ಕಾಸರಗೋಡು ಕನ್ನಡಿಗರಿಗೆ ಕೇರಳ ಸರ್ಕಾರದಿಂದ ಅನ್ಯಾಯ: ಆರೋಪ
ಕಾಸರಗೋಡಿನ ಕನ್ನಡಿಗರ ವಿಚಾರದಲ್ಲಿ ಕೇರಳ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವೊಂದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ಸರ್ಕಾರವು ಕೇರಳದ ವಿಚಾರದಲ್ಲಿ ಉದಾರ ನೀತಿಯನ್ನು ಅನುಸರಿಸಿಕೊಂಡು ಬರುತ್ತಿದೆ. ಆದರೆ, ಕೇರಳ ಸರ್ಕಾರ ಮಾತ್ರ ಕನ್ನಡಿಗರಿಗೆ ವಿನಾಯಿತಿ ನೀಡುವುದಕ್ಕೆ ಹಿಂದೇಟು ಹಾಕುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಕರ್ನಾಟಕ - ಕೇರಳ ಉಭಯ ರಾಜ್ಯಗಳ ನಡುವೆ ಸಂಬಂಧ ಉತ್ತಮವಾಗಿದೆಯಾದರೂ, ಕೇರಳ ಸರ್ಕಾರ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಕೇರಳ ಸರ್ಕಾರ ತೆರೆಮರೆಯ ಕಸರತ್ತನ್ನು ಮುಂದುವರಿಸಿದೆ. ಇದರ ನಡುವೆ ಕಾಸರಗೋಡಿನಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎನ್ನುವ ಆರೋಪವಿದೆ. ರಾಜ್ಯಗಳ ವಿಭಜನೆಯ ಸಂದರ್ಭದಲ್ಲಿ ಕಾಸರಗೋಡನ್ನು ಕಳೆದುಕೊಂಡ ನೋವು ಕನ್ನಡಿಗರಲ್ಲಿ ಇದ್ದೇ ಇದೆ. ಇದೀಗ ಅಲ್ಲಿನ ಕನ್ನಡಿಗರಿಗೆ ಕೇರಳ ಸರ್ಕಾರ ಪ್ರಾಮುಖ್ಯತೆ ನೀಡುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ.
ಕೇರಳದ ಕಾಸರಗೋಡಿನ ಕನ್ನಡಿಗರ ವಿಚಾರ ಮತ್ತೆ ಚರ್ಚೆಯ ಮುನ್ನಲೆಗೆ ಬಂದಿದೆ. ಕೇರಳದಲ್ಲಿ ಕನ್ನಡಿಗ ಉದ್ಯೋಗಿಗಳಿಗೆ ಸಿಗುತ್ತಿದ್ದ ಉದ್ಯೋಗ ಹಾಗೂ ಕೆಲವು ನಿರ್ದಿಷ್ಟ ವಿಶೇಷ ಸೇವೆಗಳಿಗೆ ಕೇರಳ ಸರ್ಕಾರವು ಪರೋಕ್ಷವಾಗಿ ಕತ್ತರಿಯನ್ನು ಹಾಕಿದೆ ಎಂದು ಹೇಳಲಾಗುತ್ತಿದೆ. ಕೇರಳ ಸರ್ಕಾರದ ನೂತನ ನಿರ್ಧಾರವು ಭಾರೀ ಚರ್ಚೆ ಹಾಗೂ ವಿರೋಧಕ್ಕೆ ಕಾರಣವಾಗಿದೆ. ಕೇರಳ ಸರ್ಕಾರ ಕಾಸರಗೋಡಿನಲ್ಲಿ ಕನ್ನಡಿಗರನ್ನು ನಡೆಸಿಕೊಳ್ಳುತ್ತಿರುವ ವಿಧಾನಕ್ಕೆ ಕರ್ನಾಟಕದ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ಆದರೆ ಈ ಸಂಬಂಧ ರಾಜ್ಯ ಸರ್ಕಾರವು ಇಲ್ಲಿಯ ವರೆಗೆ ಯಾವುದೇ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ. ರಾಜ್ಯ ಸರ್ಕಾರ ಈ ವಿಚಾರವಾಗಿ ಮಾತನಾಡದೆ ಇರುವುದು ಸಹ ಚರ್ಚೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಕೇರಳ ಸರ್ಕಾರದ ಹೊಸ ಆದೇಶ ಹಾಗೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು "ಉದಯವಾಣಿ" ವರದಿ ಮಾಡಿದೆ.
ಕನ್ನಡಿಗ ಸರ್ಕಾರಿ ಸಿಬ್ಬಂದಿ ನೇಮಕಕ್ಕೆ ಬ್ರೇಕ್!
ಕೇರಳದ ಕಾಸರಗೋಡಿನಲ್ಲಿ ಹೆಚ್ಚು ಕನ್ನಡಿಗರು ಇದ್ದಾರೆ. 2011 ಜನಗಣತಿಯ ಪ್ರಕಾರ ಕೇರಳದ ಕಾಸರಗೋಡಿನಲ್ಲಿ 4.2% ರಷ್ಟು ಜನ ಕನ್ನಡವನ್ನು ಅವರ ಮಾತೃಭಾಷೆಯನ್ನಾಗಿ ಮಾತನಾಡುತ್ತಾರೆ. ಕಳೆದ 10 ವರ್ಷದ ಅವಧಿಯಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಿದೆ. ಆದರೆ ಕೇರಳ ಕಾಸರಗೋಡು ಭಾಗದಲ್ಲಿ ಕನ್ನಡಿಗರಿಗೆ ಸಿಗಬೇಕಾದ ಸೇವೆಯಲ್ಲಿ ವ್ಯತ್ಯಾಸವಾಗುತ್ತಿದೆ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ.
ಕೇರಳ ಸರ್ಕಾರವು ಕನ್ನಡಿಗ / ಕನ್ನಡತಿ ಸರ್ಕಾರಿ ಸಿಬ್ಬಂದಿ ಕಡಿತಕ್ಕೆ ಮುಂದಾಗಿದೆ. ಇಲ್ಲಿ ಶೇಕಡ 50ರಷ್ಟು ಹುದ್ದೆಗಳನ್ನು ಕನ್ನಡ ಬರುವವರಿಗೆ ನೀಡಬೇಕು ಎಂದು ಈ ಹಿಂದೆಯೇ ಕೇರಳ ಸರ್ಕಾರವು ಆದೇಶ ಮಾಡಿತ್ತಾದರೂ, ಅದನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಹೊಸದಾಗಿ ಆದೇಶವೊಂದನ್ನು ಮಾಡಿದ್ದು. ಕನ್ನಡ ಬರುವ ಸಿಬ್ಬಂದಿ ನೇಮಕಾತಿ ಸಂಖ್ಯೆಯನ್ನು ಕನಿಷ್ಠ ಸಂಖ್ಯೆಗೆ ಇಳಿಸುವುದಕ್ಕೆ ಅಲ್ಲಿನ ಸರ್ಕಾರ ಆದೇಶ ಹೊರಡಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡಿಗರಿಗೆ ಕನ್ನಡದಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇದೆಯಾದರೂ, ಪರಿಶೀಲನೆ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಕೆಲವು ಕನ್ನಡಿಗರು ಬೇರೆ ಭಾಷೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕೇರಳ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ ಎಂದೂ ಹೇಳಲಾಗುತ್ತಿದೆ.
ಬಿ.ವೈ ವಿಜಯೇಂದ್ರ ಖಂಡನೆ: ಇನ್ನು ಕೇರಳ ಸರ್ಕಾರದ ನಿರ್ಧಾರಕ್ಕೆ ರಾಜ್ಯ ವಿರೋಧ ಪಕ್ಷ ಖಂಡನೆ ವ್ಯಕ್ತಪಡಿಸಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕನ್ನಡ ಬಲ್ಲ ಸಿಬ್ಬಂದಿ ನೇಮಕದ ಸಂಖ್ಯೆ ಕನಿಷ್ಠಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಮಾಡಿರುವ ಆದೇಶವು ಖಂಡನೀಯ. ನೆಲ, ಜಲ, ಭಾಷೆ ಹಾಗೂ ಗಡಿ ವಿಷಯಗಳು ಸೇರಿದಂತೆ ಒಂದಿಲ್ಲೊಂದು ಕಾರಣಕ್ಕೆ ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧ ನಿರಂತರ ಗೊಂದಲ ಸೃಷ್ಟಿಸುವ ಪ್ರಯತ್ನವನ್ನು ಕೇರಳ ಸರ್ಕಾರ ಮಾಡುತ್ತಿದೆ. ಕಾಸರಗೋಡಿನಲ್ಲಿ ಕನ್ನಡ ಸಿಬ್ಬಂದಿ ಕಡಿತಕ್ಕೆ ಮುಂದಾಗುವ ಮೂಲಕ ಎಂದಿನಂತೆ ತನ್ನ ಕನ್ನಡ ವಿರೋಧಿ ನಿಲುವು ತಾಳಿದೆ ಎಂದು ದೂರಿದ್ದಾರೆ.
ಅಲ್ಲದೆ ಮುಂದುವರಿದು ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾದ ಆನೆ ಕರ್ನಾಟಕದ್ದು ಎಂಬ ಸಬೂಬು ನೀಡಿ ಪರಿಹಾರ ಕೊಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಕನ್ನಡ, ಕನ್ನಡಿಗರಿಗೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಬದ್ಧತೆಯಿಂದ ಮಧ್ಯ ಪ್ರದೇಶಿಸಿ ಸಮಸ್ಯೆ ಬಗೆಹರಿಸಲಿ ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications