ಅಹಮದಾಬಾದ್‌ನಲ್ಲಿ ಜಗನ್ನಾಥ ರಥಯಾತ್ರೆ ವೇಳೆ ಕುಸಿದ ಕಟ್ಟಡ: ಒಂದು ಸಾವು, ಐವರು ಗಾಯಾಳು
ಅಹಮದಾಬಾದ್, ಜೂನ್. 20: ಮಂಗಳವಾರ ಅಹಮದಾಬಾದ್‌ನ ದರಿಯಾಪುರ ಪ್ರದೇಶದಲ್ಲಿ ವಾರ್ಷಿಕ ಭಗವಾನ್ ಜಗನ್ನಾಥ ರಥಯಾತ್ರೆಯ ಮಾರ್ಗದಲ್ಲಿ ಪಾಳುಬಿದ್ದ ಮನೆಯ ಬಾಲ್ಕನಿ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ಹಂಚಿಕೊಂಡ ವಿಡಿಯೋದಲ್ಲಿ ಬಾಲ್ಕನಿ ಕುಸಿತದ ನಂತರ ಬೀದಿಗಳಲ್ಲಿ ಜನರ ಗದ್ದಲ, ಅವ್ಯವಸ್ಥೆಯನ್ನು ಕಾಣಬಹುದಾಗಿದೆ. ಗಾಯಗೊಂಡವರಲ್ಲಿ ಕೆಲವರು ಎರಡನೇ ಅಂತಸ್ತಿನ ಬಾಲ್ಕನಿಯಲ್ಲಿ ನಿಂತು ರಥೋತ್ಸವ ವೀಕ್ಷಿಸುತ್ತಿದ್ದರೆ, ಕೆಲವರು ಕೆಳಗೆ ನಿಂತಿದ್ದರು ಎಂದು ದರಿಯಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೆಎಸ್ ಚೌಧರಿ ಪಿಟಿಐಗೆ ತಿಳಿಸಿದ್ದಾರೆ.
VIDEO | Eight people were injured after the balcony of a two-storeyed building collapsed during the Lord Jagannath Rath Yatra in Dariyapur area of Ahmedabad. pic.twitter.com/7QEE2RZliK
— Press Trust of India (@PTI_News) June 20, 2023
ಕಟ್ಟದ ಕುಸಿದ ತಕ್ಷಣ ಕೆಳಗೆ ಬಿದ್ದ ಮೆಹುಲ್ ಪಾಂಚಲ್ ಎಂಬ 36 ವರ್ಷದ ವ್ಯಕ್ತಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ಇನ್ನು ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಅಪಘಾತದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ಅರ್ಜುನ್ ಮೊದ್ವಾಡಿಯಾ ಆಗ್ರಹಿಸಿದ್ದಾರೆ. "ಜಗನ್ನಾಥ ರಥಯಾತ್ರೆಯ ವೇಳೆ ಅಹಮದಾಬಾದ್‌ನಲ್ಲಿ ಬಾಲ್ಕನಿ ಕುಸಿದ ಘಟನೆಯಿಂದ ನೋವುಂಟಾಗಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಇದು ಗಂಭೀರ ನಿರ್ಲಕ್ಷ್ಯದ ಪ್ರಕರಣವಾಗಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು" ಎಂದು ಟ್ವೀಟ್ ಮಾಡಿದ್ದಾರೆ.
ಇತ್ತ, ಮಂಗಳವಾರ ಜಾರ್ಖಂಡ್‌ನ ಹಜಾರಿಬಾಗ್ ಬಳಿಯ ಸಿಲ್ವಾರ್‌ನಲ್ಲಿ ಜಗನ್ನಾಥ ರಥಯಾತ್ರೆಯ ಮೆರವಣಿಗೆಯಿಂದ ಹಿಂದಿರುಗುತ್ತಿದ್ದಾಗ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ-100 ರ ಉದ್ದಕ್ಕೂ ಸಂಜೆ 4.45 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.












Click it and Unblock the Notifications