ನರೇಂದ್ರ ಮೋದಿ ಪಾತ್ರದಲ್ಲಿ 'ಕಿಲಾಡಿ' ಅಕ್ಷಯ್
ಮುಂಬೈ, ಜೂನ್ 21: ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ 'ಕಿಲಾಡಿಗಳ ಕಿಲಾಡಿ' ಎನಿಸಿಕೊಂಡಿರುವ ನಟ ಅಕ್ಷಯ್ ಕುಮಾರ್ ಅವರು ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಮುಂಬೈನ ಸಿನಿಗಲ್ಲಿಗಳಲ್ಲಿ ಸುತ್ತಾಡುತ್ತಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತ ಚಿತ್ರ, ತುರ್ತು ಪರಿಸ್ಥಿತಿ ಕುರಿತ ಮತ್ತೊಂದು ಚಿತ್ರದ ಬಗ್ಗೆ ಚರ್ಚೆ ನಡೆಯವ ಸಂದರ್ಭದಲ್ಲೇ ನರೇಂದ್ರ ಮೋದಿ ಕುರಿತ ಚಿತ್ರದ ಬಗ್ಗೆ ಸುದ್ದಿ ಹಬ್ಬಿದೆ.

ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದಿರುವ ನಟ ಅಕ್ಷಯ್ ಅವರಿಗೆ ಮೋದಿ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಡಿಎನ್ಎ ವರದಿ ಮಾಡಿದೆ. ಈ ಹಿಂದೆ ಈ ಪಾತ್ರಕ್ಕಾಗಿ ಪರೇಶ್ ರಾವಲ್, ಅನುಪಮ್ ಖೇರ್, ವಿಕ್ಟರ್ ಬ್ಯಾನರ್ಜಿ ಮುಂತಾದವರ ಹೆಸರು ಕೇಳಿ ಬಂದಿತ್ತು.
ಮೋದಿ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅವರು ನಟಿಸಿದರೆ ಹೆಚ್ಚು ಪರಿಣಾಮಕಾರಿ ಚಿತ್ರ ಮೂಡಿ ಬರಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಚಿತ್ರರಂಗಕ್ಕೆ ಕಾಲಿಡುವ ಮುನ್ನ ಕರಾಟೆ ಕಲೆ ಹೇಳಿಕೊಡುವ ಶಿಕ್ಷಕರಾಗಿ ಅನುಭವ ಹೊಂದಿರುವ ಅಕ್ಷಯ್ ಕುಮಾರ್ ಅವರು ಜ್ಯೂಡೋ ಹಾಗೂ ಕರಾಟೆ ಕ್ರೀಡೆಗಳ ಅಭಿವೃದ್ಧಿಗೆ ಶ್ರಮಿಸಲು ಪಣ ತೊಟ್ಟಿದ್ದಾರೆ. ಕ್ರೀಡಾ, ಯೋಗ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶಕ್ಕೆ ಇದು ಪೂರಕವಾಗಲಿದೆ ಎಂದು ಮೋದಿ ಅವರು ಅಕ್ಷಯ್ ಕುಮಾರ್ ರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದಾಗ ಹೇಳಿದ್ದರು. ಆಗಿನ್ನೂ ಮೋದಿ ಅವರು ಪ್ರಧಾನಿಯಾಗಿರಲಿಲ್ಲ.

ನಂತರದ ದಿನಗಳಲ್ಲಿ ಹೆಚ್ಚೆಚ್ಚು ಸಾಮಾಜಿಕ ಕಳಕಳಿ ಕಾರ್ಯಕ್ರಮ, ಕೇಂದ್ರ ಸರ್ಕಾರದ ಯೋಜನೆಗೆ ಅನುಗುಣವಾಗಿ ಸಮಾಜ ಸೇವೆ ಮಾಡುತ್ತಾ ಬಂದಿರುವ ಅಕ್ಷಯ್ ಕುಮಾರ್ ಒಬ್ಬ ಮಿ. ಕ್ಲೀನ್ ಎಂದು ಶತ್ರುಘ್ನ ಸಿನ್ಹಾ ಹೊಗಳಿದ್ದಾರೆ.
ಭಾರತ್ ಕೆ ವೀರ್ ವೇದಿಕೆ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ಅಕ್ಷಯ್ ಕುಮಾರ್ ಅವರು ನೆರವಾಗುತ್ತಿದ್ದಾರೆ. ಈ ವೇದಿಕೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದು ವಿಶೇಷ.
ಅಕ್ಷಯ್ ಅವರ ಮುಂದಿನ ಚಿತ್ರ ಟಾಯ್ಲೆಟ್- ಏಕ್ ಪ್ರೇಮ್ ಕಥಾ ಕೂಡಾ ಪ್ರಧಾನಿ ಅವರ ಸ್ವಚ್ಛ ಭಾರತ್ ಯೋಜನೆಯ ಮೇಲೆ ಆಧಾರಿಸಿದ ಚಿತ್ರಕಥೆ ಹೊಂದಿದೆ.












Click it and Unblock the Notifications