ಉಗ್ರರು ವಶ, ಭಾರತದ ಮೊಟ್ಟ ಮೊದಲ 'ರಿಮೋಟ್ ಬಾಂಬ್' ಠುಸ್
ನವದೆಹಲಿ, ಡಿಸೆಂಬರ್ 28: ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರಿಮೋಟ್ ಬಾಂಬ್ ಪ್ರಯೋಗ ಮಾಡಲು ಯತ್ನಿಸಿದ್ದ ಇಸ್ಲಾಮಿಕ್ ಸ್ಟೇಟ್ ಪ್ರೇರಿತ ಉಗ್ರರ ಯೋಜನೆ ಠುಸ್ ಆಗಿದೆ.
ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹಾಗೂ ಉತ್ತರ ಪ್ರದೇಶ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಡೆಸಿದ ದಾಳಿಯಲ್ಲಿ ಈ ರಿಮೋಟ್ ಬಾಂಬ್ ಹಾಗೂ ಅದರ ಬಗ್ಗೆ ಪ್ರಾತ್ಯಕ್ಷಿಕೆ ವಿಡಿಯೋ ಕೂಡಾ ಸಿಕ್ಕಿದೆ.

ಹಿಂದುಗಳ ಪವಿತ್ರ ಸ್ಥಳಗಳು, ಕುಂಭಮೇಳ ಮುಂತಾದ ಜಾತ್ರೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಾರು ಬಾಂಬ್ ಬಳಸಿ ದೊಡ್ಡ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಿದ್ದನ್ನು ವಿಫಲಗೊಳಿಸಲಾಗಿದೆ.
46 ಸೆಕೆಂಡುಗಳ ವಿಡಿಯೋ ಕ್ಲಿಪ್ ನಲ್ಲಿ ಆರೋಪಿಯೊಬ್ಬ, ಇದು ಭಾರತದಲ್ಲಿ ಪ್ರಯೋಗಿಸಲ್ಪಡುವ ಮೊದಲ ರಿಮೋಟ್ ಬಾಂಬ್ ಎಂದು ವಿವರಿಸುತ್ತಾನೆ.
ಡಮ್ಮಿ ಬಾಂಬ್ ವೊಂದನ್ನು ವೈರುಗಳ ಮೂಲಕ ಸರ್ಕಿಟ್ ಗಳಿಗೆ ಜೋಡಿಸಲಾಗಿದೆ. ಬಟನ್ ಒತ್ತಿದ ನಂತರ ಎಲ್ಲರೂ 'ಅಹ್ಮೆದುಲ್ಲಾ, ಅಹ್ಮೆದುಲ್ಲಾ ಎಂದು ಕೈತಟ್ಟುತ್ತಾರೆ. ಕೊನೆಯಲ್ಲಿ ಮಹಿಳೆಯೊಬ್ಬಳು ಅವರೆಲ್ಲರೂ ಸಂತಸಪಡುತ್ತಾರೆ ಎಂದು ಹೇಳುತ್ತಾಳೆ.
ಎನ್ಐಎ ತಂಡ ನಡೆಸಿದ ದಾಳಿ ಸಂದರ್ಭದಲ್ಲಿ 25 ಕೆಜಿ ಸ್ಫೋಟಕ ಸಾಮಾಗ್ರಿಗಳಾದ ಪೋಟಾಷಿಯಂ ನೈಟ್ರೇಟ್, ಅಮೋನಿಯಂ ನೈಟ್ರೇಟ್, ಸಲ್ಫರ್, ಸಕ್ಕರೆ, 12 ಪಿಸ್ತೂಲ್, 150 ಸಜೀವ ಗುಂಡುಗಳು, ರಾಕೆಟ್ ಲಾಂಚರ್, 112 ಅಲಾರಂ ಕ್ಲಾಕ್, ಮೊಬೈಲ್ ಫೋನ್ ಸರ್ಕಿಟ್, ರಿಮೋಟ್ ಕಂಟ್ರೋಲ್ ಕಾರ್ ಟ್ರಿಗರಿಂಗ್ ಸ್ವಿಚ್, ವೈರ್ ಲೆಸ್ ಡಿಜಿಟಲ್ ಡೋರ್ ಬೆಲ್, 91 ಮೊಬೈಲ್ ಫೋನ್, 134 ಸಿಮ್ ಕಾರ್ಡ್, 3 ಲ್ಯಾಪ್ ಟಾಪ್, ಕತ್ತಿ, ಚಾಕು, ಐಎಸ್ಐಎಸ್ ಕುರಿತ ಸಾಹಿತ್ಯ, 7.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications