'ನಿಮಗೆ ವೋಟ್ ಹಾಕಿದ್ದೀನಿ, ನನಗೆ ಮದುವೆ ಮಾಡ್ಸಿ ಪ್ಲೀಸ್..' ಶಾಸಕನ ಮುಂದೆ ಡಿಮ್ಯಾಂಡ್
ಸಾಮಾನ್ಯವಾಗಿ ರಾಜಕಾರಣಿಗಳೆಲ್ಲ ಮತದಾರರೇ...ನೀವು ನನಗೆ ವೋಟ್ ಹಾಕಿ. ನಾನು ನಿಮಗೆ ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಭಾಷಣ ಬಿಗಿಯೋದನ್ನು ಕೇಳಿರ್ತೀವಿ. ರಾಜಕಾರಣಿಗಳು ಗೆದ್ದ ಮೇಲೆ, ಸರ್ ನಮಗೆ ರಸ್ತೆ ಬೇಕು, ಕುಡಿಯುವ ನೀರು ಬೇಕು, ಬಸ್ ವ್ಯವಸ್ಥೆ ಸೇರಿದ ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡೋದು ಕಾಮನ್. ಆದರೆ, ರಾಜಕಾರಣಿಗಳಿಗೆ ನಾವು ನಿಮಗೇ ವೋಟ್ ಹಾಕಿದ್ದೀವಿ, ನಮ್ ಕೆಲ್ಸ ಮಾಡಿಕೊಡಿ ಎಂದು ಯಾವ ಮತದಾರನೂ ದಬಾಯಿಸೋದು ತೀರಾ ಕಡಿಮೆ.
ಅದರಲ್ಲೂ ಈ ತರ ಪ್ರಶ್ನೆ ಮಾಡಿದ್ರೆ ಅವನಿಗೆ ಎರಡು ಗುಂಡಿಗೆ ಇರಬೇಕು ಅಂತ ಮಾತನಾಡಿಕೊಳ್ತೀವಿ. ವಿಷಯ ಏನಂದ್ರೆ..ಸಾಮಾನ್ಯವಾಗಿ ಶಾಸಕರು ನಮ್ಮ ಎದುರಿಗೆ ಸಿಕ್ಕರೆ, ಮೊದಲಿಗೆ ಅವರ ಬಳಿ ಹೋಗಿ ಸಾರ್ವಜನಿಕರ ಸಮಸ್ಯೆಗಳನ್ನೇ ಹೆಚ್ಚಾಗಿ ಹೇಳಿಕೊಳ್ತೀವಿ. ಅಬ್ಬಬ್ಬಾ ಅಂದ್ರೆ ಬದುಕು ಕಟ್ಟಿಕೊಳ್ತೀವಿ. ಒಂಚೂರು ಹಣಕಾಸು ಸಹಾಯ ಮಾಡಿ ಬುದ್ಧಿ...ಅಂತ ಕೈಚಾಚೋದನ್ನು ನೋಡಿರ್ತೀವಿ.

ಆದ್ರೆ, ಮತದಾರನೊಬ್ಬ ತನ್ನ ಮತದಾನದ ಹಕ್ಕು ಚಲಾಯಿಸಿ, ಅದಕ್ಕೆ ಪ್ರತಿಯಾಗಿ ದೊಡ್ಡ ಡಿಮ್ಯಾಂಡ್ ಅನ್ನೇ ಶಾಸಕರ ಮುಂದೆ ಇಟ್ಟಿದ್ದಾನೆ. ಏನೋ ಸಾರ್ವಜನಿಕರ ಸಮಸ್ಯೆ ಎಂದು ಕಿವಿಗೊಟ್ಟ ಶಾಸಕ ಮತದಾರನ ಬೇಡಿಕೆ ಕೇಳಿ ತಬ್ಬಿಬ್ಬಾಗಿದ್ದಾರೆ. ಅಷ್ಟಕ್ಕೂ ಮತದಾರ ಕೇಳಿರೋ ಸಹಾಯ ಚಿಕ್ಕದೇನಲ್ಲ. ನಾನು ನಿಮಗೆ ವೋಟ್ ಹಾಕಿದ್ದೀನಿ, ನನಗೊಂದು ಮದುವೆ ಮಾಡ್ಸಿ ಎಂದು ಸಿಂಪಲ್ ಆಗಿ ಶಾಸಕರ ಮುಂದೆ ಕೇಳೇಬಿಟ್ಟಿದ್ದಾನೆ.
ಮತದಾರನ ಈ ಡಿಮ್ಯಾಂಡ್‌ಗೆ ಶಾಸಕ ನಗಬೇಕೋ? ಅಳಬೇಕೋ? ಎಂದು ಗೊತ್ತಾಗದೆ, ಸೈಲೆಂಟ್ ಆಗಿಬಿಟ್ಟಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಲ್ಲಿದೆ.

ಉತ್ತರಪ್ರದೇಶದ ಚರಖಾರಿ ಕ್ಷೇತ್ರದ ಶಾಸಕರಾದ ಬ್ರಿಜ್‌ಭೂಷಣ್ ರಜಪೂತ್ ಅವರಿಗೆ ಮತದಾರನೊಬ್ಬ ಈ ರೀತಿ ಶಾಕ್ ನೀಡಿದ್ದಾನೆ. ಉತ್ತರ ಪ್ರದೇಶದ ಮಹೋಬಾದ ಪೆಟ್ರೋಲ್ ಬಂಕ್‌ಗೆ ಶಾಸಕರ ಕಾರು ಫುಯೆಲ್ ತುಂಬಿಸಿಕೊಳ್ಳಲು ಬಂದಿತ್ತು. ಈ ವೇಳೆ ಬಂಕ್‌ನಲ್ಲಿದ್ದ ಉದ್ಯೋಗಿ 44 ವರ್ಷದ ಅಖಿಲೇಂದ್ರ ಖರೆ ಎಂಬಾತ ಸೀದಾ ಶಾಸಕರ ಬಳಿ ಬಂದು, ದಯವಿಟ್ಟು ನನಗೊಂದು ಮದುವೆ ಮಾಡಿಸಿಬಿಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ ಶಾಸಕ ಬ್ರಿಜ್‌ಭೂಷಣ್, ನಿನಗೆ ಎಂತಹ ವಧು ಬೇಕು? ಎಂದು ಕೇಳಿದ್ದಾರೆ. ಇದಕ್ಕೆ ನನಗೆ ಇದೇ ಸಮುದಾಯದ ವಧು ಬೇಕು ಎನ್ನುವುದೇನಿಲ್ಲ, ಯಾವ ಸಮುದಾಯದ ಹುಡುಗಿಯಾದ್ರೂ ಓಕೆ ಎಂದು ಅಖಿಲೇಂದ್ರ ಉತ್ತರಿಸಿದ್ದಾರೆ.
ಬಳಿಕ ಆತನ ಹಿನ್ನೆಲೆ ಕೇಳಿದಾಗ, ತನಗೆ ತಿಂಗಳಿಗೆ 6,000 ರೂಪಾಯಿ ಸಂಬಳ ಬರುತ್ತದೆ. ಸ್ವಲ್ಪ ಭೂಮಿಯೂ ಇದೆ ಎಂದು ಶಾಸಕರಿಗೆ ತಿಳಿಸಿದ್ದಾನೆ. ಕೊನೆಗೆ ಶಾಸಕರು ಕೂಡ ಅಖಿಲೇಂದ್ರ ಅವರಿಗೆ ವಧುವನ್ನು ಹುಡುಕಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ವಿಡಿಯೋವನ್ನು ಖುದ್ದು ಶಾಸಕ ಬ್ರಿಜ್‌ಭೂಷಣ್ ರಜಪೂತ್ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಮದುವೆಗೆ ವಧು ಸಿಗುತ್ತಿಲ್ಲ ಎಂಬುದಕ್ಕೆ ಈ ಘಟನೆಯೊಂದು ಸಾಕ್ಷಿ ಎಂದು ನೆಟ್ಟಿಗರು ಅಖಿಲೇಂದ್ರ ಬೆನ್ನಿಗೆ ನಿಂತಿದ್ದಾರೆ. ಇನ್ನೂ ಕೆಲವರು ಶಾಸಕರಿಗೆ ಕ್ಷೇತ್ರಕ್ಕೆ ಬರೋಕೆ ಟೈಮ್ ಇರಲ್ಲ, ಇನ್ನು ನಿನಗೆಲ್ಲಪ್ಪಾ ವಧು ಹುಡುಕುತ್ತಾರೆ? ಎಂದು ವ್ಯಂಗ್ಯ ಕೂಡ ಮಾಡಿದ್ದಾರೆ.












Click it and Unblock the Notifications