ಕೊರೊನಾಗೆ ಬಲಿಯಾದ 382 ವೈದ್ಯರ ತ್ಯಾಗ ಕಡೆಗಣಿಸಿದ ಸರ್ಕಾರ: ಐಎಂಎ ಆರೋಪ
ನವದೆಹಲಿ, ಸೆಪ್ಟೆಂಬರ್ 17: ಇದುವರೆಗೂ ಕೊರೊನಾ ವೈರಸ್‌ಗೆ ದೇಶದಲ್ಲಿ 382 ವೈದ್ಯರು ಬಲಿಯಾಗಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ. ಅತಿ ಸಣ್ಣ ವಯಸ್ಸಿನ, ಎಂದರೆ 27 ವರ್ಷದ ವೈದ್ಯ ಹಾಗೂ 85 ವರ್ಷದ ಹಿರಿಯ ವೈದ್ಯರು ಇದಕ್ಕೆ ಬಲಿಯಾಗಿರುವುದಾಗಿ ಅದು ತನ್ನ ಪಟ್ಟಿಯಲ್ಲಿ ಮಾಹಿತಿ ನೀಡಿದೆ.
ಆದರೆ ಸಂಸತ್ ಅಧಿವೇಶನದಲ್ಲಿ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹಾಗೂ ಅವರ ಕಿರಿಯ ಸಚಿವರು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರ ಪ್ರಾಣತ್ಯಾಗದ ಬಗ್ಗೆ ಒಂದೂ ಮಾತೂ ಆಡಿಲ್ಲ ಎಂದು ಐಎಂಎ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರವು ಹೀರೋಗಳ ಪರಿತ್ಯಾಗ, ಪದತ್ಯಾಗಗಳ ಬಗ್ಗೆ ಉದಾಸೀನತೆ ತೋರಿಸುತ್ತಿದೆ. ಸಾಂಕ್ರಾಮಿಕ ಕಾಯ್ದೆ 1897 ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ನಿರ್ವಹಣೆ ಮಾಡಲು ಸರ್ಕಾರ ನೈತಿಕ ಅಧಿಕಾರವನ್ನೇ ಕಳೆದುಕೊಂಡಿದೆ ಎಂದು ಐಎಂಎ ಕಿಡಿಕಾರಿದೆ.

ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಸರ್ಕಾರ ಶ್ಲಾಘಿಸಿದ್ದರೂ, ಕಾಯಿಲೆಯಿಂದ ಮೃತಪಟ್ಟ ಆರೋಗ್ಯ ವೃತ್ತಿಪರರ ಬಗ್ಗೆ ಉಲ್ಲೇಖವನ್ನೇ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳು ರಾಜ್ಯ ಸರ್ಕಾರಗಳ ಅಡಿ ಬರುವುದರಿಂದ ಯಾವುದೇ ಪರಿಹಾರ ದಾಖಲೆಗಳಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿಕೆ ನೀಡಿದ್ದರು. ಇದು ನಮ್ಮ ಜನರಿಗಾಗಿ ಶ್ರಮಿಸಿದ ನಮ್ಮ ಹೀರೋಗಳ ತ್ಯಾಗವನ್ನು ಸರ್ಕಾರ ಕಡೆಗಣಿಸಿರುವುದಕ್ಕೆ ಉದಾಹರಣೆ. ಕೋವಿಡ್‌ನಿಂದ ಮೃತಪಟ್ಟ ವೈದ್ಯರ ಕುಟುಂಬದವರಿಗೆ ಅಷ್ಟೇನೂ ಸಹಾಯವಾಗದಂತಹ ವಿಮೆ ಯೋಜನೆಯನ್ನು ಸರ್ಕಾರ ನೀಡಿದೆ ಎಂದು ಐಎಂಎ ಆರೋಪಿಸಿದೆ.
ಒಂದೆಡೆ ಅವರನ್ನು ಕೊರೊನಾ ವಾರಿಯರ್‌ಗಳು ಎಂದು ಕರೆಯಲಾಗುತ್ತಿದೆ. ಇನ್ನೊಂದೆಡೆ ಅವರ ಪ್ರಾಣತ್ಯಾಗಕ್ಕೆ ತಕ್ಕಂತೆ ಕುಟುಂಬದವರಿಗೆ ಹಾಗೂ ವೈದ್ಯರಿಗೆ ಆ ಗೌರವ ನೀಡುವುದನ್ನೂ ಸರ್ಕಾರ ನಿರಾಕರಿಸುತ್ತಿದೆ ಎಂದು ಟೀಕಿಸಿದೆ.












Click it and Unblock the Notifications