಟ್ ಮಾಡಿದೆ. ಇದನ್ನು ಈಗ ಪ್ರತಿಯೊಬ್ಬ ಭಾರತೀಯನೂ ಗಮನಿಸುತ್ತಿದ್ದಾರೆ. ಎರಡು ವರ್ಷ ಜೈಲು ಶಿಕ್ಷೆ, ತಕ್ಷಣದ ಅನರ್ಹತೆ. ಕೂಡಲೇ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿರುವುದನ್ನು ಗಮನಿಸುತ್ತಿದ್ದಾರೆ'' ಎಂದರು.












Click it and Unblock the Notifications