ಶಾಲೆಯ ಆವರಣದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಹಪಾಠಿಗಳಿಂದಲೇ ಸಾಮೂಹಿಕ ಅತ್ಯಾಚಾರ
ಮುಂಬೈ, ನವೆಂಬರ್ 02: ಮುಂಬೈನ ಶಾಲೆಯೊಂದರ ತರಗತಿಯಲ್ಲಿಯೇ 13 ವರ್ಷದ ಸಹಪಾಠಿಯ ಮೇಲೆ ಇಬ್ಬರು ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ನಡೆದ ಘಟನೆಯು ಸೋಮವಾರ ನಡೆದಿದೆ ಎಂದು ತಿಳಿದುಬಂದಿದೆ.
'ಬಾಲಕಿಯ ಮೇಲೆ ಆಕೆಯ ಇಬ್ಬರು ಸಹಪಾಠಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಉಳಿದ ಸಹಪಾಠಿಗಳು ನೃತ್ಯ ಅಭ್ಯಾಸಕ್ಕಾಗಿ ತರಗತಿಯಿಂದ ಹೊರಬಂದಿದ್ದಾರೆ. ಆ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಇಬ್ಬರು ಆರೋಪಿಗಳು, ಪರಿಸ್ಥಿತಿಯ ಲಾಭ ಪಡೆದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು 'ಎನ್‌ಡಿಟಿವಿ'ಗೆ ತಿಳಿಸಿದ್ದಾರೆ.

ಬಾಲಕಿ ಮತ್ತು ಆರೋಪಿಗಳು 8ನೇ ತರಗತಿಯ ವಿದ್ಯಾರ್ಥಿಗಳು ಎಂದು ಅವರು ಹೇಳಿದ್ದಾರೆ.
'ಈ ಘಟನೆಯು ಬಾಲಕಿಗೆ ಆಘಾತವನ್ನುಂಟು ಮಾಡಿದೆ. ಆಕೆ ಕುಟುಂಬ ಸದಸ್ಯರೊಂದಿಗೆ ತನ್ನ ಸಂಕಟವನ್ನು ಹಂಚಿಕೊಂಡಿದ್ದಾಳೆ. ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕುಟುಂಬ ಸದಸ್ಯರು ತಕ್ಷಣವೇ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ' ಎಂದು ಅಧಿಕಾರಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಪೊಲೀಸರು ಬಾಲಕರ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376 ಡಿಎ (ಹದಿನಾರು ವರ್ಷದೊಳಗಿನ ಬಾಲಿಕೆಯ ಮೇಲೆ ಸಾಮೂಹಿಕ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಗೆ (POCSO) ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಪ್ರಾಪ್ತ ಆರೋಪಿಗಳನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ದಕ್ಷಿಣ ಮುಂಬೈನಲ್ಲಿರುವ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications