GST Meeting: ಇಂದು ಜಿಎಸ್‌ಟಿ ಸಭೆ: ತೆರಿಗೆ ವ್ಯವಸ್ಥೆ ಸರಳೀಕರಣ: ಮಹತ್ವ ನಿರ್ಧಾರ ಪ್ರಕಟ ಸಾಧ್ಯತೆ, ನಿರೀಕ್ಷೆಗಳು
ಬೆಂಗಳೂರು, ಸೆಪ್ಟಂಬರ್ 03: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಇಂದು ಮತ್ತು ನಾಳೆ (ಸೆಪ್ಟೆಂಬರ್ 3 & 4) ರಂದು ಸರಕು ಸೇವಾ ತೆರಿಗೆ (GST) ಕೌನ್ಸಿಲ್ ಸಭೆ ನಡೆಯಲಿದೆ. ಇದು 56ನೇ ಸಭೆಯಾಗಿದೆ. ಇದರಲ್ಲಿ ವಿವಿಧ ರಾಜ್ಯಗಳ ಹಣಕಾಸು ಮಂತ್ರಿಗಳು ಸೇರಲಿದ್ದು, ಹಲವು ಪ್ರಮುಖ ಆರ್ಥಿಕ, ತೆರಿಗೆ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗಾದರೆ ಈ ಸಭೆ ಬಳಿಕ ಏನೆಲ್ಲ ಬದಲಾವಣೆ ಆಗಲಿದೆ, ಜನಸಾಮಾನ್ಯರ ನಿರೀಕ್ಷೆಗಳು ಏನು?
ಸದ್ಯ ದೇಶದಲ್ಲಿರುವ ನಾಲ್ಕು GST ಸ್ಲ್ಯಾಬ್‌ಗಳನ್ನು ಎರಡಕ್ಕೆ ಇಳಿಸುವ ನಿರೀಕ್ಷೆ ಇದೆ. ಈ ಮೂಲಕ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಿಟಿಐ ವರದಿ ಮಾಡಿದೆ. ತೆರಿಗೆ ವ್ಯವಸ್ಥೆ ಸುಧಾರಿಸಿ, ದಕ್ಷತೆ ಹೆಚ್ಚಿಸುವ ಗುರಿ ಇದೆ. ಎರಡು ದಿನಗಳ ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಪ್ರಕಟಿಸಲಾಗುತ್ತದೆ.

ತೆರಿಗೆ ದರವನ್ನು ತರ್ಕಬದ್ಧಗೊಳಿಸುವಿಕೆ ಬಗ್ಗೆ ಮಹತ್ವದ ತಿರ್ಮಾನಗಳು ಆಗಲಿವೆ. ಶೇಕಡಾ 12ರಷ್ಟು ಮತ್ತು ಶೇಕಡಾ 28ರಷ್ಟು ಇರುವ ತೆರಿಗೆ ಸ್ಲ್ಯಾಬ್‌ಗಳನ್ನು ತೆಗೆದುಹಾಕಿ 5% ಮತ್ತು 18% ಮಾತ್ರ ಉಳಿಸುವ ಪ್ರಸ್ತಾಪವಿದೆ. ಇದರೊಂದಿಗೆ ತಂಬಾಕು, ಮದ್ಯ ಮುಂತಾದ ಸರಕುಗಳಿಗೆ 40% ತೆರಿಗೆ ವಿಧಿಸುವ ಕುರಿತು ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ವರದಿ ಆಗಿದೆ.
ಸಭೆಯಲ್ಲಿ ಯಾರೆಲ್ಲ ಭಾಗಿ?
ವಿವಿಧ ರಾಜ್ಯದ ಹಣಕಾಸು ಮಂತ್ರಿಗಳು ಸಭೆಯಲ್ಲಿ ಹಾಜರಿದ್ದರು. GST ದರ ಪರಿಷ್ಕರಣೆಯಿಂದಾಗಿ ಎಲ್ಲಾ ರಾಜ್ಯಗಳು ಎದುರಿಸುತ್ತಿರುವ ಆದಾಯ ನಷ್ಟಗಳಿಗೆ ಪರಿಹಾರ ಒದಗಿಸುವಂತೆ ಅವರು ಕೇಂದ್ರ ಸಚಿವರಲ್ಲಿ ಕೋರಿದರು. ಈ ವೇಳೆ ಕಳೆದ ವಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಎಂಟು ವಿರೋಧ ಪಕ್ಷದ ಆಳ್ವಿಕೆಯ ರಾಜ್ಯಗಳ ನಾಯಕರು ಸಭೆಯಲ್ಲಿದ್ದರು.
ಭಾರತೀಯ ಪಾನೀಯ ಸಂಘದಿಂದ ವಿಶೇಷ ಮನವಿ
ಇದೇ ಸಭೆಯಲ್ಲಿ ಭಾರತೀಯ ಪಾನೀಯ ಸಂಘ (IBA) ಮತ್ತು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ನಂತಹ ಕೈಗಾರಿಕಾ ಸಂಸ್ಥೆಗಳು ಕಾರ್ಬೊನೇಟೆಡ್ ಪಾನೀಯಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಂತೆ ಹಣಕಾಸು ಸಚಿವಾಲಯ ಒತ್ತಾಯಿಸಿವೆ.
ಪ್ರಸ್ತುತ, ಗಾಳಿ ತುಂಬಿದ ಪಾನೀಯಗಳ ಮೇಲೆ ಶೇಕಡಾ 40ರಷ್ಟು ತೆರಿಗೆ (28% GST ಜೊತೆಗೆ 12% ಪರಿಹಾರ ಸೆಸ್) ವಿಧಿಸಲಾಗಿದೆ. ಈ ಪಾನೀಯಗಳ ಮೇಲಿನ GST ದರವನ್ನು ಶೇಕಡಾ 18 ಕ್ಕೆ ಇಳಿಸಲು ಮತ್ತು ಅಂತಹ ಉತ್ಪನ್ನಗಳನ್ನು 'ಪಾಪ ಅಥವಾ ದೋಷ' ವರ್ಗದಿಂದ ದೂರವಿಡಲು ಸಂಘ ಕೇಂದ್ರ ವಿತ್ತ ಸಚಿವರ ಬಳಿ ಮನವಿ ಮಾಡಿದೆ.












Click it and Unblock the Notifications