ಒಡಿಶಾದಲ್ಲಿ ಮತ್ತೆ ರೈಲು ದುರಂತ: ಗೂಡ್ಸ್ ರೈಲಿಗೆ ಸಿಲುಕಿ ಆರು ಮಂದಿ ಕಾರ್ಮಿಕರು ಸಾವು
ಭುವನೇಶ್ವರ, ಜೂನ್. 07: ಒಡಿಶಾದ ಮೂರು ರೈಲುಗಳ ನಡುವೆ ನಡೆದ ಭೀಕರ ಅಪಘಾತವನ್ನು ದೇಶ ಮರೆಯುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಜಾಜ್‌ಪುರ ರಸ್ತೆ ರೈಲು ನಿಲ್ದಾಣದಲ್ಲಿ ಬುಧವಾರ ಗೂಡ್ಸ್ ರೈಲಿಗೆ ಸಿಲುಕಿ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನು ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ 288 ಜನರು ಸಾವನ್ನಪ್ಪಿದ ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ದುರಂತ ತ್ರಿವಳಿ ರೈಲು ಅಪಘಾತದ ಐದು ದಿನಗಳ ನಂತರ ಈ ಘಟನೆ ನಡೆದಿದೆ. ಜಾಜ್‌ಪುರ ರಸ್ತೆ ರೈಲು ನಿಲ್ದಾಣದಲ್ಲಿ ಬುಧವಾರ ಕೆಲಸ ಮಾಡಿ ಸುಸ್ತಾದ ಕಾರ್ಮಿಕರು ಗೂಡ್ಸ್ ರೈಲಿನ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು.

ಪ್ರಾಥಮಿಕ ವರದಿಗಳ ಪ್ರಕಾರ, ಮೃತಪಟ್ಟವರು ಮತ್ತು ಗಾಯಗೊಂಡವರು ರೈಲ್ವೇ ಕಾರ್ಮಿಕರು, ಅವರು ಕೋಚ್ ಅಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ರೈಲು ಚಲಿಸಲು ಪ್ರಾರಂಭಿಸಿತು ಹೀಗಾಗಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೈಲ್ವೇ ಕಾರ್ಮಿಕರು ರೈಲಿನ ಬೋಗಿಯ ಕೆಳಗೆ ಮಳೆಯಿಂದ ಆಶ್ರಯ ಪಡೆಯುತ್ತಿದ್ದರು, ಆಗ ರೈಲು ಚಲಿಸಲು ಪ್ರಾರಂಭಿಸಿತು ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸರು, ಡಿಆರ್‌ಎಂ ಖುರ್ದಾ ರಸ್ತೆ ನೇತೃತ್ವದಲ್ಲಿ ವಿಭಾಗೀಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ನಿಟ್ಟಿನಲ್ಲಿ ರೈಲ್ವೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೈಲ್ವೆ ಕಾಮಗಾರಿಗಾಗಿ ಗುತ್ತಿಗೆದಾರರಿಂದ ತೊಡಗಿಸಿಕೊಂಡಿದ್ದ ಕೆಲವು ಗುತ್ತಿಗೆ ಕಾರ್ಮಿಕರು ಜಾಜ್‌ಪುರ ಕೆಯೊಂಜಾರ್ ರಸ್ತೆ ಬಳಿ ಗಾಳಿ ಮತ್ತು ಮಳೆಯಿಂದ ರಕ್ಷಣೆ ಪಡೆಯಲು ರೈಲಿನ ಅಡಿಯಲ್ಲಿ ಆಶ್ರಯ ಪಡೆದದ್ದರು.

ಇನ್ನು, ಕಳೆದ ವಾರ ನಡೆದ ತ್ರಿವಳಿ ರೈಲು ಅಪಘಾತದ ಸ್ಥಳಕ್ಕೆ ಸುಡುವ ಬಿಸಿಲಿನಲ್ಲಿಯೂ ಅಪಘಾತದಲ್ಲಿ ಸಿಲುಕಿದ ರೈಲುಗಳ ಅವಶೇಷಗಳನ್ನು ನೋಡಲು ಜನರು ತಮ್ಮ ಮೊಬೈಲ್ ಕ್ಯಾಮೆರಾಗಳೊಂದಿಗೆ ಆಗಮಿಸಿದ್ದಾರೆ. ರೈಲ್ವೆ ಅಧಿಕಾರಿಗಳು ಈ ಪ್ರದೇಶದ ಸುತ್ತ ಹಸಿರು ಬಟ್ಟೆಯನ್ನು ಕಟ್ಟಿದ್ದರೂ, ಹಳಿಗಳ ಬದಿಗಳಲ್ಲಿ ಹರಡಿರುವ ಕೋಚ್‌ಗಳನ್ನು ಸುಲಭವಾಗಿ ನೋಡಬಹುದಾಗಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿಶುಕ್ರವಾರ ರಾತ್ರಿ ನಿಂತಿದ್ದ ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು. ಬಳಿಕ ಪಕ್ಕದ ಹಳಿಯಲ್ಲಿ ಹೋಗುತ್ತಿದ್ದ ಬೆಂಗಳೂರಿನಿಂದ ಬಂದ ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಕೊನೆಯ ಭೋಗಿಗಳಿಗೆ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಭೋಗಿ ತಗುಲಿ ಅದು ಪಲ್ಟಿಯಾಗಿತ್ತು. ಘಟನೆಯಲ್ಲಿ 288 ಜನರು ಸಾವನ್ನಪ್ಪಿದ್ದು1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.












Click it and Unblock the Notifications