ಪಶ್ಚಿಮ ಬಂಗಾಳದ 25,000 ಶಿಕ್ಷಕರ ವಜಾ: ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದೇನು ಗೊತ್ತಾ?
Teacher dismissal In West Bengal: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶಾಕ್ ನೀಡಿದ್ದು, 25,000 ಶಿಕ್ಷಕರನ್ನು ವಜಾಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 25,000 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯನ್ನು ರದ್ದುಗೊಳಿಸಿದ್ದ ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು (ಏಪ್ರಿಲ್ 2) ಎತ್ತಿ ಹಿಡಿದಿದೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 25,753 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಕ ಮಾಡಿದ್ದ ಶಾಲಾ ಸೇವಾ ಆಯೋಗದ(ಎಸ್‌ಎಸ್‌ಸಿ) ಪ್ರಕ್ರಿಯೆಯನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್‌ನಲ್ಲೂ ದೀದಿ ಸರ್ಕಾರಕ್ಕೆ ಹಿನ್ನಡೆ ಆಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿವಿ ಸಂಜಯ್ ಕುಮಾರ್ ಅವರ ಪೀಠ, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ ಅಡಿಯಲ್ಲಿ ನೇಮಕಗೊಂಡ 25,000ಕ್ಕೂ ಅಧಿಕ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ವಂಚನೆಯಿಂದ ಕೂಡಿದೆ ಎಂದು ಹೇಳಿದ ಪೀಠ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ.
ಈ ಬಗ್ಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರತಿಕ್ರಿಯಿಸಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ವೈಯಕ್ತಿಕವಾಗಿ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸರ್ಕಾರ ಜಾರಿಗೆ ತಂದು ಆಯ್ಕೆ ಪ್ರಕ್ರಿಯೆಯನ್ನು ಪುನರಾವರ್ತಿಸುತ್ತದೆ. ವಿಪಕ್ಷ ಬಿಜೆಪಿ ಮತ್ತು ಸಿಪಿಎಂ ಬಂಗಾಳದ ಶಿಕ್ಷಣ ವ್ಯವಸ್ಥೆ ಕುಸಿಯಬೇಕೆಂದು ಬಯಸುತ್ತವೆಯೇ? ಎಂದು ಪ್ರಶ್ನಿಸಿದರು.
ಈ ದೇಶದ ನಾಗರಿಕಳಾಗಿ ನನಗೆ ಎಲ್ಲಾ ಹಕ್ಕಿದೆ. ನಾನು ಮಾನವೀಯ ದೃಷ್ಟಿಕೋನದಿಂದ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ. ನ್ಯಾಯಮೂರ್ತಿಗಳ ಮೇಲೆ ಅಪಾರ ಗೌರವ ಇದೆ. ಆದರೆ, ನಾನು ಈ ತೀರ್ಪನ್ನು ಒಪ್ಪುತ್ತಿಲ್ಲ ಎಂದು ಹೇಳಲು ಬಯಸುತ್ತೇನೆ. ಅನಗತ್ಯ ತಪ್ಪು ಮಾಹಿತಿ ನೀಡಬೇಡಿ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ತೀರ್ಪು ಕೇವಲ ಅಭ್ಯರ್ಥಿಗಳು ಮಾತ್ರವಲ್ಲ, ಅವರ ಕುಟುಂಬದ ಮೇಲೂ ಪರಿಣಾಮ ಬೀರಿದೆ. ಇನ್ನೂ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ನಿವಾಸದಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದ್ದನ್ನು ಉಲ್ಲೇಖಿಸಿ, ನ್ಯಾಯಾಧೀಶರ ಮನೆಯಲ್ಲಿ ಹಣ ಪತ್ತೆಯಾದರೆ ಅವರನ್ನು ವರ್ಗಾಯಿಸಲಾಗುತ್ತದೆ. ಹಾಗಾದರೆ ಈ ಶಿಕ್ಷಕರನ್ನು ಏಕೆ ವರ್ಗಾಯಿಸಲಾಗಿಲ್ಲ? ಈ ಆದೇಶವನ್ನು ನೀಡಿದ ಮೊದಲ ನ್ಯಾಯಾಧೀಶರು ಈಗ ಬಿಜೆಪಿ ಸಂಸದರಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್ ಅವರ ಪೀಠವು ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ. ನ್ಯಾಯಯುತ ವಿಧಾನಗಳ ಮೂಲಕ ನೇಮಕಗೊಂಡವರು ಸಹ ಕಳಂಕಿತ ಅಭ್ಯರ್ಥಿಗಳಂತೆ ತೊಂದರೆ ಅನುಭವಿಸಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications