ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ
ನವದೆಹಲಿ, ಏ.3: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಪ್ರಕಟಿಸಿದ ಪ್ರಣಾಳಿಕೆಯಲ್ಲಿ ಜನಲೋಕಪಾಲ್ ಮಸೂದೆ, ಸಲಿಂಗಕಾಮ ಅಪರಾಧವಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ ವಯಸ್ಸು 25ಕ್ಕೆ ಇಳಿಕೆ ಮಾಡುವುದು ಪ್ರಮುಖಾಂಶವಾಗಿದೆ.
ಭ್ರಷ್ಟಮುಕ್ತ ಭಾರತ ನಿರ್ಮಾಣ ಮಾಡುವ ಭರವಸೆಯನ್ನು ನೀಡಿರುವ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಆಪ್ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಭ್ರಷ್ಟಮುಕ್ತ ಭಾರತ ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಕೇಂದ್ರದಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಜನಲೋಕ್ ಪಾಲ್ ಮಸೂದೆಯನ್ನು ಜಾರಿಗೆ ತರುತ್ತೇವೆ. ಲೋಕಪಾಲ್ ವ್ಯಾಪ್ತಿಗೆ ದೇಶದ ಪ್ರಧಾನಿಯಿಂದ ಹಿಡಿದು ಜವಾನನವರೆಗೂ ಒಳಪಡುವಂತೆ ಮಾಡುತ್ತೇವೆ ಎಂದು ಅರವಿಂದ್ ಭರವಸೆ ನೀಡಿದರು.

ದೆಹಲಿಯಲ್ಲಿ 49 ದಿನಗಳ ಕಾಲ ಸರ್ಕಾರ ನಡೆಸಿದ ಅನುಭವ ಹೊಂದಿರುವ ಎಎಪಿ ತನ್ನ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಿತ್ತು. ಹೀಗಾಗಿ ಕೇಂದ್ರದಲ್ಲಿ ಅಂತಹ ಸರ್ಕಾರ ಅಧಿಕಾರಕ್ಕೆ ಬರುವ ಅವಶ್ಯಕತೆ ಇದೆ ಎಂದಿದ್ದಾರೆ. ಕೇಂದ್ರದಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಅಧಿಕಾರ ವಿಕೇಂದ್ರಿಕರಣಗೊಳಿಸುವ ಭರವಸೆ ನೀಡಿದ್ದಾರೆ.
ರಾಜಕೀಯ ರಂಗಕ್ಕಿಳಿದು 15 ತಿಂಗಳ ಅನುಭವ ಹೊಂದಿರುವ ಎಎಪಿ ಲೋಕಸಭೆ ಕಣದಲ್ಲಿ 426 ಅಭ್ಯರ್ಥಿಗಳನ್ನು ನಿಲ್ಲಿಸಿ ಅಚ್ಚರಿ ಮೂಡಿಸಿದೆ. ಈ ವರೆಗೂ ಕಾಂಗ್ರೆಸ್ (414), ಬಿಜೆಪಿ(415) ಹಾಗೂ ಎಸ್ ಪಿ (160) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ವಾರಣಾಸಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸೆಣೆಸುತ್ತಿದ್ದಾರೆ. ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಕುಮಾರ್ ವಿಶ್ವಾಸ್ ಕಣದಲ್ಲಿದ್ದಾರೆ. ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಎಪಿ ಅಭ್ಯರ್ಥಿಯಾಗಿ ಮಾಜಿ ಜಡ್ಜ್ ಫಕ್ರುದ್ದೀನ್ ಸೆಣಸಲಿದ್ದಾರೆ. ಅಲಹಾಬಾದಿನಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮಗ ಆದರ್ಶ್ ಶಾಸ್ತ್ರಿ ಎಎಪಿ ಅಭ್ಯರ್ಥಿಯಾಗಿದ್ದಾರೆ. ಪೂರ್ಣಪ್ರಣಾಳಿಕೆ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.












Click it and Unblock the Notifications