ಶಿಕ್ಷೆಯಿಲ್ಲದೆ ಒಂದೇ.. ಒಂದು ಕೊಲೆಗೆ ಅವಕಾಶ ಮಾಡಿಕೊಡಿ ಎಂದು ರಾಷ್ಟ್ರಪತಿಗೆ ಪತ್ರ
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದಬ್ಬಾಳಿಕೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇಂತಹ ಪ್ರಕರಣಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ಎನ್‌ಸಿಪಿ ಪಕ್ಷದ ಮಹಿಳಾ ವಿಭಾಗವು ಕಠಿಣ ನಿರ್ಧಾರ ತೆಗೆದುಕೊಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವೊಂದನ್ನು ಬರೆದಿದೆ. ಇದೀಗ ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗಾದ್ರೆ ಅದರಲ್ಲೇನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಿಸುವ ಉದ್ಧೇಶದಿಂದ ಮುಂಬೈ ಎನ್‌ಸಿಪಿ ಪಕ್ಷದ ಮಹಿಳಾ ವಿಭಾಗವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ. ಇದರಲ್ಲಿ ಅಪರಾಧಿಗಳಲ್ಲಿರುವ ದಬ್ಬಾಳಿಕೆಯ ಮನಸ್ಥಿತಿ ಮತ್ತು ಅತ್ಯಾಚಾರ ಪ್ರವೃತ್ತಿಯನ್ನು ಕೊಲ್ಲಲು ಒಂದು ಕೊಲೆಗೆ ಶಿಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಈ ಪತ್ರವನ್ನು ಬರೆಯಲಾಗಿದೆ. ಇದರಲ್ಲಿ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಖಡ್ಸೆ ಅವರು ಮಹಿಳೆಯರ ಮೇಲಿನ ಅಪರಾಧಗಳಲ್ಲಿನ ಹೆಚ್ಚಳವನ್ನು ಗುರುತಿಸಿದ್ದಾರೆ. ಮುಂಬೈನಲ್ಲಿ 12 ವರ್ಷದ ಬಾಲಕಿಯ ಮೇಲೆ ಇತ್ತೀಚೆಗಷ್ಟೇ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉದಾಹರಣೆಯಾಗಿ ನೀಡಿರುವ ಅವರು, ಇಂತಹ ಪ್ರಕರಣಗಳ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಎಲ್ಲಾ ಮಹಿಳೆಯರ ಪರ ಒಂದು ಕೊಲೆ ಮಾಡಲು ಶಿಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ರೋಹಿಣಿ ಖಡ್ಸೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಈ ಮೂಲಕ ಪರೋಕ್ಷವಾಗಿ ಟೀಕಿಸಿರುವ ಅವರು, ಕಾನೂನು ಸುವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದ್ದಾರೆ.
ಭಾರತವು ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶವಾಗಿದೆ. ಅಪಹರಣ ಮತ್ತು ಕೌಟುಂಬಿಕ ದೌರ್ಜನ್ಯ ಸೇರಿದಂತೆ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾವು ದಬ್ಬಾಳಿಕೆಯ ಮನಸ್ಥಿತಿ, ಅತ್ಯಾಚಾರ ಪ್ರವೃತ್ತಿ, ಕಾನೂನು ಮತ್ತು ಸುವ್ಯವಸ್ಥೆಯ ಅದಕ್ಷತೆಯನ್ನು ಕೊಲ್ಲಲು ಬಯಸುತ್ತೇವೆ. ಗಂಭೀರವಾಗಿ ಯೋಚಿಸಿದ ಬಳಿಕ ನಮ್ಮ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ರೋಹಿಣಿ ಖಡ್ಸೆ ಹೇಳಿದ್ದಾರೆ.
ಖಡ್ಸೆ ಅವರ ಹೇಳಿಕೆಗೆ ಶಿವಸೇನಾ ಸಚಿವೆ ಗುಲಾಬ್ರಾವ್ ಪಾಟೀಲ್ ಅವರು ಪ್ರತಿಕ್ರಿಯಿಸಿ, ಯಾರನ್ನು ಕೊಲ್ಲಬೇಕೆಂದು ಬಯಸುತ್ತಾರೆಂದು ಅವರು ಹೇಳಬೇಕು. ಅವರ ಪಕ್ಷದ ಸಹೋದ್ಯೋಗಿ ಮನೀಷಾ ಕಾಯಂಡೆ ಮಾತ್ರ ಖಡ್ಸೆ ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಖಡ್ಸೆ ಬಹುಶಃ ಕೆಲವು ಜನರಲ್ಲಿರುವ ಕೆಲವು ಪ್ರವೃತ್ತಿಗಳನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಿರಬಹುದು ಎಂದು ಹೇಳಿರುವ ಕಾಯಂಡೆ, ಇತ್ತೀಚಿನ ಘಟನೆಗಳೇ ಅವರನ್ನು ಹೀಗೆ ಹೇಳುವಂತೆ ಪ್ರೇರೇಪಿಸಿರಬಹುದು ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಮಹಿಳಾ ಸುರಕ್ಷತೆಯ ವಿಷಯವು ಪ್ರಚಲಿತವಾಗಿದೆ. ಇತ್ತೀಚೆಗೆ ಕೇಂದ್ರ ಸಚಿವೆ ರಕ್ಷಾ ಖಡ್ಸೆ ಅವರ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಖಡ್ಸೆ ಸ್ವತಃ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದರು.












Click it and Unblock the Notifications