'ಬೆಳಗ್ಗೆ ಹೇಳಿದ್ರೂ ಜಗನ್ನಾಥ ದೇವರು ಮೋದಿ ಭಕ್ತ! ರಾತ್ರಿ ಆಗುತ್ತಿದ್ದಂತೆ ಯೂ ಟರ್ನ್'
ಸದ್ಯ ಭಾರತದಲ್ಲಿ ಚುನಾವಣೆಗಳ ಬಿಸಿ ಜೋರಾಗಿದೆ. ಈಗಾಗಲೇ ದೇಶದಲ್ಲಿ ಐದು ಹಂತದ ಚುನಾವಣೆಗಳು ನಡೆದಿದ್ದು, ಇನ್ನು ಎರಡು ಹಂತದ ಚುನಾವಣೆಗಳು ಬಾಕಿ ಇವೆ. ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಈ ನಡುವೆ ರಾಜಕೀಯ ಪಕ್ಷಗಳ ಮುಖಂಡರು ಮಾತಿನ ಚಕಮಕಿ ನಡೆಯುತ್ತಿದೆ.
ಬಿಜೆಪಿಯ ಅಭ್ಯರ್ಥಿಯೊಬ್ಬ ನೀಡಿದ ಹೇಳಿಕೆ ರಾಜಕೀಯ ರಂಗದಲ್ಲಿ ಸಖತ್ ಸದ್ದು ಮಾಡಿದೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರ ಸೋಮವಾರ ಭಗವಾನ್ ಜಗನ್ನಾಥನನ್ನು ಪ್ರಧಾನಿ ನರೇಂದ್ರ ಮೋದಿಯ ಭಕ್ತ ಎಂದು ಬಣ್ಣಿಸಿದ್ದಾರೆ. ಈ ಹೇಳಿಕೆ ರಾಜಕೀಯ ರಂಗದಲ್ಲಿ ಸಖತ್ ಸದ್ದು ಮಾಡ್ತಾ ಇದ್ದಂತೆ ತಮ್ಮ ತಪ್ಪಿನ ಅರಿವು ಅವರಿಗೆ ಆಗಿದ್ದು, ಯೂ ಟರ್ನ್ ಹೊಡೆದಿದ್ದಾರೆ.

ಈ ಬಗ್ಗೆ ರಾತ್ರಿ ಅವರಿಗೆ ಪಶ್ಚಾತಾಪವಾಗಿದೆ. ಹೀಗಾಗಿ ಕ್ಷಮೆಯಾಚನೆಯ ವೀಡಿಯೊವನ್ನು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. "ಇಂದು, ಮಹಾಪ್ರಭು ಶ್ರೀ ಜಗನ್ನಾಥ್ ಜೀ ಅವರ ಬಗ್ಗೆ ನಾನು ಮಾಡಿದ ತಪ್ಪಿಗೆ ನನ್ನ ಆತ್ಮಸಾಕ್ಷಿಗೆ ತುಂಬಾ ನೋವಾಗಿದೆ. ನಾನು ಮಹಾಪ್ರಭು ಶ್ರೀ ಜಗನ್ನಾಥ ಜಿಯವರ ಪಾದಗಳಿಗೆ ತಲೆಬಾಗಿ ಕ್ಷಮೆಯಾಚನೆ ಮಾಡಿಕೊಂಡು ಬೇಡಿಕೊಳ್ಳುವೆ. ಪಶ್ಚಾತ್ತಾಪಪಟ್ಟು ನನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಮುಂದಿನ 3 ದಿನಗಳ ಕಾಲ ಉಪವಾಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇಡೀ ವಿಷಯ ಏನು?
ಸೋಮವಾರ, ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರ ಒರಿಯಾ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಭಗವಾನ್ ಜಗನ್ನಾಥನನ್ನು 'ಮೋದಿ ಭಕ್ತ' ಎಂದು ಬಣ್ಣಿಸಿದರು, ನಂತರ ರಾಜಕೀಯ ಬಿಸಿಯಾಯಿತು ಮತ್ತು ವಿರೋಧ ಪಕ್ಷದ ನಾಯಕ ಈ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದರು. ನಾನು ಆಕಸ್ಮಿಕವಾಗಿ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದೇನೆ. ಕೆಲವೊಮ್ಮೆ ಟಂಗ್ ಸ್ಲಿಪ್ ಆಗುತ್ತದೆ ಎಂದು ನಿಮಗೆ ತಿಳಿದಿದೆ, ಆದ್ದರಿಂದ ಅದನ್ನು ಸಮಸ್ಯೆಯಾಗಿ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಕಾಂಗ್ರೆಸ್ ಕಿಡಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಕೂಡ ಬಿಜೆಪಿ ನಾಯಕರ ಹೇಳಿಕೆಯನ್ನು ಟೀಕಿಸಿದ್ದಾರೆ. ಖರ್ಗೆ ಹೇಳಿದರು- ಅಧಿಕಾರದ ಅಮಲಿನಲ್ಲಿರುವ ಬಿಜೆಪಿ ನಮ್ಮ ದೇವರನ್ನೂ ಬಿಡುವುದಿಲ್ಲ. ಜೂನ್ 4 ರಂದು ಸಾರ್ವಜನಿಕರು ತಮ್ಮ ದುರಹಂಕಾರವನ್ನು ಕೊನೆಗೊಳಿಸುತ್ತಾರೆ.
ನವೀನ್ ಪಟ್ನಾಯಕ್ ಹೇಳಿದ್ದೇನು?
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಾಮಾಜಿಕ ಮಾಧ್ಯಮದಲ್ಲಿ ' ಭಗವಾನ್ ಜಗನ್ನಾಥ ಮಹಾಪ್ರಭು ಬ್ರಹ್ಮಾಂಡದ ಪ್ರಭು. ಮಹಾಪ್ರಭುಗಳನ್ನು ಯಾವುದೇ ಮಾನವ ಭಕ್ತ ಎಂದು ಕರೆಯುವುದು ದೇವರಿಗೆ ಮಾಡುವ ಅವಮಾನ. ಇದು ಕೋಟ್ಯಂತರ ಜಗನ್ನಾಥ ಭಕ್ತರ ಮತ್ತು ಒಡಿಯಾ ಜನರ ನಂಬಿಕೆಗೆ ಧಕ್ಕೆ ತಂದಿದೆ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications