ಹರಿಯಾಣದಲ್ಲಿ ವಿಷಕಾರಿ ಮದ್ಯ ಸೇವಿಸಿ 19 ಸಾವು, 7 ಮಂದಿ ಬಂಧನ!
ಚಂಡೀಗಢ ನವೆಂಬರ್ 11: ವಿಷಯುಕ್ತ ಮದ್ಯ ಸೇವಿಸಿ 19 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಹರಿಯಾಣದಲ್ಲಿ ನಡೆದಿದೆ. ಇದರಿಂದಾಗಿ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಮತ್ತು ಜನತಾ ಪಕ್ಷದ (ಜೆಜೆಪಿ) ನಾಯಕನ ಪುತ್ರರು ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ .
ಯಮುನಾನಗರದ ಮಂಡೆಬರಿ (Mandebari), ಪಂಜೆಟೊನ ಮಜ್ರಾ(Panjeto Ka Majra), ಫೂಸ್‌ಗಢ (Phoosgarh) ಮತ್ತು ಸರನ್ (Saran) ಗ್ರಾಮಗಳು ಮತ್ತು ನೆರೆಯ ಅಂಬಾಲಾ ಜಿಲ್ಲೆಯ ಗ್ರಾಮಗಳಲ್ಲಿ ಸಾವುಗಳು ಸಂಭವಿಸಿವೆ. ಈ ಸಾವಿನ ಬಗ್ಗೆ ವಿರೋಧ ಪಕ್ಷಗಳು ಮನೋಹರ್ ಲಾಲ್ ಖಟ್ಟರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಹಿಂದೆ ನಡೆದ ಇಂತಹ ಘಟನೆಗಳಿಂದ ಪಾಠ ಕಲಿಯಲು ಹರಿಯಾಣ ಸರ್ಕಾರ ವಿಫಲವಾಗಿದೆ ಎಂದು ಪಕ್ಷಗಳು ಆರೋಪಿಸಿವೆ.

"ನನ್ನ ತಂದೆ ನಿನ್ನೆ ರಾತ್ರಿ ಆಲ್ಕೋಹಾಲ್ ವಿಷದಿಂದ ನಿಧನರಾದರು. ಅವರು ಮದ್ಯದ ವ್ಯಸನಿಯಾಗಿದ್ದರು. ಆದರೆ ಅವರು ಸಾಮಾನ್ಯವಾಗಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸೇವಿಸುತ್ತಿದ್ದರು. ಅವರು ಈ ಹಿಂದೆ ಮದ್ಯಪಾನದಿಂದ ಸಾವನ್ನಪ್ಪಿದ ಸ್ನೇಹಿತರೊಂದಿಗೆ ಕುಡಿಯುತ್ತಿದ್ದರು. ಈಗ ಹಳೆಯ ಬಲಿಪಶುಗಳಲ್ಲಿ ತನ್ನ ತಂದೆ ಒಬ್ಬರಾಗಿದ್ದಾರೆ" ಎಂದು 70 ವರ್ಷದ ರವೀಂದರ್ ಬೇಸರ ವ್ಯಕ್ತಪಡಿಸಿದರು.
ಪೊಲೀಸರು ಇದುವರೆಗೆ ಏಳು ಮಂದಿ ಶಂಕಿತರನ್ನು ಬಂಧಿಸಿದ್ದು, ಹೆಚ್ಚಿನವರನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ಆದರೆ ಗ್ರಾಮಸ್ಥರು ಈ ಮದ್ಯ ದಂಧೆಕೋರರ ವಿರುದ್ಧ ಬಹಿರಂಗವಾಗಿ ಮಾತನಾಡಲು ಭಯಪಡುತ್ತಿದ್ದು ಅವರಿಗೆ ಜೀವ ಭಯವಿದೆ ಎಂದು ಹೇಳಲಾಗುತ್ತಿದೆ. "ನನಗೆ ಭಯವಾಗಿದೆ, ನಾವು ಧ್ವನಿ ಎತ್ತಿದರೆ ನಮ್ಮ ಜೀವಕ್ಕೆ ಅಪಾಯವಿದೆ" ಎಂದು ಹೆಸರು ಹೇಳಲು ಇಚ್ಚಿಸದ ಗ್ರಾಮಸ್ಥರೊಬ್ಬರು ಸ್ಥಳೀಯ ಸುದ್ದಿಗಾರರಿಗೆ ಹೇಳಿದ್ದಾರೆ.

ಮಾತ್ರವಲ್ಲದೆ ಈ ಜಿಲ್ಲೆಯಲ್ಲಿ ಅಕ್ರಮವಾಗಿ ತಯಾರಿಸಿದ ಶಂಕಿತ ನಕಲಿ ಮದ್ಯವನ್ನು ಸೇವಿಸಿ ಉತ್ತರ ಪ್ರದೇಶದ ಇಬ್ಬರು ವಲಸೆ ಕಾರ್ಮಿಕರು ಗುರುವಾರ ಅಂಬಾಲಾದಲ್ಲಿ ಸಾವನ್ನಪ್ಪಿದ್ದಾರೆ. ಅಂಬಾಲ ಪೊಲೀಸರು ಕಾರ್ಖಾನೆಯಲ್ಲಿ ತಯಾರಿಸಿದ 200 ಕ್ರೇಟ್ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಯಮುನಾನಗರದಲ್ಲಿ ಬಂಧಿತ ಶಂಕಿತರಿಗೆ ಇದನ್ನು ಸರಬರಾಜು ಮಾಡಿದ್ದಾರೆ ಎಂದು ತಿಳಿದು ಬಂದಿದೆ. 14 ಖಾಲಿ ಡ್ರಮ್‌ಗಳು ಮತ್ತು ಅಕ್ರಮ ಮದ್ಯ ತಯಾರಿಸಲು ಬಳಸಿದ್ದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಗಾಗಿ ಯಮುನಾನಗರ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ.












Click it and Unblock the Notifications