ಕೋವಿಡ್ ಸೋಂಕಿದ್ದರೂ ಹಾರಾಟ ನಡೆಸಿದ ಏರ್ ಇಂಡಿಯಾ ಸಿಬ್ಬಂದಿ!
ನವದೆಹಲಿ, ಡಿಸೆಂಬರ್ 6: ಕೋವಿಡ್ ಸೋಂಕು ತಗುಲಿದ್ದರೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕ್ಯಾಬಿನ್ ಸಿಬ್ಬಂದಿ ವಿಮಾನದಲ್ಲಿ ಹಾರಾಟ ನಡೆಸಿದ ಘಟನೆ ನಡೆದಿದೆ. ಈ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಏರ್ ಇಂಡಿಯಾ ಹೇಳಿದೆ.
44 ವರ್ಷದ ಏರ್ ಇಂಡಿಯಾದ ಮಹಿಳಾ ಸಿಬ್ಭಂದಿ ನವೆಂಬರ್ 12ರಂದು ಆರ್‌ಟಿಪಿಆರ್ ಪರೀಕ್ಷೆಗೆ ಒಳಪಟ್ಟಿದ್ದಳು. ಮರುದಿನ ಆಕೆಯ ಕೋವಿಡ್ ವರದಿ ಪಾಸಿಟಿವ್ ಎಂದು ಬಂದಿತ್ತು. ಆದರೂ ಸಹ ಆಕೆ ವಿಮಾನದಲ್ಲಿ ಹಾರಾಟ ನಡೆಸಿದ್ದಾಳೆ.
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭಿಸುವ 1 ಗಂಟೆ ಮೊದಲು ಸಿಬ್ಬಂದಿಗೆ ಸೋಂಕು ಇರುವುದು ಖಚಿತವಾಗಿತ್ತು. ಆದರೂ ಸಹ ಆಕೆಯ ಹಾರಾಟಕ್ಕೆ ಅವಕಾಶ ಕೊಟ್ಟಿರುವುದು ಚರ್ಚೆಗೆ ಕಾರಣವಾಗಿದೆ.

ನವೆಂಬರ್ 13ರಂದು ಸಿಬ್ಬಂದಿ ದೆಹಲಿ-ಮಧುರೈ ನಡುವಿನ ವಿಮಾನದಲ್ಲಿ ಹಾರಾಟ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ನವೆಂಬರ್ 14ರಂದು ಆಕೆ ವಾಪಸ್ ಆದ ಮೇಲೆ ಕ್ವಾರಂಟೈನ್‌ಗೆ ಕಳಿಸಲಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.
ವಿದೇಶಕ್ಕೆ ಹಾರಾಟ ನಡೆಸುವ ವಿಮಾನ ವಾಪಸ್ ಆದ ತಕ್ಷಣ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ದೇಶಿಯ ವಿಮಾನದ ಸಿಬ್ಬಂದಿಗೆ ಪ್ರತಿದಿನ ಪರೀಕ್ಷೆ ಮಾಡುವುದಿಲ್ಲ. ನವೆಂಬರ್ 14ರಂದು ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಕಳಿಸಲಾಗಿದೆ. ಆ ವಿಮಾನದಲ್ಲಿದ್ದ ಬೇರೆ ಯಾವ ಸಿಬ್ಬಂದಿಗೂ ಸೋಂಕು ತಗುಲಿಲ್ಲ ಎಂದು ಏರ್ ಇಂಡಿಯಾ ಹೇಳಿದೆ.
ಮಹಿಳಾ ಸಿಬ್ಬಂದಿ ಆರ್‌ಟಿಪಿಆರ್ ಪರೀಕ್ಷೆಗೆ ಒಳಗಾಗಿದ್ದಳು ಎಂಬ ಸಂಗತಿಯನ್ನೇ ಮುಚ್ಚಿಡಲು ಪ್ರಯತ್ನ ನಡೆಸಲಾಗಿದೆ. ಆದ್ದರಿಂದ, ಆಕೆಯ ವರದಿ ಪಾಸಿಟಿವ್ ಬಂದ ಸುದ್ದಿ ಸಹ ಬಹಿರಂಗವಾಗಿಲ್ಲ. ಪರೀಕ್ಷೆಯ ವರದಿ ಬರುವ ತನಕ ದೇಶಿಯ ವಿಮಾನದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡಲು ಅವಕಾಶವಿದೆ.
ಸಿಬ್ಬಂದಿ ಹಾರಾಟಕ್ಕೆ ಅವಕಾಶ ನೀಡುವ ಮೂಲಕ ಏರ್ ಇಂಡಿಯಾ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದೆ ಎಂಬ ಆರೋಪವೂ ಇದೆ. ಈ ಬಗ್ಗೆ ತನಿಖೆ ನಡೆದು ವರದಿ ಬಂದ ಬಳಿಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications