ದೇಶದಲ್ಲಿ 35,342 ಹೊಸ ಕೊರೊನಾ ಪ್ರಕರಣ ದಾಖಲು; ಚೇತರಿಕೆ ಪ್ರಮಾಣ ಏರಿಕೆ
ನವದೆಹಲಿ, ಜುಲೈ 23: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಹಾಗೂ ಸಾವನ್ನಪ್ಪಿರುವವರ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಹೊಸದಾಗಿ ದಾಖಲಾದ ಕೊರೊನಾ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 35,342 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಸಾವಿನ ಸಂಖ್ಯೆ ತಗ್ಗಿದ್ದು, ಒಂದು ದಿನದ ಅವಧಿಯಲ್ಲಿ 483 ಮಂದಿ ಸೋಂಕಿನಿಂದ ಸಾವನ್ನಪ್ಪಿರುವ ವರದಿಯಾಗಿದೆ. ಸೋಂಕಿನಿಂದ ಸಂಭವಿಸಿದ ಸಾವಿನ ಪ್ರಕರಣಗಳಲ್ಲಿ ಏಕಾಏಕಿ ಇಳಿಕೆಯಾಗಿವೆ.
ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಹೊಸ ಸೋಂಕಿತ ಪ್ರಕರಣಗಳಿಗಿಂತ ಹೆಚ್ಚಾಗಿ, ಒಂದೇ ದಿನದಲ್ಲಿ 38,740 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಶುಕ್ರವಾರದ ಅಂಕಿಸಂಖ್ಯೆ ಮೂಲಕ ಇದುವರೆಗೂ ದೇಶದಲ್ಲಿ ಒಟ್ಟು 3,12,93,062 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 3,04,68,079 ಮಂದಿ ಗುಣಮುಖರಾಗಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 4,05,513 ಆಗಿದೆ. ಇದುವರೆಗೂ ಸೋಂಕಿನಿಂದ 4,19,470 ಮಂದಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಆರಂಭಿಸಲಾಗಿದ್ದು, ಇದುವರೆಗೂ 42,34,17,030 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಇದರೊಂದಿಗೆ ಕೊವಿಡ್-19 ಲಸಿಕೆ ಪಡೆದ ನಂತರದಲ್ಲಿ ಹೊಸ ಸೋಂಕಿತ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿರುವುದೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇದರೊಂದಿಗೆ, ಭಾರತದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯು ಸೆಪ್ಟೆಂಬರ್- ಅಕ್ಟೋಬರ್ ವೇಳೆಗೆ ಕಾಣಿಸಿಕೊಳ್ಳಲಿದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ತಿಳಿಸಿದ್ದಾರೆ. "ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ನಾಲ್ಕನೇ ರಾಷ್ಟ್ರೀಯ ಸೆರೋ ಸರ್ವೆಯಲ್ಲಿ, ದೇಶದ ಮೂರನೇ ಎರಡರಷ್ಟು ಮಂದಿ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿ ಹೊಂದಿರುವುದಾಗಿ ತಿಳಿಸಿದೆ. ಜೊತೆಗೆ ಲಸಿಕಾ ಪ್ರಕ್ರಿಯೆಯನ್ನೂ ಚುರುಕುಗೊಳಿಸಲಾಗಿದೆ. ಇವೆಲ್ಲವೂ ಮೂರನೇ ಅಲೆ ಪ್ರಭಾವವನ್ನು ತಗ್ಗಿಸಬಹುದಾಗಿದೆ" ಎಂದು ಅವರು ಹೇಳಿದ್ದಾರೆ.












Click it and Unblock the Notifications