ಓಮಿಕ್ರಾನ್ ಎಚ್ಚರಿಕೆ: ಅನಗತ್ಯ ಪ್ರಯಾಣ, ಕೂಟಗಳಿಂದ ದೂರವಿರಿ
ನವದೆಹಲಿ, ಡಿಸೆಂಬರ್ 17: ಭಾರತದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಹರಡುವಿಕೆ ವೇಗ ಹೆಚ್ಚಾಗುತ್ತಿದೆ. ದೇಶದಲ್ಲಿ ಈವರೆಗೂ 101 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ವರದಿಯಾಗಿದ್ದು, 19 ಜಿಲ್ಲೆಗಳು ಹೆಚ್ಚು ಅಪಾಯ ಎದುರಿಸುತ್ತಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಚ್ಚರಿಸಿದೆ.
ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕರು ಅಗತ್ಯ ಮಾರ್ಗಸೂಚಿ ಹಾಗೂ ನಿಯಮಗಳನ್ನು ಪಾಲಿಸಬೇಕು. ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅನಗತ್ಯ ಪ್ರಯಾಣದಿಂದ ಅಂತರ ಕಾಯ್ದುಕೊಳ್ಳುವುದು ತುರ್ತು ಅವಶ್ಯಕತೆಯಾಗಿದೆ. ಅತಿಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಂದ ದೂರವಿರಬೇಕು, ಅನಗತ್ಯ ಪ್ರಯಾಣ ಮಾಡಬಾರದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಒಂದೇ ದಿನ ದೆಹಲಿಯಲ್ಲೇ 10 ಮಂದಿ ಓಮಿಕ್ರಾನ್ ಸೋಂಕು
ಶುಕ್ರವಾರ ಒಂದೇ ದಿನ ದೆಹಲಿಯಲ್ಲೇ 10 ಮಂದಿ ಓಮಿಕ್ರಾನ್ ಸೋಂಕು ತಗುಲಿರುವುದು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಈವರೆಗೂ 20 ಓಮಿಕ್ರಾನ್ ಸೋಂಕಿತ ಪ್ರಕರಣ ವರದಿಯಾಗಿದ್ದು, 10 ಸೋಂಕಿತರು ಗುಣಮುಖರಾಗಿದ್ದಾರೆ. ನವದೆಹಲಿಯಲ್ಲಿ 137 ದಿನಗಳ ನಂತರ ಮೊದಲ ಬಾರಿಗೆ ಒಂದೇ ದಿನ 85 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದಕ್ಕೂ ಮುನ್ನ ದಿನ ದೆಹಲಿಯಲ್ಲಿ ಗುರುವಾರ 57 ಮತ್ತು ಬುಧವಾರ 45 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿ ಆಗಿರುವುದು ಆತಂಕವನ್ನು ಹೆಚ್ಚಿಸುತ್ತಿದೆ.

ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ:
ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಅತಿಹೆಚ್ಚು ವರದಿಯಾಗುತ್ತಿರುವ ಪ್ರದೇಶಗಳನ್ನು ಗುರುತಿಸುವುದು. ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಗೆ ಈಗಾಗಲೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಸೂಚನೆಗಳನ್ನು ನೀಡಲಾಗಿದೆ.

ರಾಜ್ಯಗಳಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳು:
ಭಾರತದಲ್ಲಿ ಗುರುವಾರ ಒಂದೇ ದಿನ 10 ಓಮಿಕ್ರಾನ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಕರ್ನಾಟಕದಲ್ಲಿ 5, ದೆಹಲಿಯಲ್ಲಿ 4 ಹಾಗೂ ಗುಜರಾತಿನಲ್ಲಿ 1 ಹೊಸ ಪ್ರಕರಣಗಳು ವರದಿಯಾಗಿದ್ದವು. ದೆಹಲಿಯಲ್ಲಿ ಶುಕ್ರವಾರವೊಂದೇ ದಿನ 10 ಹೊಸ ಓಮಿಕ್ರಾನ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲೇ ಸೋಂಕಿತ ಪ್ರಕರಣಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಇದುವರೆಗೆ ಅತಿಹೆಚ್ಚು ಒಮಿಕ್ರಾನ್ ಪ್ರಕರಣಗಳು 32, ರಾಜಸ್ಥಾನದಲ್ಲಿ 17, ಕರ್ನಾಟಕ 8, ಗುಜರಾತ್ 5, ಕೇರಳ 5, ತೆಲಂಗಾಣ 2, ತಮಿಳುನಾಡು 1 ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಗೆ ಪಶ್ಚಿಮ ಬಂಗಾಳ 1, ಆಂಧ್ರಪ್ರದೇಶ 1, ಮತ್ತು ದೆಹಲಿಯ ಕೇಂದ್ರಾಡಳಿತ ಪ್ರದೇಶಗಳು, 10, ಚಂಡೀಗಢ 1 ಪ್ರಕರಣ ಪತ್ತೆಯಾಗಿತ್ತು. ಡಿಸೆಂಬರ್ 2ರಂದು ಮೊದಲ ಬಾರಿಗೆ ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದವು.

ಮಹಾರಾಷ್ಟ್ರದಲ್ಲಿ ಕೊವಿಡ್-19 ಅಪಾಯ:
ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಸೋಂಕು ವ್ಯಾಪಕ ಹಾಗೂ ವೇಗವಾಗಿ ಹರಡುತ್ತಿದ್ದು, ಮಹಾರಾಷ್ಟ್ರದಲ್ಲಿ ಹೊಸ ತಳಿಯ ಅಟ್ಟಹಾಸ ಹೆಚ್ಚಾಗುವ ಅಪಾಯವಿದೆ. ಜನವರಿ ತಿಂಗಳಿನಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡುವ ಸಾಧ್ಯತೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಓಮಿಕ್ರಾನ್ ಸೋಂಕು ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರದೀಪ್ ವ್ಯಾಸ ತಿಳಿಸಿದ್ದಾರೆ. ಮಹಾರಾಷ್ಟ್ರ ಹೊರತಾಗಿ, ಕರ್ನಾಟಕ, ರಾಜಸ್ಥಾನ, ಗುಜರಾತ್, ಆಂಧ್ರ ಪ್ರದೇಶ, ನವದೆಹಲಿ ಮತ್ತು ಚಂಡೀಗಢದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಓಮಿಕ್ರಾನ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರಿಗೆ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ವೈದ್ಯಕೀಯ ಪರೀಕ್ಷೆಯ ಅಂತಿಮ ವರದಿಯ ಕೈ ಸೇರುವವರೆಗೂ ವಿಮಾನ ನಿಲ್ದಾಣದಿಂದ ಹೊರಡುವುದಕ್ಕೆ ಅನುಮತಿ ಇರುವುದಿಲ್ಲ.












Click it and Unblock the Notifications