ಒಂದು ದೇಶ, ಒಂದೇ ಭಾಷೆ: ಅಮಿತ್ ಶಾ ವಿವಾದ
ನವದೆಹಲಿ, ಸೆಪ್ಟೆಂಬರ್ 14: ಹಿಂದಿ ಹೇರಿಕೆಯ ವಿರುದ್ಧ ಕರ್ನಾಟಕ ಸೇರಿದಂತೆ ಭಾರತದ ಹಲವು ಪ್ರದೇಶಗಳಲ್ಲಿ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿರುವುದರ ನಡುವೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಏಕಭಾಷಾ ಸೂತ್ರದ ಬಗ್ಗೆ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಪ್ರತಿ ಸೆ. 14ರಂದು 'ಹಿಂದಿ ದಿವಸ್' ಆಚರಿಸಲಾಗುತ್ತಿದ್ದು, ಅದರ ಪ್ರಯುಕ್ತ ಅಮಿತ್ ಶಾ ಶನಿವಾರ ಮಾಡಿರುವ ಟ್ವೀಟ್ ಕಿಡಿ ಹೊತ್ತಿಸಿದೆ. ವಿವಿಧತೆಯಲ್ಲಿ ಏಕತೆಯ ಹೆಮ್ಮೆ ಹೊಂದಿರುವ ಭಾರತದ ಬಹುತ್ವ ಸಂಸ್ಕೃತಿಗೆ ಧಕ್ಕೆ ತರುವಂತೆ ಅಮಿತ್ ಶಾ ಅವರು ಒಂದು ದೇಶ, ಒಂದೇ ಭಾಷೆಯ ಬಗ್ಗೆ ಒಲವು ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಇಂದು ಹಿಂದಿ ದಿವಸ. ನಮ್ಮ ಮಾತೃಭಾಷೆಯ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಬಾಪು ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಕನಸನ್ನು ನನಸಾಗಿಸಲು ಹಿಂದಿಯನ್ನು ಒಂದೇ ಭಾಷೆಯನ್ನು ಬಳಸಬೇಕು' ಎಂದು ಅಮಿತ್ ಶಾ ಹೇಳಿದ್ದಾರೆ.

ದೇಶವನ್ನು ಒಗ್ಗೂಡಿಸುವ ಭಾಷೆ
ಭಾರತವನ್ನು ಒಂದುಗೂಡಿಸುವ ಸಾಮರ್ಥ್ಯ ಹಿಂದಿ ಭಾಷೆಗೆ ಇದೆ. ಜಾಗತಿಕವಾಗಿ ಭಾರತವನ್ನು ಪ್ರತಿನಿಧಿಸಲು ಒಂದು ಭಾಷೆಯನ್ನು ಹೊಂದುವ ಅಗತ್ಯವಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 'ಭಾರತವು ವಿಭಿನ್ನ ಭಾಷೆಗಳ ದೇಶ. ಪ್ರತಿ ಭಾಷೆಗೂ ತನ್ನದೇ ಆದ ಮಹತ್ವವಿದೆ. ಆದರೆ ಜಾಗತಿಕವಾಗಿ ಭಾರತದ ಅಸ್ಮಿತೆಯಾಗುವಂತಹ ಭಾಷೆಯೊಂದನ್ನು ಹೊಂದುವ ಅಗತ್ಯವಿದೆ. ಒಂದು ಭಾಷೆಯಿಂದ ದೇಶವನ್ನು ಇಂದು ಒಗ್ಗೂಡಿಸಲು ಸಾಧ್ಯವಿದೆ ಎಂದರೆ ಅದು ಹಿಂದಿ' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಕನ್ನಡದಂತೆಯೇ ಒಂದು ಭಾಷೆ
ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ, ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು-ತಪ್ಪುಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು. ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡು-ಕೊಳ್ಳುವಿಕೆಯಿಂದ ಬೆಳೆಯುತ್ತದೆ. ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ. ಹಿಂದಿ ದಿವಸದ ಆಚರಣೆಗೆ ನನ್ನ ವಿರೋಧವೂ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಭಾಷಾ ದಿವಸ ಯಾವಾಗ ಆಚರಿಸುತ್ತೀರಿ?
ಇಂದು ದೇಶದಾದ್ಯಂತ ಕೇಂದ್ರ ಸರ್ಕಾರ 'ಹಿಂದಿ ದಿವಸ್' ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿಯವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಹುತ್ವ ಭಾರತದ ಜೀವಾಳ
ಅಮಿತ್ ಶಾ ಅವರೇ, ಭಾರತ ಜಾಗತಿಕ ಮಟ್ಟದಲ್ಲಿ ಯಾವತ್ತೂ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯಿಂದ ಗುರುತಿಸಿಕೊಂಡ ದೇಶವಲ್ಲ. ಬಹು ಭಾಷೆ, ಬಹು ಧರ್ಮ, ಬಹು ಸಂಸ್ಕೃತಿಯಂತಹ ವೈವಿಧ್ಯತೆಯೇ ಬಹುತ್ವ ಭಾರತದ ಜೀವಾಳ. ಆರ್.ಎಸ್.ಎಸ್ ಹಿಡನ್ ಅಜೆಂಡಾ ಜಾರಿಗೆ, ಕೀಳುಮಟ್ಟದ ರಾಜಕೀಯಕ್ಕೆ, ದೇಶದ ಅಸ್ತಿತ್ವವನ್ನೇ ಬಲಿ ಕೊಡಬಾರದು ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.












Click it and Unblock the Notifications