ಲೋಕಸಭಾ ಚುನಾವಣೆಗೆ ಮುನ್ನ ಕೇಜ್ರಿವಾಲ್ ಅಚ್ಚರಿಯ ನಿರ್ಧಾರ
ರೊಹ್ಟಕ್, ಆಗಸ್ಟ್ 10: '2019 ರ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಆಮ್ ಆದ್ಮಿ ಪಕ್ಷ ವಿಪಕ್ಷಗಳ ಮೈತ್ರಿಕೂಟದೊಂದಿಗೆ ಕೈಜೋಡಿಸುವುದಿಲ್ಲ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಚ್ಚರಿಯಹೇಳಿಕೆ ನೀಡಿದ್ದಾರೆ.
"ಮಹಾಮೈತ್ರಿಕೂಟದಲ್ಲಿ ಕೈಜೋಡಿಸಿರುವ ಯಾರೂ ಈ ದೇಶದ ಅಭಿವೃದ್ಧಿಯ ಬಗ್ಗೆ ತಲೆಕೆಡಿಸಿಕೊಂಡವರಲ್ಲ" ಎಂದು ಅವರು ಹೇಳಿದ್ದಾರೆ.
ರೋಹ್ಟಕ್ ನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಕೇಜ್ರಿವಾಲ್ ಈ ಮಾತನ್ನು ಹೇಳಿದರು.
ಇಷ್ಟು ದಿನ, ಅರವಿಂದ್ ಕೇಜ್ರಿವಾಲ್ ಅವರು ಸಹ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದೊಂದಿಗೆ ಗುರುತಿಸಿಕೊಳ್ಳುತ್ತಾರೆ ಎನ್ನಲಾಗಿತ್ತು.

ಮಹಾಮೈತ್ರಿಕೂಟಕ್ಕೆ ಮೊದಲ ಹಿನ್ನಡೆ
ಕಳೆದ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅರವಿಂದ್ ಕೇಜ್ರಿವಾಲ್ ಅವರೂ ಆಗಮಿಸಿದ್ದು ನೆನಪಿರಬಹುದು. ಈ ಮೂಲಕ ತಾವೂ ಮಹಾಮೈತ್ರಿಕೂಟದೊಂದಿಗೆ ಗುರುತಿಸಿಕೊಳ್ಳುತ್ತಿರುವುದಾಗಿ ಅವರು ಸೂಚನೆ ನೀಡಿದ್ದರು. ಆದರೆ ಇದೀಗ ಈ ಮೈತ್ರಿಕೂಟದಿಂದ ಎಎಪಿ ಹೊರಗುಳಿಯಲಿದೆ ಎಂದು ಅವರೇ ಹೇಳಿದ್ದಾರೆ.

ಕಾಂಗ್ರೆಸ್ ಮೇಲೆ ಮುನಿಸು ಯಾಕೆ?
ಅಷ್ಟಕ್ಕೂ ಅರವಿಂದ್ ಕೇಜ್ರಿವಾಲ್ ಅವರಿಗೆ ಕಾಂಗ್ರೆಸ್ ಮೇಲೆ ಇದ್ದಕ್ಕಿದ್ದಂತೆ ಮುನಿಸು ಶುರುವಾಗುವುದಕ್ಕೆ ಕಾರಣವೇನು? ಆ.09ರಂದು ನಡೆದ ರಾಜ್ಯಸಭೆ ಉಪಸಭಾಪತಿ ಚುನಾವಣೆಯ ಸಂದರ್ಭದಲ್ಲಿ ಎಎಪಿಯ ಬೆಂಬಲವನ್ನು ರಾಹುಲ್ ಗಾಂಧಿ ಕೇಳಿಲ್ಲ ಎಂಬುದು ಕೇಜ್ರಿವಾಲ್ ಅವರ ಕೋಪಕ್ಕೆ ಕಾರಣವಿರಬಹುದು. "ಪ್ರಧಾನಿ ನರೇಂದ್ರ ಮೋದಿಯವರನ್ನು ತಬ್ಬಿಕೊಳ್ಳುವ ರಾಹುಲ್ ಗಾಂಧಿಯವರು ನಮ್ಮ ಬಳಿ ಬೆಂಬಲ ಕೇಳಿದರೆ ಯಾವ ತಪ್ಪೂ ಇರಲಿಲ್ಲ" ಎಂದು ಕೇಜ್ರಿವಾಲ್ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದು ಸಹ ಅದೇ ಕಾರಣಕ್ಕೆ!

ದೇಶಾಭಿವೃದ್ಧಿಯಲ್ಲಿ ಇವರ ಪಾತ್ರವಿಲ್ಲ!
ಮಹಾಮೈತ್ರಿಕೂಟದಲ್ಲಿರುವ ವಿವಿಧ ಪಕ್ಷಗಳ ಯಾರಿಗೂ ದೇಶದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ. ದೇಶಾಭಿವೃದ್ಧಿಯಲ್ಲಿ ಅವರ್ಯಾರ ಪಾತ್ರವೂ ಇಲ್ಲ. ಆದ್ದರಿಂದ ಅಂಥ ಮೈತ್ರಿಕೂಟದ ಜೊತೆ ಆಮ್ ಆದ್ಮಿ ಪಕ್ಷ ಗುರುತಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮೋದಿ ಮೇಲೂ ಮುನಿಸು
ಪ್ರಧಾನಿ ನರೇಂದ್ರ ಮೋದಿಯವರಿಗೂ ಇದೇ ಸಂದರ್ಭದಲ್ಲಿ ಟಾಂಗ್ ನೀಡಿದ ಕೇಜ್ರಿವಾಲ್, 'ದೆಹಲಿಯ ಅಭಿವೃದ್ಧಿಗಾಗಿ ಅವರು ಯಾವ ಕೊಡುಗೆಯನ್ನೂ ನೀಡಿಲ್ಲ. ನಮ್ಮ ಸರ್ಕಾರ ದೆಹಲಿಯ ಪ್ರಗತಿಗಾಗಿ ಯಾವುದೇ ಯೋಜನೆ ರೂಪಿಸಿದರೂ ಅದಕ್ಕೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ' ಎಂದು ಮೋದಿಯವರನ್ನು ದೂರಿದ್ದಾರೆ. ಆಮ್ ಆದ್ಮಿ ಪಕ್ಷ ದೆಹಲಿಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಪ್ರಗತಿ ಸಾಧಿಸಲು ಶ್ರಮಿಸಿದೆ ಎಂದು ಅವರು ಹೇಳಿದರು.












Click it and Unblock the Notifications