ಭಾರತದಲ್ಲಿ ತರಬೇತಿ ಪಡೆಯುತ್ತಿರುವ ಅಫ್ಘನ್ ಸೈನಿಕರಿಗೆ ಆರು ತಿಂಗಳ ವೀಸಾ
ನವದೆಹಲಿ, ಸೆಪ್ಟೆಂಬರ್ 28: ದೇಶದ ವಿವಿಧ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಸುಮಾರು 180 ಅಫ್ಘನ್ ಸೈನಿಕರು ಹಾಗೂ ಕೆಡೆಟ್‌ಗಳಿಗೆ ತರಬೇತಿ ಪೂರ್ಣಗೊಳಿಸಿದ ನಂತರ ಭಾರತ ಆರು ತಿಂಗಳ ಇ-ವೀಸಾ ನೀಡಲಿದೆ.
ಸುಮಾರು 140 ಅಫ್ಘನ್ ಸೈನಿಕರು ಈಗಾಗಲೇ ಕೆನಡಾ, ಇಂಗ್ಲೆಂಡ್ ಹಾಗೂ ಜರ್ಮನಿ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ.
'ನಮ್ಮ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಎಲ್ಲಾ ಅಫ್ಘನ್ ಸೈನಿಕರಿಗೆ ಆರು ತಿಂಗಳ ಅವಧಿಯ ಇ-ವೀಸಾ ನೀಡಲಾಗುವುದು. ಈ ಅವಧಿಯಲ್ಲಿ ಅವರು ತಮ್ಮ ಭವಿಷ್ಯದ ಕುರಿತು ನಿರ್ಧರಿಸಲು ಅವಕಾಶವಾಗಲಿದೆ' ಎಂದು ಸರ್ಕಾರಿ ಮೂಲಗಳು ANI ಸುದ್ದಿ ವಾಹಿನಿಗೆ ತಿಳಿಸಿವೆ.

ಕೆನಡಾ ಹಾಗೂ ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಆಶ್ರಯಕ್ಕಾಗಿ ಸುಮಾರು 140 ಸೈನಿಕರು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಇನ್ನೂ ಹಲವರು ಭಾರತದಲ್ಲಿ ಉಳಿಯಲು ಇಚ್ಚಿಸುತ್ತಿದ್ದಾರೆ. ಅವರು ಈಗಾಗಲೇ ಈ ಸಂಬಂಧ, ಅಫ್ಘನ್ನರೊಂದಿಗೆ ಕೆಲಸ ನಿರ್ವಹಿಸುತ್ತಿರುವ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಅಫ್ಘಾನಿಸ್ತಾನ ವಶಪಡಿಸಿಕೊಂಡಿರುವ ತಾಲಿಬಾನ್‌ಗಳು ತಮ್ಮ ನಿಯಂತ್ರಣವನ್ನು ಬಲಪಡಿಸುತ್ತಿದ್ದು, ಸೈನಿಕರು ಹಾಗೂ ಕೆಡೆಟ್‌ಗಳ ಭವಿಷ್ಯ ಈ ಸಮಯದಲ್ಲಿ ಅನಿಶ್ಚಿತವಾಗಿದೆ. ಭಾರತ ಸುಮಾರು 180 ಅಫ್ಘನ್ ಕೆಡೆಟ್‌ಗಳಿಗೆ ತಮ್ಮ ರಕ್ಷಣಾ ಪಡೆಗಳ ಮಿಲಿಟರಿ ಅಕಾಡೆಮಿಗಳಲ್ಲಿ ತರಬೇತಿ ಪೂರ್ಣಗೊಳಿಸಲು ಅವಕಾಶ ನೀಡಲು ನಿರ್ಧರಿಸಿದೆ. ಸಾಮರ್ಥ್ಯವೃದ್ಧಿ ಕಾರ್ಯಕ್ರಮದ ಭಾಗವಾಗಿ ಭಾರತೀಯ ರಕ್ಷಣಾ ಪಡೆಗಳು ಅಫ್ಘನ್ ಸೈನಿಕರಿಗೆ ತರಬೇತಿ ನೀಡುತ್ತಿವೆ.
ಸುಮಾರು 180 ಅಫ್ಘನ್ ಮಿಲಿಟರಿ ಸಿಬ್ಬಂದಿಗೆ ವಿವಿಧ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಅವರಲ್ಲಿ ಹೆಚ್ಚಿನವರು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿ (ಐಎಂಎ)ಯಲ್ಲಿದ್ದಾರೆ. ಉಳಿದವರು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿ (ಒಟಿಎ) ಹಾಗೂ ಪುಣೆಯ ಖಡಕ್‌ವಾಸ್ಲಾದಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

2001ರ ನಂತರ ಅಫ್ಘಾನಿಸ್ತಾನದಲ್ಲಿ ರಾಷ್ಟ್ರ ನಿರ್ಮಾಣ ಕಾರ್ಯದ ಭಾಗವಾಗಿ ಈ ಸೈನಿಕರು ಹಾಗೂ ಕೆಡೆಟ್‌ಗಳ ತರಬೇತಿ ಹಾಗೂ ಇತರ ವೆಚ್ಚಗಳನ್ನು ಭಾರತ ಭರಿಸುತ್ತಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘನ್‌ನಲ್ಲಿ ಸೇನೆಯು ಶರಣಾಗಿದೆ ಹಾಗೂ ತಾಲಿಬಾನ್‌ಗಳು ಇದೀಗ ಅಲ್ಲಿ ಅಧಿಕಾರ ಸ್ಥಾಪಿಸಿರುವುದರಿಂದ ಈ ಯೋಧರ ಭವಿಷ್ಯ ಅನಿಶ್ಚಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಆರು ತಿಂಗಳ ಮಟ್ಟಿಗೆ ಇ ವೀಸಾಗಳನ್ನು ನೀಡಲಾಗುತ್ತಿದೆ.
ತಾಲಿಬಾನ್ ವಶವಾಗಿರುವ ಅಘ್ಫಾನಿಸ್ತಾನ ತೊರೆದು ಭಾರತಕ್ಕೆ ಮರಳುವ ಅಫ್ಘನ್ನರ ಅರ್ಜಿಗಳನ್ನು ತ್ವರಿತಗತಿಯಲ್ಲಿ ಸ್ವೀಕರಿಸಲು ಕೇಂದ್ರ ಸರ್ಕಾರ ಆಗಸ್ಟ್ ತಿಂಗಳಿನಲ್ಲಿ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾ ಪರಿಚಯಿಸಿತ್ತು. ಈ ಹೊಸ ವೀಸಾ ವರ್ಗಕ್ಕೆ "e-Emergency X-Misc Visa" ಎಂದು ಹೆಸರಿಟ್ಟಿತ್ತು.
ಅಫ್ಘಾನಿಸ್ತಾನದ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗೃಹ ವ್ಯವಹಾರಗಳ ಸಚಿವಾಲಯ ವೀಸಾ ನಿಬಂಧನೆಗಳನ್ನು ಪರಿಶೀಲಿಸುವುದರೊಂದಿಗೆ ಎಲೆಕ್ಟ್ರಾನಿಕ್ ವೀಸಾದ ಹೊಸ ವರ್ಗದ "ಇ ಎಮರ್ಜೆನ್ಸಿ ವೀಸಾ" ವಿಭಾಗವನ್ನು ಭಾರತಕ್ಕೆ ಬರುವವರ ಅರ್ಜಿಯನ್ನು ವೇಗವಾಗಿ ಪರಿಶೀಲಿಸಲು ಪರಿಚಯಿಸಿತ್ತು.
ಅಫ್ಘಾನಿಸ್ತಾನದಲ್ಲಿ ಅಮೆರಿಕ ಮಿಲಿಟರಿ ಹಿಂಪಡೆಯುವ ಆದೇಶ ಹೊರಬೀಳುತ್ತಿದ್ದಂತೆ ತಾಲಿಬಾನ್ ಅಫ್ಗಾನಿಸ್ತಾನ ವಶಕ್ಕೆ ಸಂಚು ರೂಪಿಸಿತ್ತು. ಅಫ್ಘಾನಿಸ್ತಾನದ ಸೈನಿಕರು ಹಾಗೂ ಪೊಲೀಸರನ್ನು ಕಂಡರೆ ಅಲ್ಲೇ ಗುಂಡಿಕ್ಕಿ ಸಾಯಿಸುತ್ತಿದ್ದರು. 20 ವರ್ಷಗಳ ನಂತರ ಅಫ್ಘಾನ್‌ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಆಗಸ್ಟ್ 15ರಂದು ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡಿತ್ತು.
ಅಧಿಕಾರ ವಹಿಸಿಕೊಂಡ ಒಂದು ತಿಂಗಳಿನಲ್ಲಿ ಹಲವು ವಿಷಯಗಳ ಮೇಲೆ ತಾಲಿಬಾನ್ ನಿಷೇಧ ಹೇರಿದೆ. ರೇಡಿಯೋ ಸ್ಟೇಷನ್‌ಗಳಲ್ಲಿ ಸಂಗೀತ ಹಾಕದಂತೆ ಆದೇಶ ಹೊರಡಿಸಿದೆ. ಕೇವಲ ದೇಶಭಕ್ತಿ ಗೀತೆಗಳನ್ನು ಹಾಕುವಂತೆ ತಿಳಿಸಿದೆ. ಈ ಬಾರಿ ಮಹಿಳೆಯರ ಹಕ್ಕು ರಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದ ತಾಲಿಬಾನ್, ಮಹಿಳೆಯರಿಗೆ ಉದ್ಯೋಗ ನಿಷೇಧಿಸಿದೆ. ಮಹಿಳೆಯರನ್ನು ಕ್ರೀಡೆಗಳಿಂದಲೂ ನಿಷೇಧ ಮಾಡಿದೆ. ರಾಜಕೀಯದಲ್ಲಿ ಅವಕಾಶ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ದಿನನಿತ್ಯ ಒಂದೊಂದು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ತಾಲಿಬಾನ್ ಆಡಳಿತದ ಭೀತಿಯಿಂದ ಈಗಾಗಲೇ ಸಾವಿರಾರು ಮಂದಿ ದೇಶ ತೊರೆದು ಹೋಗಿದ್ದಾರೆ.












Click it and Unblock the Notifications