Maharashtra Election 2024: ಟುಡೇಸ್ ಚಾಣಕ್ಯ ಸಮೀಕ್ಷೆ ಪ್ರಕಾರ ಈ ಪಕ್ಷಕ್ಕೆ ಭರ್ಜರಿ ಗೆಲುವು!
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡ ಹಿನ್ನೆಲೆ ನಿನ್ನೆಯೇ ವಿವಿಧ ಸಂಸ್ಥೆಗಳು ಚುನಾವಣೋತ್ತರ ಫಲಿತಾಂಶ ( exit poll) ಬಿಡುಗಡೆ ಮಾಡಿದ್ದವು. ಇಂದು ಟುಡೇಸ್ ಚಾಣಕ್ಯ (Today's Chanakya) ಸಂಸ್ಥೆ ಕೂಡ ತಡವಾಗಿ ಎಕ್ಸಿಟ್ ಪೋಲ್ ಫಲಿತಾಂಶ ರಿಲೀಸ್ ಮಾಡಿದೆ. ಈ ಸಮೀಕ್ಷೆಯಲ್ಲೂ ಬಿಜೆಪಿ ಬಹುಮತ ಪಡೆದುಕೊಂಡಿದೆ.
ಟುಡೇಸ್ ಚಾಣಕ್ಯ ನುಡಿದಿರುವ ಭವಿಷ್ಯದಂತೆ ಬಿಜೆಪಿಗೆ ಬರೋಬ್ಬರಿ 175 (11) ಸ್ಥಾನಗಳಲ್ಲಿ ಗೆಲುವು ಸಿಗಲಿದೆ. ಕಾಂಗ್ರೆಸ್ 100 (11) ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಇನ್ನು ಇತರೆ 13 (5) ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ವರದಿ ಪ್ರಕಟಿಸಿದೆ.

ಇನ್ನು ಮಹಾರಾಷ್ಟ್ರದ ಮತ ಹಂಚಿಕೆ ಗಮನಿಸಿದರೆ.. ಶೇ 45ರಷ್ಟು ಮತಗಳು ಬಿಜೆಪಿ ಪಾಲಾಗಿದೆ. ಕಾಂಗ್ರೆಸ್‌ಗೆ ಶೇ 39, ಇತರೆ ಪಕ್ಷಗಳಿಗೆ ಶೇ 16ರಷ್ಟು ಮತಗಳು ಹೋಗಿವೆ ಎಂದು ವರದಿಯಲ್ಲಿ ತಿಳಿಸಿದೆ. ಆದರೆ ನಿಖರವಾದ ಅಂಕಿಅಂಶಗಳು ಶನಿವಾರ ಅಧಿಕೃತವಾಗಿ ಹೊರಬೀಳಲಿದೆ.
ಪೀಪಲ್ ಪಲ್ಸ್ ಸಮೀಕ್ಷೆ ಹೇಳುವಂತೆ ಬಿಜೆಪಿ 102-120 ಸ್ಥಾನ ಪಡೆಯಲಿದೆ. ಶಿವಸೇನೆ (ಇಎಸ್) 42-61 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಈಗಾಗಲೇ ಬಿಜೆಪಿ ಜೊತೆಗೆ ಶಿವಸೇನೆ ಕೈಜೋಡಿಸಿದ್ದು, ಈ ಎರಡೂ ಸಂಖ್ಯೆಗಳು ಸೇರಿದರೆ ಮೈತ್ರಿ ಸರ್ಕಾರ ರಚನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗಿದೆ.

ಇನ್ನುಳಿದಂತೆ ಎನ್‌ಸಿಪಿ (ಎಪಿ) 14-25 ಸ್ಥಾನ, ಐಎನ್‌ಸಿ (ಕಾಂಗ್ರೆಸ್) 24-44, ಶಿವಸೇನಾ (ಯುಬಿಟಿ) 21-36, ಎನ್‌ಸಿಪಿ (ಎಸ್‌ಪಿ) 28-41 ಹಾಗೂ ಇತರೆ 6-12 ಸ್ಥಾನಗಳಲ್ಲಿ ಜಯ ಬಾರಿಸುವ ಸಾಧ್ಯತೆ ಇದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮ್ಯಾಜಿಕ್ ನಂಬರ್ 145. ಶಿವಸೇನಾ, ಬಿಜೆಪಿ ಹಾಗೂ ಎನ್‌ಸಿಪಿ (ಎಪಿ) ಒಳಗೊಂಡ ಮಹಾಯುತಿ ಒಕ್ಕೂಟವು 175ರಿಂದ 195 ಸ್ಥಾನಗಳನ್ನು ಪಡೆಯಲಿದ್ದು, ಮಹಾ ವಿಕಾಸ್ ಅಘಾಡಿಯು 85ರಿಂದ 112 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ.
ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಎಂವಿಎ
ನಾವು ತಾಳ್ಮೆಯಿಂದಿರಬೇಕು, ಈಗ ಯಾರ ಸರ್ಕಾರ ರಚನೆಯಾಗಲಿದೆ ಎಂದು ನಮಗೆ ತಿಳಿದಿಲ್ಲ, ಮಹಾರಾಷ್ಟ್ರದಲ್ಲಿ ಎಂವಿಎ ಸರ್ಕಾರ ರಚನೆಯಾಗುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಮೊದಲು ಸರ್ಕಾರ ರಚನೆಯಾಗಲಿ ಎಂದು ಕಾಂಗ್ರೆಸ್ ನಾಯಕ ಟಿಎಸ್ ಸಿಂಗ್ ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಂವಿಎ ಎಲ್ಲ ಕೆಲಸಗಳನ್ನು ಒಟ್ಟಿಗೆ ಮಾಡಿದೆ, ಎಲ್ಲ ನಿರ್ಧಾರಗಳನ್ನು ಒಟ್ಟಿಗೆ ತೆಗೆದುಕೊಂಡಿದೆ. ಚುನಾವಣಾ ಫಲಿತಾಂಶಗಳು ಬಂದ ನಂತರ, ಎಂವಿಎ ಪಾಲುದಾರರು ಒಟ್ಟಿಗೆ ಕುಳಿತುಕೊಳ್ಳಬೇಕು ಮತ್ತು ಪ್ರತಿ ಪಕ್ಷದ ಹೈಕಮಾಂಡ್ ಒಟ್ಟಾಗಿ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಮಹಾಯುತಿಯ ಎಲ್ಲ ನಾಯಕರು ಒಟ್ಟಿಗೆ ಕುಳಿತು ಮುಂದಿನ ಸಿಎಂ ಬಗ್ಗೆ ನಿರ್ಧರಿಸುತ್ತಾರೆ. ಇಲ್ಲಿ ಎಂದಿಗೂ ಮುಖ್ಯಮಂತ್ರಿಯಾಗಲು ನಾಯಕರ ನಡುವೆ ಪೈಪೋಟಿ ಇರಲಿಲ್ಲ. ಹೆಚ್ಚಿನ ಅಭಿವೃದ್ಧಿಗಾಗಿ ನಾವು ಸರ್ಕಾರವನ್ನು ರಚಿಸಲು ಬಯಸುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ಕೆಲಸ ಮಾಡುವುದು ನಮ್ಮ ಉದ್ದೇಶ ಎಂದು ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಹೇಳಿದ್ದಾರೆ.
ಬಿಜೆಪಿ ನಾಯಕ ಹಣ ಹಂಚಿದ್ದು ನೋಟ್ ಜಿಹಾದ್ ಅಲ್ವಾ? ಸೋಲಿನ ಭೀತಿಯಿಂದ ಮಹಾರಾಷ್ಟ್ರದಲ್ಲಿ ಹಣ, ಮದ್ಯ ಹಂಚುವ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಆರೋಪಿಸಿದ್ದಾರೆ.
ಜಾರ್ಖಂಡ್‌ನಲ್ಲಿಯೂ ನಿನ್ನೆ ವಿಧಾನಸಭೆ ಚುನಾವಣೆ ಪೂರ್ಣಗೊಂಡಿದ್ದು, ಬಹುತೇಕ ಸಂಸ್ಥೆಗಳು ಚುನಾವಣೋತ್ತರ ಫಲಿತಾಂಶ ಪ್ರಕಟಿಸಿವೆ. ಇದರಲ್ಲೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯಲಿವೆ ಎಂದೇ ಭವಿಷ್ಯ ನುಡಿದಿವೆ. ಸ್ಪಷ್ಟ ಉತ್ತರ ಶನಿವಾರ ಬಹಿರಂಗವಾಗಲಿದೆ.












Click it and Unblock the Notifications