ರೈಲು ಅಪಘಾತದಲ್ಲಿ 90 ಕುರಿಗಳ ಸಾವು, ಮಾಂಸ ತಿನ್ನಲು ಬಂದಿದ್ದ ರಣಹದ್ದುಗಳೂ ಬಲಿ
ಬಲರಾಂಪುರ, ಡಿಸೆಂಬರ್ 26: ಇಲ್ಲಿನ ಗೋರಖ್‌ಪುರ-ಗೊಂಡಾ ಮಾರ್ಗದಲ್ಲಿ ಸಂಭವಿಸಿದ ಅಪಘಾತದಲ್ಲಿ 90 ಕುರಿಗಳು ರೈಲಿಗೆ ಸಿಲುಕಿ ಸತ್ತು ಹೋಗಿವೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸತ್ತ ಕುರಿಗಳ ಮಾಂಸ ತಿನ್ನಲು ಬಂದಿದ್ದ ಎಂಟು ರಣಹದ್ದುಗಳು ಎರಡನೇ ರೈಲಿನ ಗಾಲಿಗಳಿಗೆ ಸಿಕ್ಕು ಪ್ರಾಣ ಕಳೆದು ಕೊಂಡಿವೆ.
ಕುರಿ ಮೇಯಿಸಲು ಹೋಗಿದ್ದ ವಿಶಂಪುರ ಕೋಡಾರ್ ಗ್ರಾಮದ ನಿವಾಸಿ ಪ್ರಭುರಾಮ್ ಎಂಬುವವರ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿವೆ. ಈ ಹಿನ್ನೆಲೆಯಲ್ಲಿ, ಭಯಗೊಂಡ ಕುರಿಗಳು ರೈಲು ಟ್ರ್ಯಾಕ್ ಮೇಲೆ ಬಂದಿವೆ. ಆ ಸಮಯದಲ್ಲಿ ಬಂದ ಎಕ್ಸಪ್ರೆಸ್ ರೈಲು 90 ಕುರಿಗಳನ್ನು ಬಲಿಪಡೆದುಕೊಂಡಿದೆ. ಈ ಘಟನೆ ಭಾನುವಾರ ನಡೆದಿದೆ.

ಗೋರಖ್‌ಪುರದಿಂದ ಲಖನೌಗೆ ತೆರಳುತ್ತಿದ್ದ ರೈಲು ಕುರಿಗಳ ಮೇಲೆ ಹರಿಯುತ್ತಿದ್ದ ಸಮಯದಲ್ಲಿ, ಪ್ರಭುರಾಮ್ ಅವರು ಸರಯು ಕಾಲುವೆಗೆ ಹಾರಿ ಪ್ರಾಣ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಸಂಭವಿಸಿದ ಮೋತಿನಗರ ಗ್ರಾಮದ ಮುಖ್ಯಸ್ಥ ನಂದ್ ಕುಮಾರ್ ಪಾಂಡೆ ಮಾತನಾಡಿ, ಗೋರಖ್‌ಪುರದಿಂದ ಬಂದ ಮತ್ತೊಂದು ರೈಲು ಎಂಟು ರಣಹದ್ದುಗಳ ಮೇಲೆ ಹಾದು ಹೋಗಿದೆ. ಆ ನಂತರ ರಣಹದ್ದುಗಳೂ ಪ್ರಾಣ ಕಳೆದುಕೊಂಡಿವೆ.
ಅಪಘಾತದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಎಸ್.ಪಿ.ಯಾದವ್ ಗ್ರಾಮಕ್ಕೆ ಭೇಟಿ ನೀಡಿ ಕುರಿ ಮಾಲೀಕರಿಗೆ 40 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪರಿಹಾರ ನೀಡುವಂತೆ ರೈಲ್ವೆ ಸಚಿವರು ಹಾಗೂ ರಾಜ್ಯ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದಿದ್ದಾರೆ.
ಕುರಿಗಳ ಮಾಲೀಕ ಪ್ರಭುರಾಮ್ ಅವರೂ ಸಹ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಆದರೆ, ಅವರು ಕೇಳುತ್ತಿರುವ ಪರಿಹಾರದ ಮೊತ್ತ ದುಪ್ಪಟ್ಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತುಳಸಿಪುರ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮಂಗಳೇಶ್ ದುಬೆ ಅವರು ಅಪಘಾತದ ವರದಿಯನ್ನು ಕೇಳಿದ್ದಾರೆ. ಸೂಕ್ತ ಕ್ರಮಕ್ಕಾಗಿ ಜಿಲ್ಲಾಡಳಿತ ಮತ್ತು ರೈಲ್ವೆಗೆ ಸೂಚಿಸಲಾಗುವುದು ಎಂದು ಸೋಮವಾರ ತಿಳಿಸಿದ್ದಾರೆ.
ರೋಗಗಳು ಹರಡದಂತೆ ತಡೆಗಟ್ಟಲು ಕುರಿ ಮತ್ತು ರಣಹದ್ದುಗಳ ದೇಹಗಳನ್ನು ತೆಗೆದುಹಾಕಲು ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ವಂದೇ ಭಾರತ್ ರೈಲುಗಳು ಪ್ರಾಣಿಗಳ ಮೇಲೆ ಹರಿದ ಘಟನೆಗಳು ನಡೆದಿದ್ದವು. ರೈಲುಗಳಿಗೂ ಹಾನಿಯಾಗಿರುವ ಬಗ್ಗೆ ವರದಿಗಳಾಗಿದ್ದವು. ಪ್ರಾಣಿಗಳ ಮಾಲೀಕರ ಮೇಲೆ ರೈಲ್ವೆ ಇಲಾಖೆ ದೂರಗಳನ್ನೂ ದಾಖಲಿಸಿತ್ತು. ಈಗ ಇಂತಹುದೇ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.












Click it and Unblock the Notifications