Heavy Rain: ಆಂಧ್ರ, ತೆಲಂಗಾಣದಲ್ಲಿ ಭಾರಿ ಮಳೆ, ಪ್ರವಾಹ; 9 ಮಂದಿ ಸಾವು
ಕರ್ನಾಟಕದಲ್ಲಿ ಮಳೆ ಅಬ್ಬರ ಕಡಿಮೆಯಾದರೆ, ಪಕ್ಕದ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಮಳೆ ಅಬ್ಬರಿಸುತ್ತಿದೆ. ಸತತ ಎರಡನೇ ದಿನ ಕೂಡ ಭಾರಿ ಮಳೆ ಮುಂದುವರೆದಿದ್ದು, ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಲವು ಕಡೆ ಮನೆಗಳು, ವಾಹನಗಳು ಮುಳುಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಈವರೆಗೂ 9 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ದಕ್ಷಿಣ ಮಧ್ಯ ರೈಲ್ವೆ 20 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದ್ದು, ಎರಡೂ ರಾಜ್ಯಗಳಲ್ಲಿ ಒಟ್ಟು 30 ರೈಲುಗಳ ಮಾರ್ಗ ಬದಲಾವಣೆ ಮಾಡಿದೆ. ಅಸ್ನಾ ಚಂಡಮಾರುತದ ಪರಿಣಾಮ ಭಾರಿ ಮಳೆಯಾಗುತ್ತಿದ್ದು, ತೆಲಂಗಾಣದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದ್ದು 11 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ತೆಲಂಗಾಣದ ಶ್ರೀಕಾಕುಳಂ, ವಿಜಯನಗರಂ, ಪಾರ್ವತಿಪುರಂ ಮಾನ್ಯಂ, ಅಲ್ಲೂರಿ ಸೀತಾರಾಮ ರಾಜು, ಕಾಕಿನಾಡ ಮತ್ತು ನಂದ್ಯಾಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಸಚಿವರು, ಅಧಿಕಾರಿಗಳು, ಶಾಸಕರ ಜೊತೆ ತುರ್ತು ಸಭೆ ನಡೆಸಿ ರಕ್ಷಣಾ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಆಂಧ್ರ ಪ್ರದೇಶದ ವಿಜಯವಾಡ ಗ್ರಾಮಾಂತರದ ಅಂಬಾಪುರಂ, ನೈನಾವರಂ, ನುನ್ನಾ, ಪತಪಡು ಗ್ರಾಮಗಳು ಸಂಪೂರ್ಣ ಮುಳುಗಿವೆ. ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗಾಗಿ ಪೊಲೀಸ್ ಇಲಾಖೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸಂತ್ರಸ್ತರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ಅಸ್ನಾ ಚಂಡಮಾರುತ ಭಾರತದ ಕರಾವಳಿಯಿಂದ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ನಿರೀಕ್ಷೆಯಿದ್ದು ಮಳೆ ಮತ್ತಷ್ಟು ತೀವ್ರವಾಗಬಹುದು ಎಂದು ಹೇಳಿದೆ. ಕಳೆದ ಎರಡು ದಿನಗಳಿಂದ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದೆ.
ಆಂಧ್ರದಲ್ಲಿ ಕೂಡ ಭಾರಿ ಮಳೆ
ಆಂಧ್ರ ಪ್ರದೇಶದಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದು ಪರಿಸ್ಥಿತಿ ಗಂಭೀರವಾಗಿದೆ. ಐದು ಜಿಲ್ಲೆಗಳ 294 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು 13,227 ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಗೃಹ ಸಚಿವೆ ವಂಗಲಪುಡಿ ಅನಿತಾ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಸಿಎಂ ಚಂದ್ರಬಾಬು ನಾಯ್ಡು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲು ಸೂಚನೆ ನೀಡಿದರು.
ಈವರೆಗೂ ಭಾರಿ ಮಳೆಯಿಂದಾಗಿ 9 ಜನ ಮೃತಪಟ್ಟಿದ್ದಾರೆ. ಪೊಲೀಸ್ ಸಿಬ್ಬಂದಿ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಈವರೆಗೂ 600 ಜನರನ್ನು ರಕ್ಷಣೆ ಮಾಡಿವೆ, 17 ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಏಳು ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಸಚಿವೆ ಅನಿತಾ ತಿಳಿಸಿದ್ದಾರೆ.
ಎನ್‌ಟಿಆರ್ ಜಿಲ್ಲೆಯ ರಾಯನಪಾಟು ಗ್ರಾಮದಲ್ಲಿ ಭಾರಿ ಪ್ರವಾಹ ಉಂಟಾದ ಕಾರಣ ಅಧಿಕಾರಿಗಳು ತಮಿಳುನಾಡು ಎಕ್ಸ್‌ಪ್ರೆಸ್ ರೈಲನ್ನು ನಿಲ್ಲಿಸಿದರು. ಶನಿವಾರ ರಾತ್ರಿ ಪ್ರಯಾಣಿಕರು ರೈಲಿನಲ್ಲಿ ಸಿಲುಕಿ ತೊಂದರೆ ಅನುಭವಿಸಿದರು. ಬಳಿಕ ಸರ್ಕಾರಿ ಬಸ್‌ಗಳಲ್ಲಿ ಅವರನ್ನು ವಿಜಯವಾಡಕ್ಕೆ ಕಳುಹಿಸಿಕೊಡಬೇಕಿತ್ತು, ಆದರೆ ಪ್ರವಾಹ ಕಡಿಮೆಯಾಗದೇ ಇದ್ದಾಗ ರೈಲ್ವೆ ಸಿಬ್ಬಂದಿ ನಿಲ್ದಾಣದಿಂದ ಪ್ರಯಾಣಿಕರನ್ನು ಜೆಸಿಬಿ, ಟ್ರಾಕ್ಟರ್ ಬಳಸಿ ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಗೆ ಕರೆತರಲಾಯಿತು. ಅಲ್ಲಿಂದ ಬಸ್ ಮೂಲಕ ಕಳುಹಿಸಿಕೊಡಲಾಗಿದೆ.












Click it and Unblock the Notifications