Manmohan Singh: 'ಆಕಸ್ಮಿಕ ಪ್ರಧಾನಿ' 'ಮೌನಿ ಬಾಬಾ' ಎನ್ನುವ ಟೀಕೆಗಳ ನಡುವೆಯೂ ಭಾರತದ ಪ್ರಗತಿಗೆ ವೇಗ ತುಂಬಿದ ನಾಯಕ
ಡಾ. ಮನಮೋಹನ್ ಸಿಂಗ್, ಭಾರತದ ಮಾಜಿ ಪ್ರಧಾನಿ, ಹೆಸರಾಂತ ಅರ್ಥಶಾಸ್ತ್ರಜ್ಞ, ತಂತ್ರಜ್ಞ ಮತ್ತು ಭಾರತದ ಉದಾರೀಕೃತ ಆರ್ಥಿಕತೆಯ ವಾಸ್ತುಶಿಲ್ಪಿ ಇಂದು ನಿಧನರಾಗಿದ್ದಾರೆ. ಆರೋಗ್ಯ ಗಂಭೀರವಾದ ಕಾರಣ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಅವರಿಗೆ 92 ವರ್ಷ ವಯಸ್ಸಾಗಿತ್ತು, ದಶಕಗಳ ಕಾಲ ದೇಶದ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ ಅವರು ಭಾರತದ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.
ಹಣಕಾಸು ಸಚಿವರಾಗಿ, ಆರ್ಥಿಕ ಸಲಹೆಗಾರರಾಗಿ, ಆರ್ ಬಿಐ ಗವರ್ನರ್ ಆಗಿ ಕೆಲಸ ಮಾಡಿದ್ದ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಯನ್ನು ಅರಸಿ ಹೋದವರಲ್ಲ, ಪ್ರಧಾನಿ ಹುದ್ದೆಯೇ ಅವರನ್ನು ಹುಡುಕಿ ಬಂದಿತ್ತು. 2004ರಲ್ಲಿ ಯುಪಿಎ ಬಹುಮತ ಪಡೆದು ಅಧಿಕಾರಕ್ಕೆ ಬಂಧಾನ ಸೋನಿಯಾ ಗಾಂಧಿ ಪ್ರಧಾನಿಯಾಗುವ ಅವಕಾಶವಿತ್ತು, ಆದರೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಗೆ ಮನಮೋಹನ್ ಸಿಂಗ್‌ರ ಹೆಸರನ್ನು ಸೂಚಿಸಿದರು.

ಆಕಸ್ಮಿಕ ಪ್ರಧಾನಿಯ ಸಾಧನೆಗಳು ನೂರಾರು!
ರಿಸರ್ವ್ ಬ್ಯಾಂಕ್ ಗವರ್ನರ್, ಮಾಜಿ ಹಣಕಾಸು ಸಚಿವರು ಮತ್ತು ದಕ್ಷಿಣ ಆಯೋಗದ ಪ್ರಧಾನ ಕಾರ್ಯದರ್ಶಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಡಾ ಮನಮೋಹನ್ ಸಿಂಗ್ ಆಯ್ಕೆಯಾದಾಗ ಎಲ್ಲರೂ ಅಚ್ಚರಿಗೊಂಡಿದ್ದರು.
1991 ರ ಉದಾರೀಕರಣದ ನಂತರ ಆರ್ಥಿಕತೆಯು ಎಂದಿಗೂ ಹಿಂತಿರುಗಿ ನೋಡದಿದ್ದರೂ, ಸರಾಸರಿ ಬೆಳವಣಿಗೆ ದರವನ್ನು ಸುಮಾರು 8 ಪ್ರತಿಶತದಷ್ಟು ಉಳಿಸಿಕೊಂಡಿತ್ತು, ಮನಮೋಹನ್ ಸಿಂಗ್ 2009 ರಲ್ಲಿ ಮತ್ತೊಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡರು.
ಭಾರತ-ಯುಎಸ್ ಪರಮಾಣು ಒಪ್ಪಂದ ವಿಚಾರ ಸಾಕಷ್ಟು ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ಸಿಪಿಎಂ ಇದನ್ನು ವಿರೋಧಿಸಿ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯಿತು. ಆದರೂ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆ ಒಪ್ಪಂದದ ಬಳಿಕ 1998 ರ ಪೋಖ್ರಾನ್ 2 ಪರಮಾಣು ಪರೀಕ್ಷೆಗಳ ಐಎಇಎ ಭಾರತದ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆಗೆದುಹಾಕಿತು.
ಆಕಸ್ಮಿಕ ಪ್ರಧಾನಿ, ಮೌನಿ ಬಾಬಾ ಎನ್ನುವ ಸಾಕಷ್ಟು ಟೀಕೆಗಳಿಗೆ ಡಾ.ಮನಮೋಹನ್ ಸಿಂಗ್ ಒಳಗಾದರು. ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಅವರ ರಬ್ಬರ್ ಸ್ಟಾಂಪ್ ಇದ್ದಂತೆ ಎಂದು ಟೀಕಿಸಲಾಗಿತ್ತು. ಆದರೆ ಮನಮೋಹನ್ ಸಿಂಗ್ ಇದಕ್ಕೆಲ್ಲಾ ಉತ್ತರ ಕೊಡಲಿಲ್ಲ. ದೇಶದ ಸುಧಾರಣೆಗೆ ಹಲವು ಕ್ರಮಗಳನ್ನು ತೆಗೆದುಕೊಂಡರು. ನರೇಗಾ ಯೋಜನೆ ಅವರ ಸರ್ಕಾರದ ಪ್ರಮುಖ ಸಾಧನೆಗಳಲ್ಲೊಂದು.
ಹಗರಣಗಳ ಸರಮಾಲೆ
ಮನಮೋಹನ್ ಸಿಂಗ್ ಹೆಸರು ಯಾವುದೇ ಹಗರಣಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಅವರ ಸರ್ಕಾರದ ಅವಧಿಯಲ್ಲಿ ಹಲವು ಹಗರಣಗಳು ಸಾಕಷ್ಟು ಸುದ್ದಿಯಾದವು. ಮುಖ್ಯವಾಗಿ 2ಜಿ ಸ್ಪೆಕ್ಟ್ರಂ ಹಗರಣ, ಕಾಮನ್‌ವೆಲ್ತ್ ಗೇಮ್ಸ್ ಹಗರಣ, ಕಲ್ಲಿದ್ದಲು ಹಗರಣಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಹೋರಾಟ ಮಾಡಿದವು.
ಮನಮೋಹನ್ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರರಾದ ಸಂಜಯ ಬಾರು ಮತ್ತು ಇತರ ಕೆಲವರು ಬರೆದ ಪುಸ್ತಕಗಳಲ್ಲಿ ಮನಮೋಹನ್ ಸಿಂಗ್ ಹೆಸರಿಗಷ್ಟೇ ಪ್ರಧಾನಿಯಾಗಿದ್ದರು ಎಂದು ವಿವರಿಸಲಾಗಿತ್ತು, ಇದು ವಿಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಿತ್ತು. ಇದಕ್ಕೆಲ್ಲಾ ಪ್ರತಿಕ್ರಿಯೆ ನೀಡಿದ್ದ ಮನಮೋಹನ್ ಸಿಂಗ್ ಇತಿಹಾಸ ದಯೆ ತೋರಿಸುತ್ತದೆ ಸಮರ್ಥನೆ ನೀಡಿದ್ದರು.












Click it and Unblock the Notifications