ಎರಡು ರೀತಿಯ 500 ರು. ನೋಟು ಬಿಡುಗಡೆ: ಕಾಂಗ್ರೆಸ್ ಆರೋಪ
ಅಪನಗದೀಕರಣದ ನಂತರ ಕೇಂದ್ರ ಸರ್ಕಾರವು ಎರಡು ರೀತಿಯ 500 ರು. ನೋಟುಗಳನ್ನು ಮುದ್ರಿಸಿದೆ ಎಂದು ಕಾಂಗ್ರೆಸ್ ಆರೋಪ. ರಾಜ್ಯಸಭೆಯ ಕಲಾಪದಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್.
ನವದೆಹಲಿ, ಆಗಸ್ಟ್ 8: ಅಪನಗದೀಕರಣದ ನಂತರ, ದೇಶದಲ್ಲಿ ಎರಡು ಮಾದರಿಯ 500 ರು. ನೋಟುಗಳನ್ನು ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಭಾರೀ ದೊಡ್ಡ ಹಗರಣವನ್ನು ಮಾಡಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆರೋಪಿಸಿದರು.
ಮಂಗಳವಾರ ನಡೆದ ರಾಜ್ಯಸಭೆಯ ಕಲಾಪದ ವೇಳೆ, ಈ ವಿಚಾರ ಪ್ರಸ್ತಾಪಿಸಿದ ಕಪಿಲ್ ಸಿಬಲ್, ''ಅಪನಗದೀಕರಣದ ವೇಳೆ, ಎರಡು ರೀತಿಯ ನೋಟುಗಳನ್ನು ಮುದ್ರಣ ಮಾಡಲಾಗಿದೆ. ಈ ಎರಡು ಬಗೆಯ ನೋಟುಗಳು ನೋಡಲು ಒಂದೇ ಥರ ಇದ್ದರೂ, ಅಳತೆಯಲ್ಲಿ ವ್ಯತ್ಯಾಸವಿದೆ. '' ಎಂದರು. ಇದು ಈ ಶತಮಾನದ ಅತಿ ದೊಡ್ಡ ಹಗರಣ ಎಂದು ಅವರು ಆರೋಪಿಸಿದರು.

ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ನ ಹಿರಿಯ ನಾಯಕ, ಗುಲಾಂ ನಬಿ ಆಜಾದ್, ''ಇದರಲ್ಲಿ ಒಂದು ಬಗೆಯ ನೋಟುಗಳನ್ನು ಜನ ಬಳಕೆಗೆ ನೀಡಿದ್ದರೆ, ಮತ್ತೊಂದು ಬಗೆಯ ನೋಟುಗಳನ್ನು ಬಿಜೆಪಿ ಖಜಾನೆಗೆ ಸೇರಿಸಲಾಗಿದೆ. ಹೀಗಾಗಿಯೇ, ಬಿಜೆಪಿಗೆ ಅತಿ ಹೆಚ್ಚು ಡೊನೇಷನ್ ಬಂದಿರುವ ದಾಖಲೆಗಳಿವೆ'' ಎಂದು ಆರೋಪಿಸಿದರು.
ಆದರೆ, ಇದಕ್ಕೆ ಉತ್ತರಿಸಿದ ಅರುಣ್ ಜೇಟ್ಲಿ ಅವರು, ''ಇವೆಲ್ಲವೂ ಬೇಜವಾಬ್ದಾರಿ ಹೇಳಿಕೆಗಳು'' ಎಂದು ಟೀಕಿಸಿದರು. ಇದರಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಏರ್ಪಟ್ಟಿತು. ಕಾಂಗ್ರೆಸ್ ನ ಸತತ ವಾಗ್ವಾದದ ನಡುವೆಯೂ ಕೇಂದ್ರ ಸರ್ಕಾರ ಆರೋಪಗಳನ್ನು ತಳ್ಳಿಹಾಕಿತು.












Click it and Unblock the Notifications