ದಕ್ಷಿಣ ಭಾರತದಲ್ಲೇ 30% "ಡೆಲ್ಟಾ ಪ್ಲಸ್" ಪ್ರಕರಣಗಳು ಪತ್ತೆ
ನವದೆಹಲಿ, ಜೂನ್ 25: ದೇಶದಲ್ಲಿ ಹೊಸದಾಗಿ ಪತ್ತೆಯಾಗಿರುವ "ಡೆಲ್ಟಾ ಪ್ಲಸ್" ರೂಪಾಂತರದ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ರೂಪಾಂತರ ಹೆಚ್ಚು ವೇಗಿಯಾಗಿದ್ದು, ಅಪಾಯಕಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಈವರೆಗೆ ದೇಶದಲ್ಲಿ ಐವತ್ತೊಂದು ಡೆಲ್ಟಾ ಪ್ಲಸ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಸುಮಾರು 30% ಪ್ರಕರಣಗಳು ದಕ್ಷಿಣ ಭಾರತದಲ್ಲೇ ಕಂಡುಬಂದಿದೆ ಎಂದು ಕೇಂದ್ರ ಮಾಹಿತಿ ನೀಡಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಕರ್ನಾಟಕದಂಥ ದಕ್ಷಿಣ ಭಾರತ ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದೆ. ಮುಂದೆ ಓದಿ...

ತಮಿಳುನಾಡಿನಲ್ಲಿ ಹೆಚ್ಚಿನ ಪ್ರಕರಣಗಳು
ಭಾರತದಲ್ಲಿ ತಮಿಳುನಾಡು ಅತಿ ಹೆಚ್ಚು ಡೆಲ್ಟಾ ಪ್ಲಸ್ ಪ್ರಕರಣಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ. ತಮಿಳುನಾಡಿನಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ಮೂರು, ಆಂಧ್ರ ಪ್ರದೇಶದಲ್ಲಿ ಒಂದು ಹಾಗೂ ಕರ್ನಾಟಕದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಆತಂಕ
ದೇಶದಲ್ಲೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ದೇಶ ಕಂಡ ಎರಡು ಕೊರೊನಾ ಅಲೆಗಳಲ್ಲಿಯೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಮಹಾರಾಷ್ಟ್ರ ಈ ಅಲೆಗಳಲ್ಲಿ ಅತಿ ಕೆಟ್ಟ ಪರಿಣಾಮಕ್ಕೆ ಒಳಗಾಗಿತ್ತು. ಇದೀಗ ಈ ಡೆಲ್ಟಾ ಪ್ಲಸ್ ಪ್ರಕರಣಗಳು ಕೂಡ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದು, ಮೂರನೇ ಅಲೆ ಎಚ್ಚರಿಕೆಯನ್ನು ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಮತ್ತೆ ನಿರ್ಬಂಧ
ಈ ಡೆಲ್ಟಾ ಪ್ಲಸ್ ರೂಪಾಂತರದಿಂದ ಮಹಾರಾಷ್ಟ್ರದಲ್ಲಿ ಮೂರನೇ ಅಲೆ ಎಚ್ಚರಿಕೆಯನ್ನು ಆರೋಗ್ಯ ಇಲಾಖೆ ನೀಡುತ್ತಿದ್ದಂತೆ ಸಿಎಂ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಭೆ ನಡೆಸಿ, ಮಹಾರಾಷ್ಟ್ರದಲ್ಲಿ ನಿರ್ಬಂಧಗಳನ್ನು ಮತ್ತೆ ಕಠಿಣಗೊಳಿಸಲಾಗುತ್ತಿದೆ.

ಡೆಲ್ಟಾ ಪ್ಲಸ್ ತಂದಿರುವ ಆತಂಕ
ಮಹಾರಾಷ್ಟ್ರದ ಹೊರತಾಗಿ ಮಧ್ಯಪ್ರದೇಶ, ಪಂಜಾಬ್, ಗುಜರಾತ್, ಒಡಿಶಾ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಆಂಧ್ರ ಹಾಗೂ ಕರ್ನಾಟಕದಲ್ಲಿ ಈ ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡುಬಂದಿವೆ.
ಭಾರತದಲ್ಲಿ ಮೊದಲು ಡೆಲ್ಟಾ (B.1.617.2) ರೂಪಾಂತರ ಪತ್ತೆಯಾಗಿ, ದೇಶದಲ್ಲಿ ಕಳವಳಕಾರಿ ಪರಿಸ್ಥಿತಿಗೆ ಕಾರಣವಾಯಿತು. ಕೊರೊನಾ ಎರಡನೇ ಅಲೆಯಲ್ಲಿ ಏರಿದ ಸಾವು ನೋವಿಗೂ ಈ ರೂಪಾಂತರವೇ ಕಾರಣವಾಗಿತ್ತು. ಇದೀಗ ಇದೇ ರೂಪಾಂತರದಿಂದ ಮತ್ತೊಂದು ರೂಪಾಂತರ ಸೃಷ್ಟಿಯಾಗಿದೆ. ಅದೇ ಡೆಲ್ಟಾ ಪ್ಲಸ್ (B.1.617.2.1/(AY.1). ಈ ಸೋಂಕು ಪತ್ತೆಯಾದ ಆರಂಭಿಕ ದಿನಗಳಲ್ಲಿ ಇದು ಕಳವಳಕಾರಿ ಸೋಂಕು ಎಂದು ಪರಿಗಣಿಸಿರಲಿಲ್ಲ. ಇದೀಗ ಆರೋಗ್ಯ ಇಲಾಖೆ ಇದು ಕಳವಳಕಾರಿ ಸೋಂಕು ಎಂದು ಘೋಷಿಸಿದೆ.












Click it and Unblock the Notifications