ಉ.ಪ್ರ.ದಲ್ಲಿ ಮತ್ತೆ ಹಳಿತಪ್ಪಿದ ರೈಲು: 30 ದಿನದಲ್ಲಿ 4ನೇ ದುರಂತ!
ಲಕ್ನೋ, ಸೆಪ್ಟೆಂಬರ್ 7: ಮುಜಾಫರ್ ನಗರದ ರೈಲು ದುರಂತದ ಚಿತ್ರ ನೆನಪಿನಿಂದ ಮಾಸುವ ಮೊದಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ಹಳಿ ತಪ್ಪಿದ ಘಟನೆ ನಡೆದಿದೆ.
ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲವಾದರೂ ಇದು ಕಳೆದ 30 ದಿನಗಳಲ್ಲಿ ಭಾರತದಲ್ಲಿ ನಡೆದ ನಾಲ್ಕನೇ ರೈಲು ದುರಂತ ಎಂಬುದು ಆತಂಕದ ಸಂಗತಿ! ಹೌಲಾ-ಜಬಲ್ಪುರ್ ನಡುವೆ ಸಂಚರಿಸುವ ಶಕ್ತಿಪುಂಜ್ ಎಕ್ಸ್‌ಪ್ರೆಸ್ ರೈಲಿನ 7 ಬೋಗಿಗಳು ಇಂದು(ಸೆ.7) ಹಳಿತಪ್ಪಿವೆ.

ಆಗಸ್ಟ್ 19 ರಂದು ಮುಜಾಫರ್ ನಗರದಲ್ಲಿ ನಡೆದ 'ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್' ದುರಂತದಲ್ಲಿ 23 ಜನ ಬಲಿಯಾಗಿದ್ದರು.
ಆಗಸ್ಟ್ 23 ರಂದು ಉತ್ತರ ಪ್ರದೇಶದ ಔರಯ್ಯ ಜಿಲ್ಲೆಯಲ್ಲಿ ಕೈಫಿಯಾತ್ ಎಕ್ಸ್ ಪ್ರೆಸ್ ಹಳಿ ತಪ್ಪಿದ ಪರಿಣಾಮ 50 ಜನರಿಗೆ ಗಾಯವಾಗಿತ್ತು.

ಆಗಸ್ಟ್ 29 ರಂದು ಮುಂಬೈಯ ಡುರೆಂಟೊ ಎಕ್ಸ್ ಪ್ರೆಸ್ ಮಹಾರಾಷ್ಟ್ರದ ತಿತ್ವಾಲಾ ಜಿಲ್ಲೆಯಲ್ಲಿ ಹಳಿ ತಪ್ಪಿತ್ತು. ಪದೇ ಪದೇ ಸಂಭವಿಸುತ್ತಿರುವ ರೈಲ್ವೇ ದುರಂತಕ್ಕೆ ನೈತಿಕ ಹೊಣೆ ಹೊತ್ತು ರೈಲ್ವೇ ಸಚಿವರಾಗಿದ್ದ ಸುರೇಶ್ ಪ್ರಭು ರಾಜೀನಾಮೆ ನೀಡಿದ್ದರು. ನಂತರ ಸೆ.3 ರಂದು ನಡೆದ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಪಿಯೂಷ್ ಗೋಯೆಲ್ ಅವರನ್ನು ನೂತನ ರೈಲ್ವೇ ಸಚಿವರನ್ನಾಗಿ ಆರಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಒಟ್ಟಿನಲ್ಲಿ ಮತ್ತೆ ಮತ್ತೆ ಸಂಭವಿಸುತ್ತಿರುವ ರೈಲು ದುರಂತಗಳು ರೈಲ್ವೇ ಇಲಾಖೆಯ ಕಾರ್ಯದಕ್ಷತೆಯ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನ ಹುಟ್ಟಿಸಿದೆ.












Click it and Unblock the Notifications