23 ವರ್ಷದ ಟೆಕಿ ನೋಯ್ಡಾದಲ್ಲಿ ಕೊಲೆ, ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ನೋಯ್ಡಾ, ಮೇ 31: ನೋಯ್ಡಾದ ಸೆಕ್ಟರ್ 62ರ ಹೌಸಿಂಗ್ ಸೊಸೈಟಿ ಶತಾಬ್ದಿ ರೈಲ್ ವಿಹಾರ್ ನಲ್ಲಿ ಬುಧವಾರ ಇಪ್ಪತ್ಮೂರು ವರ್ಷದ ಟೆಕಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಸೆಕ್ಟರ್ 64ರಲ್ಲಿರುವ ಲಾವಾ ಮೊಬೈಲ್ ಫೋನ್ ತಯಾರಿಕಾ ಕಂಪೆನಿಯಲ್ಲಿ ಆಕೆ ಟ್ರೇನಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಹರಿಯಾಣ ಮೂಲದ ಯಮುನಾ ನಗರ್ ದವರಾದ ಅಂಜಲಿ ರಾಥೋರ್ ಕೊಲೆಯಾದವರು. ಬೆಳಗ್ಗೆ ಆರು ಮೂವತ್ತರ ವೇಳೆಗೆ ಈ ಘಟನೆ ನಡೆದಿದೆ. ಎಲಿವೇಟರ್ ಬಳಿ ಹಾಕಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕೊಲೆಯ ದೃಶ್ಯ ಸೆರೆಯಾಗಿದೆ. ಆದರೆ ಪೊಲೀಸರು ಇನ್ನೂ ಕೊಲೆಗಾರನ ಪತ್ತೆ ಮಾಡಬೇಕಿದೆ. ಆಕೆಯನ್ನು ನೋಡಿದ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದಾರೆ.

ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯಲ್ಲಿ ಘೋಷಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಕಳೆದ ಒಂದು ವರ್ಷದಿಂದ ಅಂಜಲಿ ಲಾವಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ ನಲ್ಲಿ ಆಕೆಗೆ ಬಡ್ತಿ ಸಿಗಬೇಕಿತ್ತು. ಜಲಂಧರ್ ನ ಲವ್ಲಿ ವಿವಿಯಲ್ಲಿ ಆಕೆ ಪದವಿ ಪೂರ್ಣಗೊಳಿಸಿದ್ದರು.
ಪೊಲೀಸರ ಪ್ರಕಾರ, ಬೆಳಗ್ಗೆ ಆರು ಗಂಟೆಗೆ ಗೆಳೆಯರೊಬ್ಬರು ಕರೆ ಮಾಡಿದ್ದಾರೆ. ಆ ನಂತರ ಅಪಾರ್ಟ್ ಮೆಂಟ್ ನಿಂದ ಆಕೆ ಕೆಳಗೆ ಬಂದಿದ್ದಾರೆ. ಉತ್ತರ ಪ್ರದೇಶ ಮೂಲದ ಆಕೆಯ ಗೆಳೆಯನೇ ಕೊಲೆ ಮಾಡಿರಬಹುದು ಎಂದು ಅಂಜಲಿ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಆತ ಅಂಜಲಿ ಸಹಪಾಠಿಯಾಗಿದ್ದ. ಕಾಲ್ ರೆಕಾರ್ಡ್ಸ್ ನಲ್ಲಿ ಆತನ ಮೊಬೈಲ್ ಸಂಖ್ಯೆ ಕೂಡ ಇದೆ.












Click it and Unblock the Notifications