ಭ್ರಷ್ಟಾಚಾರ ಸಾಬೀತು: ಸಿಬಿಐ ಸ್ಥಾನದಿಂದ ಅಲೋಕ್ ವರ್ಮಾ ವಜಾ
ನವದೆಹಲಿ, ಜನವರಿ 10:ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿದೆ.
ಅಲೋಕ್ ವರ್ಮಾ ವಿರುದ್ಧರ ಭ್ರಷ್ಟಾಚಾರ ಆರೋಪದ ತನಿಖೆ ನಡೆಸಿದ ಸಿವಿಸಿ, ಅಲೋಕ್ ವರ್ಮಾ ಅವರ ಮೇಲಿನ ಆರೋಪ ಸಾಬೀತಾಗಿದೆ ಎಂದು ಗುರುವಾರ ಸಂಜೆ ಪ್ರಕಟಿಸಿದೆ.ಸಿಬಿಐನ ಮಧ್ಯಂತರ ಮುಖ್ಯಸ್ಥರಾಗಿ ನೇಮಕವಾಗಿದ್ದ ಎಂ. ನಾಗೇಶ್ವರ ರಾವ್ ಅವರು ಸಿಬಿಐ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.
ಆಯ್ಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ ಕೆ ಸಿಕ್ರಿ, ಪ್ರಧಾನಿ ನರೇಂದ್ರ ಮೊದಿ ಮತ್ತು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿದ್ದರು.

ಸಿಬಿಐ ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಬಗ್ಗೆ ಸಮಿತಿ ವಿಚಾರಣೆ ನಡೆಸಿದ್ದು, ಅಲೋಕ್ ವರ್ಮಾ ಅವರನ್ನು ವಜಾಗೊಳಿಸಬೇಕೋ, ಬೇಡವೋ ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರ ಸಮಿತಿಗಿತ್ತು.
ಆಯ್ಕೆ ಸಮಿತಿಯಲ್ಲಿ ವಿಪಕ್ಷ ನಾಯಕ ಮತ್ತು ಪ್ರಧಾನಿ ಅವರೊಂದಿಗೆ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಇರಬೇಕಾಗುತ್ತದೆ.
ಅಲೋಕ್ ವರ್ಮಾ ವಿರುದ್ಧ 9 ಆರೋಪ, ಸಿವಿಸಿ ತನಿಖೆ ಹೇಗೆ?
ಆದರೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕರಾಗಿ ಮುಂದುವರಿಯುವಂತೆ ತೀರ್ಪು ನೀಡಿದ ನ್ಯಾಯಪೀಠದಲ್ಲಿ ಇದ್ದಿದ್ದರಿಂದ ಅವರೇ ಸ್ವತಃ ಆಯ್ಕೆ ಸಮಿತಿಯಿಂದ ಹೊರಗುಳಿದಿದ್ದಾರೆ. ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿದ ಕೇಂದ್ರದ ನಿರ್ಧಾರ ತಪ್ಪು ಎಂದು ಈ ಪೀಠ ಹೇಳಿತ್ತು.

ಹೈದರಾಬಾದ್ ಮೂಲದ ಉದ್ಯಮಿಯೊಬ್ಬರಿಂದ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಲಂಚ ಸ್ವೀಕರಿಸಿದ್ದರು ಎಂದು ನಿರ್ದೇಶಕ ಅಲೋಕ್ ವರ್ಮಾ ದೂರಿದ್ದರು. ಅಲೋಕ್ ವರ್ಮಾ ಅವರ ಮೇಲೂ ಆಸ್ಥಾನ ಲಂಚದ ಆರೋಪ ಮಾಡಿದ್ದರು. ಈ ಬೆಳವಣಿಗೆಯ ನಂತರ ವರ್ಮಾ ಮತ್ತು ಆಸ್ಥಾನ ಇಬ್ಬರನ್ನೂ ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿ, ನಾಗೇಶ್ವರ್ ರಾವ್ ಎಂಬುವವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಿತ್ತು.
ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನ ಅವರನ್ನು ಕಡ್ಡಾಯ ರಜೆಯ ಮೇಲೆ ಕೇಂದ್ರ ಸರ್ಕಾರ ಕಳಿಸಿತ್ತು. ಆದರೆ ಸಿಬಿಐ ಯಲ್ಲಿ ಆಯಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳಿಸುವ ಅಥವಾ ವಜಾ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ.
ಸುಪ್ರೀಂಕೋರ್ಟಿನ ಆದೇಶದ ಬಳಿಕ ಮೂರು ತಿಂಗಳ ಬಳಿಕ ಮತ್ತೊಮ್ಮೆ ತಮ್ಮ ಕಚೇರಿಗೆ ಅಲೋಕ್ ವರ್ಮಾ ಮರಳಿದ್ದರು. ಈಗ ಸಿಬಿಐ ಸ್ಥಾನದಿಂದ ವಜಾಗೊಂಡಿರುವ ಅಲೋಕ್ ವರ್ಮಾ ಅವರನ್ನು ಅಗ್ನಿಶಾಮಕದಳದ ಡಿಜಿಯಾಗಿ ನೇಮಿಸಲಾಗಿದೆ.












Click it and Unblock the Notifications