ಪಾಕಿಸ್ತಾನ ಪರ ಘೋಷಣೆ: ಬಿಹಾರದಲ್ಲಿ ಐವರ ಬಂಧನ
ಭೋಜ್‌ಪುರ, ಡಿಸೆಂಬರ್ 24: ಕೆಲವು ಯುವಕರು 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಬಿಹಾರದ ಅರ್ರಾ ಜಿಲ್ಲೆಯಲ್ಲಿ ಐವರನ್ನು ಬಂಧಿಸಲಾಗಿದೆ.
ಭೋಜ್‌ಪುರದ ಚಾಂಡಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಬ್ಯಾಡ್ಮಿಂಟನ್ ಆಟದ ನಂತರ ಗುಂಪು ತಮ್ಮ ವಿಜಯೋತ್ಸವವನ್ನು ಆಚರಿಸಿತು. ಆ ಸಮಯದಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ.
ನೀಲಿ ಬಣ್ಣದ ಬಟ್ಟೆ ತೊಟ್ಟ ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ.
ವಿಜಯೋತ್ಸವದ ಮೆರವಣಿಗೆಯಲ್ಲಿ ಇಬ್ಬರು ಟ್ರೋಫಿಯನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. ಯುವಕರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ.

ಇತರೆ ಆರೋಪಿಗಳ ಪತ್ತೆಗೆ ಪೊಲೀಸರು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಹೆಚ್ಚಿನ ತನಿಖೆ ನಡೆಯುತ್ತಿದ್ದು, ಬಂಧಿತ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಎಸ್‌ಎಚ್‌ಒ ಚಾಂಡಿ, 'ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದೇವೆ ಮತ್ತು ಮುಂದಿನ ಕ್ರಮ ಕೈಗೊಳ್ಳುತ್ತಿದ್ದೇವೆ' ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಡಳಿತ ಪಕ್ಷದ ನಾಯಕರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದ್ದಾರೆ. ವಿರೋಧ ಪಕ್ಷವಾದ ಬಿಜೆಪಿಯು ಘಟನೆಯನ್ನು ಖಂಡಿಸಿದ್ದು, ಆರೋಪಿಗಳನ್ನು ಆದಷ್ಟು ಬೇಗನೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದೆ.
ಕರ್ನಾಟಕದ ಹುಬ್ಬಳ್ಳಿಯಲ್ಲೂ ಈ ಹಿಂದೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣವು ದೇಶದಾದ್ಯಂತ ಸದ್ದು ಮಾಡಿತ್ತು. ಕರ್ನಾಟಕ ಪೋಲಿಸರು ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಂಡಿದ್ದರು.
ದೇಶದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಆಂತಕದ ವಿಚಾರವಾಗಿ ಪರಿಣಮಿಸಿದೆ.












Click it and Unblock the Notifications