ನಮಗೂ ಸಚಿವ ಸ್ಥಾನ ಬೇಕು, 3 ತಿಂಗಳು ಕಾಯುತ್ತೇವೆ: ಅಜಿತ್ ಪವಾರ್
ನವದೆಹಲಿ, ಜೂನ್ 09: ಲೋಕಸಭೆ ಚುನಾವಣೆ 2024ರಲ್ಲಿ ಜಯಗಳಿಸಿರುವ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಭಾನುವಾರ ಸಂಜೆ 7.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮೋದಿ 3.0 ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಮೈತ್ರಿಕೂಟದ ಪಕ್ಷಗಳು ಬೇಡಿಕೆ ಇಟ್ಟಿವೆ. ಎನ್‌ಸಿಪಿ ನಾಯಕ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಶಿವಸೇನೆ ರೀತಿ ನಮಗೂ ಕೇಂದ್ರ ಸಚಿವ ಸ್ಥಾನ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಭಾನುವಾರ ಮಾತನಾಡಿದ ಅಜಿತ್ ಪವಾರ್, "ನಾನು ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗುತ್ತೇವೆ. ನಾನು ಕೆಲವು ದಿನಗಳ ಕಾಲ ಕಾಯಲು ತಯಾರಾಗಿದ್ದೇವೆ. ಆದರೆ ಕೇಂದ್ರ ಸಂಪುಟದಲ್ಲಿ ನಮಗೆ ಸಂಪುಟ ದರ್ಜೆಯ ಸಚಿವ ಸ್ಥಾನ ಬೇಕು" ಎಂದರು.
"ಸದ್ಯ ನಾವು ಒಂದು ಲೋಕಸಭೆ, ಒಂದು ರಾಜ್ಯಸಭೆ ಸದಸ್ಯರನ್ನು ಒಳಗೊಂಡಿದ್ದೇವೆ. ಇನ್ನು 2-3 ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ನಮ್ಮ ಸದಸ್ಯ ಬಲ 3ಕ್ಕೆ ಏರಿಕೆಯಾಗುತ್ತದೆ. ಆಗ ನಮಗೆ ಕೇಂದ್ರ ಸಂಪುಟದಲ್ಲಿ ಸಂಪುಟ ದರ್ಜೆಯ ಒಂದು ಸಚಿವ ಸ್ಥಾನ ಬೇಕು" ಎಂದು ಅಜಿತ್ ಪವಾರ್ ಹೇಳಿದರು.
"ಪ್ರಫುಲ್ ಪಟೇಲ್ ಕೇಂದ್ರ ಸಚಿವರಾಗಿ ಕೆಲಸ ಮಾಡಿದವರು. ನಾವು ಅವರನ್ನು ಈಗ ರಾಜ್ಯದಲ್ಲಿ ಸಚಿವರನ್ನಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾವು ಅವರಿಗೆ (ಬಿಜೆಪಿ) ತಿಳಿಸಿದ್ದೇವೆ. ನಾವು ಕೆಲವು ದಿನ ಕಾಯಲು ಸಿದ್ಧ. ಆದರೆ ನಂತರ ನಮಗೆ ಕೇಂದ್ರ ಸಂಪುಟ ದರ್ಜೆಯ ಸಚಿವ ಸ್ಥಾನ ಬೇಕು" ಎಂದು ಅಜಿತ್ ಪವಾರ್ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಮೈತ್ರಿ: ಮಹಾರಾಷ್ಟ್ರ ರಾಜ್ಯದಲ್ಲಿ ಎನ್‌ಸಿಪಿ, ಶಿವಸೇನೆ, ಬಿಜೆಪಿ ಸೇರಿಕೊಂಡು ಸರ್ಕಾರ ರಚನೆ ಮಾಡಿವೆ. ಅಜಿತ್ ಪವಾರ್ ಸದ್ಯ ರಾಜ್ಯದ ಉಪಮುಖ್ಯಮಂತ್ರಿ. ಈ ವರ್ಷದ ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಆದ್ದರಿಂದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ 2024ರ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ. ಅಜಿತ್ ಪವಾರ್ ಬಣ ಕಣಕ್ಕಿಳಿಸಿದ್ದ 4 ಸ್ಥಾನಗಳಲ್ಲಿ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸೀಟು ಹಂಚಿಕೆ ವಿಷಯದಲ್ಲಿ ಮಹಾಯುತಿ ಮೈತ್ರಿಕೂಟದಿಂದ ಸರಿಯಾದ ಪಾಲು ಪಡೆಯಬೇಕು ಎಂದು ಎನ್‌ಸಿಪಿ ನಾಯಕ ಅಜಿತ್ ಪವಾರ್ ಈಗಲೇ ಧ್ವನಿ ಎತ್ತಿದ್ದಾರೆ. ಇದರ ನಡುವೆಯೇ ಈಗ ಕೇಂದ್ರ ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟಿದ್ದಾರೆ.
ಮಹಾರಾಷ್ಟ್ರ ರಾಜ್ಯದಲ್ಲಿ 53 ಎನ್‌ಸಿಪಿ ಶಾಸಕರಿದ್ದಾರೆ. ಇವರ ಪೈಕಿ 30 ಶಾಸಕರು ಅಜಿತ್ ಪವಾರ್ ಅವರೊಂದಿಗಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಎನ್‌ಸಿಪಿಗೆ ಕೇಂದ್ರದ ಜೊತೆ ರಾಜ್ಯದಲ್ಲಿಯೂ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ.
ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಅಜಿತ್ ಪವಾರ್ ಎನ್‌ಡಿಎ ಮೈತ್ರಿಕೂಟದಲ್ಲಿ ಎನ್‌ಸಿಪಿಯನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಅಮಿತ್ ಶಾ ಭೇಟಿಯಾಗಲು ದೆಹಲಿಗೆ ತೆರಳಿದ್ದರು.
ದೆಹಲಿಯಲ್ಲಿ ಮಾತನಾಡಿದ್ದ ಅವರು, "ಬಹುತೇಕ 300 ಸಂಸದರು ಇದ್ದಾರೆ. ಹಾಗಾಗಿ ಎನ್‌ಡಿಎ ಮೈತ್ರಿಕೂಟ ಖಂಡಿತ ಪೂರ್ಣಾವಧಿ ಪೂರೈಸುತ್ತದೆ. ಎಲ್ಲವೂ ಸರಿ ಹೋಗಲಿದೆ. ಚಿಂತಿಸುವ ಅಗತ್ಯವಿಲ್ಲ" ಎಂದು ಹೇಳಿದ್ದರು. ಆದರೆ ಅಮಿತ್ ಶಾ ಭೇಟಿ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ.












Click it and Unblock the Notifications