Annamalai: ತಮಿಳುನಾಡಲ್ಲೂ ಮದ್ಯ ಹಗರಣ: ಪ್ರತಿಭಟಿಸಿದ ಬಿಜೆಪಿ ಕೆ. ಅಣ್ಣಾಮಲೈ ಅರೆಸ್ಟ್!
Annamalai Arrest Update: ದೆಹಲಿಯ ನಂತರ ಇದೀಗ ತಮಿಳುನಾಡಿನಲ್ಲೂ ಮದ್ಯ ನೀತಿ ಹಗರಣವು ಭಾರೀ ಸದ್ದು ಮಾಡುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯು ಅಧಿಕಾರದಲ್ಲಿ ಇದ್ದಾಗ ಮದ್ಯನೀತಿ ಹಗರಣ ನಡೆದಿದೆ ಎನ್ನುವ ಆರೋಪವು ಕೇಳಿ ಬಂದಿತ್ತು. ಈ ಆರೋಪದ ಮೇಲೆ ಆಮ್ ಆದ್ಮಿ ಪಾರ್ಟಿಯ ಹಲವು ನಾಯಕರು ಹಾಗೂ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಜೈಲು ಸೇರಿದ್ದರು. ಅಲ್ಲದೇ ಅಲ್ಲಿ ಸರ್ಕಾರ ಬದಲಾಗುವುದಕ್ಕೂ ಮದ್ಯ ನೀತಿ ಹಗರಣ ಕಾರಣವಾಗಿತ್ತು. ಇದೀಗ ತಮಿಳುನಾಡಿನಲ್ಲೂ ಮದ್ಯ ನೀತಿ ಹಗರಣ ಭಾರೀ ಸದ್ದು ಮಾಡುತ್ತಿದೆ. ಆದರೆ ಪ್ರತಿಭಟನೆ ಮಾಡುವಾಗಲೇ ಡಿಎಂಕೆ ಸರ್ಕಾರ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಬಂಧಿಸಿದೆ.
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಸರ್ಕಾರಿ ಸ್ವಾಮ್ಯದ ಮದ್ಯ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾಗಿರುವ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ (TASMAC) / ಟಾಸ್ಮಾಕ್‌ನಲ್ಲಿ ಬರೋಬ್ಬರಿ 1,000 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇಲ್ಲಿನ ಟಾಸ್ಮಾಕ್‌ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನುವ ಆರೋಪವು ಕಳೆದ ಎರಡು ವರ್ಷಗಳಿಂದಲೂ ಕೇಳಿ ಬಂದಿದೆ. ಈ ವಿಚಾರದಲ್ಲಿ ತಮಿಳುನಾಡಿನ ಪ್ರಭಾವಿ ಸಚಿವರ ಬಂಧನವೂ ಆಗಿತ್ತು.

ತಮಿಳುನಾಡಿನ ಸರ್ಕಾರಿ ಮದ್ಯ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಪ್ರತಿಭಟನೆ ನಡೆಸುವಾಗಲೇ ಅವರನ್ನು ಬಂಧಿಸಲಾಗಿದೆ. ಚೆನ್ನೈನ TASMAC ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿತ್ತು. ಈ ವೇಳೆ ಅವರನ್ನು ಅವರ ಮನೆಯಿಂದಲೇ ಬಂಧಿಸಲಾಗಿದೆ. ಅಲ್ಲದೆ ತಮಿಳುನಾಡಿನ ಬಿಜೆಪಿ ಮುಖಂಡರಾದ ತಮಿಳಿಸೈ ಸೌಂದರರಾಜನ್, ವನತಿ ಶ್ರೀನಿವಾಸನ್ ಹಾಗೂ ಸರಸ್ವತಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಮದ್ಯ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED)ವು ಪ್ರಮುಖ ವರದಿಯೊಂದನ್ನು ಪ್ರಕಟಿಸಿತ್ತು. ಇದಾದ ನಂತರ ಬಿಜೆಪಿಯು ಇಲ್ಲಿ ಪ್ರತಿಭಟನೆ ನಡೆಲು ನಿರ್ಧರಿಸಿತ್ತು. TASMAC ಒಳಗೆ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಲಾಗಿತ್ತು. 1,000 ಕೋಟಿ ರೂ.ಗಳ ಆರ್ಥಿಕ ವಂಚನೆ ನಡೆದಿದೆ ಎಂದು ದೂರಲಾಗಿತ್ತು.
ರಾಜ್ಯ ಸರ್ಕಾರದ ವಿರುದ್ಧ ಕೆ. ಅಣ್ಣಾಮಲೈ ಕೆಂಡ!
ಅಣ್ಣಾಮಲೈ ಅವರನ್ನು ಬಂಧಿಸುತ್ತಿದ್ದಂತೆಯೇ ಅವರು ತಮಿಳುನಾಡಿನ ಆಡಳಿತರೂಢ ಡಿಎಂಕೆ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ರಾಜ್ಯ ಸರ್ಕಾರವು ಪ್ರಜಾಪ್ರಭುತ್ವದಲ್ಲಿ ಬರುವ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ಎಂದು ದೂರಿದ್ದಾರೆ. ನಾವು ಪ್ರತಿಭಟನೆ ಮಾಡುತ್ತೇವೆ ಎಂದಾಗ ನೀವು ಇಷ್ಟೊಂದು ಹೇಡಿತನದಿಂದ ವರ್ತಿಸುತ್ತಿರುವುದು ಸರಿಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಪೂರ್ವಾನುಮತಿ ಪಡೆದೇ ಪ್ರತಿಭಟನೆ ಮಾಡುವಾಗಲೇ ಈ ರೀತಿ ಕ್ರಮ ತೆಗೆದುಕೊಂಡರೆ ನಾವು ಏಕಾಏಕಿ ಪ್ರತಿಭಟನೆ ಮಾಡಿದ್ದರೆ ಇವರು ಏನು ಮಾಡುತ್ತಿದ್ದರು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇಡಿ ದಾಳಿ ಪ್ರಮುಖ ದಾಖಲೆಗಳು ವಶಕ್ಕೆ: ಇನ್ನು ತಮಿಳುನಾಡಿನ ವಿವಿಧ ಭಾಗದಲ್ಲಿ ಬೃಹತ್ ಕಾರ್ಯಾಚರಣೆಯನ್ನು ನಡೆಸಿರುವ ಜಾರಿ ನಿರ್ದೇಶನಾಯವು ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಇದಾದ ನಂತರವೇ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿತ್ತು.












Click it and Unblock the Notifications