
ಛತ್ ಪೂಜೆ ವೇಳೆ ಬಿಹಾರದ ವಿವಿಧೆಡೆ 53 ಮಂದಿ ಸಾವು
ಪಾಟ್ನಾ, ನ. 01: ಗುಜರಾತ್‌ನ ಮೊರ್ಬಿ ತೂಗು ಸೇತುವೆ ದುರಂತ ಇನ್ನು ಕಾಡುತ್ತಿರುವಾಗಲೇ ಬಿಹಾರದ ವಿವಿಧ ಭಾಗಗಳಲ್ಲಿ ಛತ್ ಪೂಜೆಯ ವೇಳೆ ನೀರಿನಲ್ಲಿ ಮುಳುಗಿ 53 ಜನರು ಮೃತಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ.
ನಾಲ್ಕು ದಿನಗಳ ಛತ್ ಹಬ್ಬದ ಸಂದರ್ಭದಲ್ಲಿ ಬಿಹಾರದ ವಿವಿಧ ಭಾಗಗಳಲ್ಲಿ ನದಿ ಮತ್ತು ಇತರ ಜಲಮೂಲಗಳಲ್ಲಿ 53 ಜನರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Breaking: ಛತ್ ಪೂಜೆ ವೇಳೆ ಅಗ್ನಿ ದುರಂತ: 30ಕ್ಕೂ ಹೆಚ್ಚು ಮಂದಿಗೆ ಗಾಯ- ಹಲವರ ಸ್ಥಿತಿ ಚಿಂತಾಜನಕ
53 ಜನರ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ಶೀಘ್ರವೇ ಪರಿಹಾರದ ಹಣ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೂಚಿಸಿದ್ದಾರೆ.
ಅಧಿಕೃತ ಮಾಹಿತಿ ಪ್ರಕಾರ, ಅಕ್ಟೋಬರ್ 30 ರಂದು ಪೂರ್ಣಿಯಾ ಜಿಲ್ಲೆಯಲ್ಲಿ ಐದು ಜನರು ನದಿಯಲ್ಲಿ ಮುಳುಗಿದ್ದಾರೆ. ಪಾಟ್ನಾ, ಮುಜಾಫರ್‌ಪುರ, ಸಮಸ್ತಿಪುರ್ ಮತ್ತು ಸಹರ್ಸಾದಿಂದ ತಲಾ ಮೂರು ಸಾವುಗಳು ವರದಿಯಾಗಿವೆ.
ಇದಲ್ಲದೆ, ಗಯಾ, ಬೇಗುಸರೈ, ಕತಿಹಾರ್, ಬಕ್ಸರ್, ಕೈಮೂರ್, ಸಿತಾಮರ್ಹಿ ಮತ್ತು ಬಂಕಾ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

"ಹಬ್ಬದ ಕೊನೆಯ ದಿನವಾದ ಅಕ್ಟೋಬರ್ 31 ರಂದು ರಾಜ್ಯದಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ರಾಜ್ಯ ವಿಪತ್ತು ನಿರ್ವಹಣೆ ಇಲಾಖೆಯು ಎಲ್ಲಾ ಮೃತರ ಗುರುತನ್ನು ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನಿಸುತ್ತಿದೆ" ಎಂದು ಅಧಿಕಾರಿ ಹೇಳಿದ್ದಾರೆ.
ಮೃತರಲ್ಲಿ ಮಹಿಳೆಯರ ಜೊತೆಗೆ 24 ಮಕ್ಕಳು ಸೇರಿದ್ದಾರೆ. ಪಾಟ್ನಾದ ಗೌರಿಚಕ್‌ನಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಭಾಗಲುಪರ್‌ನಲ್ಲಿ ಏಳು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದಲ್ಲದೇ ಸಮಸ್ತಿಪುರದಲ್ಲಿ ನೀರಿನಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿದ್ದಾರೆ. ಕೋಸಿ-ಗಂಗಾ ಮತ್ತು ಅದರ ಉಪನದಿಗಳ ಘಾಟ್‌ಗಳಲ್ಲಿ ಹೆಚ್ಚಿನ ಪ್ರಕರಣಗಳು ಸಂಭವಿಸಿವೆ.
ಛತ್ ಪೂಜೆ; ಛತ್ ಪೂಜೆ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದ ಪೂರ್ವ ಭಾಗ, ದೆಹಲಿ, ಪಶ್ಚಿಮ ಬಂಗಾಳ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಹೆಚ್ಚು ಆಚರಿಸಲಾಗುತ್ತದೆ. ಈ ದಿನ ಭಕ್ತರು ಸೂರ್ಯ ದೇವರು ಮತ್ತು ಆತನ ಸಹೋದರಿ ಷಷ್ಠಿ ದೇವಿಯನ್ನು ಪೂಜಿಸುತ್ತಾರೆ. ಷಷ್ಠಿ ದೇವಿಯನ್ನು ಛತ್ತಿ ಮೈಯಾ ಎಂದೂ ಕರೆಯುತ್ತಾರೆ.
ಆರೋಗ್ಯಕರ, ಸಂತೋಷ ಮತ್ತು ಸಮೃದ್ಧ ಜೀವನಕ್ಕಾಗಿ ಸೂರ್ಯನಿಂದ ಆಶೀರ್ವಾದ ಪಡೆಯಲು ಛತ್ ಪೂಜೆ ನಡೆಸಲಾಗುತ್ತದೆ. ಈ ದಿನಗಳಲ್ಲಿ ಭಕ್ತರು ಮೂರು ದಿನಗಳ ಕಾಲ ಉಪವಾಸ ಮಾಡುತ್ತಾರೆ. ಆಚರಣೆಗಳಲ್ಲಿ ನೀರಿನಲ್ಲಿ ಪವಿತ್ರ ಸ್ನಾನ ಮಾಡುವುದು ಮತ್ತು ನೀರಿನಲ್ಲಿ ಅರ್ಧ ಮುಳುಗಿ ನಿಂತು ಅರ್ಘ್ಯವನ್ನು ಅರ್ಪಿಸುವುದು ಸೇರಿದೆ.