ತಂಜಾವೂರು:ಹಿಂದೂ ಮುಖಂಡನ ಮನೆಯ ಹೊರಗೆ ಪೆಟ್ರೋಲ್ ಬಾಂಬ್ ಎಸೆತ
ಚೆನ್ನೈ, ನವೆಂಬರ್ 21: ತಂಜಾವೂರು ಜಿಲ್ಲೆಯ ಕುಂಭಕೋಣಂನಲ್ಲಿ ಸ್ಥಳೀಯ ಹಿಂದೂ ಮುಖಂಡರೊಬ್ಬರ ಮನೆಯ ಹೊರೆಗೆ ಸೋಮವಾರ ಬೆಳಗ್ಗೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂಭಕೋಣಂನಲ್ಲಿರುವ ಹಿಂದೂ ಮುನ್ನಾನಿ ಕಾರ್ಯಕಾರಿ ಚಕ್ರಪಾಣಿ ಎಂಬುವವರ ನಿವಾಸದ ಮುಂದೆ ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಪೆಟ್ರೋಲ್ ಬಾಂಬ್ ಅನ್ನು ಎಸೆಯಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಪೆಟ್ರೋಲ್ ಬಾಂಬ್ ಎಸೆದಾಗ ಕೇಳಿಬಂದ ಶಬ್ದದಿಂದ ಚಕ್ರಪಾಣಿ ಅವರು ಬಾಗಿಲು ತೆರೆದು ನೋಡಿದ್ದಾರೆ. ಆಗ ಮನೆಯ ಮುಂದೆ ಪೆಟ್ರೋಲ್ ಬಾಂಬ್ ಕಾಣಿಸಿದೆ ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಂಜಾವೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ತನಿಖೆ ಕೈಗೊಂಡಿದ್ದಾರೆ. ಈ ಹಿಂದೆಯೂ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಇರುವ ಕೆಲವು ಹಿಂದೂ ಮುಖಂಡರ ಮನೆ ಬಳಿ ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು. ಸರಿಯಾಗಿ ಎರಡು ತಿಂಗಳ ಹಿಂದೆ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಮಧುರೈ ಜಿಲ್ಲೆಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯನ ಮನೆಗೆ ಮೂರು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿತ್ತು.

ಮಧುರೈನ ಮೆಲ್ ಅನುಪ್ಪನಾಡಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಎಂಎಸ್ ಕೃಷ್ಣನ್ ಅವರ ನಿವಾಸದಲ್ಲಿ ರಾತ್ರಿ 7.38ರ ಸುಮಾರಿಗೆ ಪೆಟ್ರೋಲ್ ಎಸೆಯುತ್ತಿರುವ ದೃಶ್ಯ ಸಿಸಿಟಿವಿಗಳಲ್ಲಿ ದಾಖಲಾಗಿತ್ತು. ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡಂತೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆ ಸಮೀಪಿಸುತ್ತಿರುವುದು ಹಾಗೂ ಬೈಕ್‌ನಲ್ಲಿ ವೇಗವಾಗಿ ಬಂದು ಪೆಟ್ರೋಲ್ ಬಾಂಬ್ ಅನ್ನು ಎಸೆಯುತ್ತಿರುವುದು ಕಂಡು ಬಂದಿದೆ. ಈ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಮಧುರೈ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ತಿಳಿಸಿದ್ದರು.
ಆ ವೇಳೆ ಘಟನೆ ಬಗ್ಗೆ ಬಿಜೆಪಿಯ ಸುಶೀಂದ್ರನ್ ಮಾತನಾಡಿ, ''ಇದು ಪಿಎಫ್‌ಐ ಸಂಘಟನೆಯ ಕೃತ್ಯವಾಗಿದೆ. ಅವರು ಇಸ್ಲಾಮಿಕ್ ರಾಷ್ಟ್ರ ಸೃಷ್ಟಿಸಲು ಬಯಸುತ್ತಿದ್ದಾರೆ. ಅವರು ಪ್ರಜಾಪ್ರಭುತ್ವ ಭಾರತದ ಸಾಂಪ್ರಾದಾಯಿಕ ಸಂಸ್ಕೃತಿಗೆ ಮಾರಕವಾಗಿದ್ದಾರೆ. ಕಳೆದ ಎರಡು ದಿನಗಳಲ್ಲಿ 20ಕ್ಕೂ ಹೆಚ್ಚು ನಾಯಕರ ಮನೆ ಮೇಲೆ ದಾಳಿ ನಡೆದಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಘಟನೆ ಬಗ್ಗೆ ಯಾವುದೇ ಖಂಡನೆ ವ್ಯಕ್ತಪಡಿಸಿಲ್ಲ. ಆದರೆ ಅವರಿಗೆ ಬೇಕಾಗಿರುವುದು ಹಿಂದೂ ಜನರ ಮತಗಳು ಮಾತ್ರ. ಡಿಎಂಕೆ ಮತ್ತು ಅದರ ಮಿತ್ರ ಪಕ್ಷಗಳು ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಲು ಮುಂದೆ ಬರುವುದಿಲ್ಲ. ಶೀಘ್ರದಲ್ಲೇ ತಮಿಳುನಾಡಿನಲ್ಲಿ ಸರ್ಕಾರ ಬದಲಾವಣೆಯಾಗಲಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಳಂಬ ಮಾಡಿದರೆ ಆರೋಪಿಗಳನ್ನು ಬಂಧಿಸುವವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು'' ಎಂದಿದ್ದಾರೆ.
ಬಳಿಕ ತಮಿಳುನಾಡು ಬಿಜೆಪಿ ಕೂಡ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಗಮನಕ್ಕೆ ತಂದಿದೆ. ಅಮಿತ್ ಶಾಗೆ ಬರೆದ ಪತ್ರದಲ್ಲಿ ಹಿಂದೂ ಸಂಘಟನೆಗಳಿಗೆ ಸೇರಿದವರ ವಿರುದ್ಧ 19 ದಾಳಿಗಳನ್ನು ಉಲ್ಲೇಖಿಸಲಾಗಿತ್ತು.












Click it and Unblock the Notifications