ಚುನಾವಣೆ 2022: ಮಣಿಪುರದಲ್ಲಿ ವಿವಾದಿತ AFSPA ಕಾಯ್ದೆ ವಿಸ್ತರಣೆ
2022 ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಣಿಪುರದಲ್ಲಿ ಈ ನಾಗರಿಕರ ಹತ್ಯೆ ವಿಚಾರವು ಭಾರಿ ಸದ್ದು ಮಾಡಿದೆ. ಚುನಾವಣಾ ತಯಾರಿಯಲ್ಲಿರುವ ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) 1958 ರ ರದ್ದತಿಯು ಪ್ರಮುಖ ಚುನಾವಣಾ ವಿಚಾರ ಆಗಿದೆ. ವಿವಾದ ನಡುವೆ AFSPA ಕಾಯ್ದೆ ಇನ್ನೊಂದು ವರ್ಷಕ್ಕೆ ವಿಸ್ತರಣೆ ಮಾಡಿದೆ. ಆದರೆ, ರಾಜಧಾನಿ ಇಂಫಾಲವನ್ನು ಕಾಯ್ದೆಯಿಂದ ಹೊರಗಿಡಲಾಗಿದೆ.
ಈ ಹಿಂದೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ರಾಜ್ಯದಲ್ಲಿ AFSPA ಯನ್ನು ಭಾಗಶಃ ಹಿಂತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದ್ದರು, ಇದನ್ನು ಕಾಂಗ್ರೆಸ್ ಪಕ್ಷವು ಮುಕ್ತವಾಗಿ ಸ್ವಾಗತಿಸಿತ್ತು.
ನಾಗಾಲ್ಯಾಂಡ್‌ನಲ್ಲಿ AFSPA ಕಾಯ್ದೆ ವಿಸ್ತರಣೆ
ಡಿಸೆಂಬರ್‌ನಲ್ಲಿ ನಾಗಾಲ್ಯಾಂಡ್‌ನಲ್ಲಿ ಕಾಯಿದೆಯನ್ನು ಇನ್ನೂ 6 ತಿಂಗಳ ಅವಧಿಗೆ ವಿಸ್ತರಿಸಲಾಯಿತು. ಗೆಜೆಟ್ ಅಧಿಸೂಚನೆಯ ಪ್ರಕಾರ, ಇಡೀ ನಾಗಾಲ್ಯಾಂಡ್ "ಗೊಂದಲಭರಿತ ಮತ್ತು ಅಪಾಯಕಾರಿ" ಸ್ಥಿತಿಯಲ್ಲಿರುವುದರಿಂದ ನಾಗರಿಕ ಶಕ್ತಿಯ ಸಹಾಯಕ್ಕಾಗಿ ಸಶಸ್ತ್ರ ಪಡೆಗಳ ಬಳಕೆ ಅಗತ್ಯ ಎಂದು ಗೃಹ ವ್ಯವಹಾರಗಳ ಸಚಿವಾಲಯ ತರ್ಕಿಸಿದೆ. ಅಧಿಸೂಚನೆ ಪ್ರಕಟವಾಗುತ್ತಿದ್ದಂತೆಯೇ ನಾಗಾಲ್ಯಾಂಡ್ ಹಾಗೂ ಮಣಿಪುರ ಸರ್ಕಾರದ ಸದಸ್ಯ ಎನ್‌ಪಿಎಫ್ ಕೇಂದ್ರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವವರೆಗೆ ಪ್ರಜಾಸತ್ತಾತ್ಮಕ ಆಂದೋಲನಗಳನ್ನು ನಡೆಸುವುದಾಗಿ ಘೋಷಿಸಿತ್ತು.

AFSPA ರದ್ದು ಬೇಡಿಕೆ
ಡಿಸೆಂಬರ್ 6 ರಂದು ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಭದ್ರತಾ ಪಡೆಗಳ ಹೊಂಚುದಾಳಿಯಲ್ಲಿ 6 ಕಲ್ಲಿದ್ದಲು ಗಣಿ ಕಾರ್ಮಿಕರು ಸಾವನ್ನಪ್ಪಿದ ನಂತರ AFSPA ಅನ್ನು ರದ್ದುಗೊಳಿಸುವ ಬೇಡಿಕೆಯು ಹೆಚ್ಚಾಯಿತು. ತರುವಾಯ, ಕೋಪಗೊಂಡ ಸ್ಥಳೀಯರಿಂದ ಪ್ರತಿಭಟನೆಯ ನಡುವೆಯೂ ಇನ್ನೂ 8 ನಾಗರಿಕರು ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಸಾವು. ದಂಗೆಕೋರರ ಚಲನವಲನದ ಬಗ್ಗೆ "ವಿಶ್ವಾಸಾರ್ಹ ಗುಪ್ತಚರ ಮಾಹಿತಿ" ಆಧಾರದ ಮೇಲೆ ಭದ್ರತಾ ಪಡೆಗಳ ದಾಳಿಯನ್ನು ನಡೆಸಲಾಗಿದೆ ಎಂದು ಹೇಳಿರುವ ಭಾರತೀಯ ಸೇನೆಯು ಘಟನೆ ಮತ್ತು ಅದರ ನಂತರದ ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿತ್ತು. ಈ ಘಟನೆ ಬಗ್ಗೆ ತನಿಖೆ ಜಾರಿಯಲ್ಲಿದೆ.
ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಮಣಿಪುರದಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಉತ್ತರ ಪ್ರದೇಶ ಸೇರಿ ನಾಲ್ಕು ರಾಜ್ಯಗಳು ಹೆಚ್ಚು ರಾಜಕೀಯವಾಗಿ ಸದ್ದು ಮಾಡುತ್ತಿದ್ದರೂ ಮಣಿಪುರವು ಹೆಚ್ಚು ರಾಜಕೀಯ ಸದ್ದು ಮಾಡಿರಲಿಲ್ಲ. ಆದರೆ ಈಗ ಈ ಬಿಜೆಪಿ ಆಡಳಿತ ಇರುವ ರಾಜ್ಯದ ನೆರೆ ರಾಜ್ಯ ನಾಗಾಲ್ಯಾಂಡ್‌ನಲ್ಲಿ ನಡೆದ ನಾಗರಿಕರ ಹತ್ಯೆಯು ಮಣಿಪುರದಲ್ಲಿ ಪ್ರಮುಖ ವಿಚಾರವಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿ ಇರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) 1958 ಆಗಿದೆ.

ಬಿಜೆಪಿ ಆಡಳಿತದ ಈ ಮಣಿಪುರ ರಾಜ್ಯದಲ್ಲಿ ಬಿಜೆಪಿಯ ಎರಡು ಪ್ರಮುಖ ಮಿತ್ರ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಈಗಾಗಲೇ ಎಎಫ್‌ಎಸ್‌ಪಿಎ ಅನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹ ಮಾಡಿದೆ.
ಏನಿದು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA)? ಪ್ರಮುಖವಾಗಿ ಆಂತರಿಕ ಗಲಭೆಯನ್ನು ತಡೆಯಲು ಅಸಮರ್ಥವಾಗಿರುವ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು ಇದನ್ನು ಜಾರಿಗೊಳಿಸಲಾಗಿದೆ ಎಂದು AFSPA ಕಾಯ್ದೆಯಲ್ಲಿ ಉಲ್ಲೇಖ ಮಾಡಲಾಗಿದೆ. AFSPA ಕಾಯ್ದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಹಾಗೂ ಕಾನೂನು ವಿನಾಯಿತಿಯನ್ನು ನೀಡಲಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುವ ಯಾರೊಬ್ಬರ ಮೇಲೆ ಗುಂಡು ಹಾರಿಸುವುದು, ವಾರಂಟ್ ಇಲ್ಲದೆ ಯಾರನ್ನಾದರೂ ಬಂಧಿಸುವುದು, ಯಾವುದೇ ವಾಹನ ಅಥವಾ ಹಡಗನ್ನು ನಿಲ್ಲಿಸುವುದು ಮತ್ತು ಹುಡುಕುವುದು ಮತ್ತು ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆಯನ್ನು ನಿಷೇಧಿಸುವುದು ಮೊದಲಾದ ಅಧಿಕಾರಗಳು ಇದರಲ್ಲಿ ಸೇರಿದೆ. ನಾಗರಿಕರು ಬಂದೂಕು ಹೊಂದುವುದು ಕೂಡಾ ಈ ಕಾಯ್ದೆಯಡಿಯಲ್ಲಿ ನಿಷೇಧವಾಗಿದೆ. ಹಾಗೆಯೇ ಈ ಕಾಯ್ದೆಯು ಕಾನೂನು ನಿಯೋಜಿತ ಅಧಿಕಾರಿಗಳಿಗೆ ವಿಶೇಷ ಅಧಿಕಾರವನ್ನು ಸಹ ನೀಡುತ್ತದೆ.
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) ಹೆಸರೇ ಹೇಳುವಂತೆ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರವನ್ನು ನೀಡುತ್ತದೆ. ಆದರೆ ಈ ವಿಶೇಷ ಅಧಿಕಾರದ ನೆಪದಲ್ಲಿ ಭದ್ರತಾ ಪಡೆಗಳು ಹಲವಾರು ಪ್ರದೇಶಗಳಲ್ಲಿ ನಕಲಿ ಎನ್‌ಕೌಂಟರ್ ಮಾಡಿದೆ ಹಾಗೂ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದೆ ಎಂದು ಅನೇಕ ಆರೋಪಗಳು ಕೇಳಿ ಬಂದಿದೆ.












Click it and Unblock the Notifications