ಚಂದ್ರಬಾಬು ನಾಯ್ಡು ಬಿಜೆಪಿ ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ ಏಕೆ?
ಅಮರಾವತಿ, ಫೆಬ್ರವರಿ 6: ಕೇಂದ್ರ ಬಜೆಟ್ ನಲ್ಲಿ ಆಂಧ್ರ ಪ್ರದೇಶಕ್ಕೆ ಸಾಕಷ್ಟು ಅನುದಾನ ನೀಡಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಮೇಲೆ ಮಿತ್ರಪಕ್ಷ ಟಿಡಿಪಿ ಮುನಿಸಿಕೊಂಡಿದೆ. ಬಿಜೆಪಿ 'ಮಲತಾಯಿ ಧೋರಣೆ' ಅನುಸರಿಸಿದೆ ಎಂದು ದೂರಿರುವ ಟಿಡಿಪಿ ಸಂಸದರು ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ್ದು, ಮಂಗಳವಾರವೂ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಟಿಡಿಪಿ ಸಂಸದರ ಗದ್ದಲಕ್ಕೆ ಇಂದು ಲೋಕಸಭೆ ಕಲಾಪವೂ ಮುಂದೂಡಲ್ಪಟ್ಟಿದೆ.
ಇನ್ನೊಂದು ಕಡೆ ಬಿಜೆಪಿ ಜತೆ ಸಂಬಂಧ ಮುರಿದುಕೊಂಡಿರುವ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಜತೆ ಚಂದ್ರಬಾಬು ನಾಯ್ಡು ಮಾತುಕತೆಯನ್ನೂ ನಡೆಸಿದ್ದಾರೆ. ಹೀಗಿದ್ದೂ ಕೇಸರಿ ಪಕ್ಷದ ಜತೆಗಿನ ಸಂಬಂಧವನ್ನು ತೆಲುಗು ದೇಶಂ ಪಕ್ಷದ ನಾಯಕರು ಮುರಿಯಲಾರರು. ಯಾಕೆ ಎಂಬುದಕ್ಕೆ ಕಾರಣ ಇಲ್ಲಿದೆ.
ಬಿಜೆಪಿ ಜತೆ ಕೈಜೋಡಿಸಲು ಜಗನ್ ಮೋಹನ್ ರೆಡ್ಡಿ ನೇತೃತ್ವ ವೈಎಸ್ಆರ್ ಕಾಂಗ್ರೆಸ್ ಮುಂದಾಗಿರುವುದರಿಂದ ಬಿಜೆಪಿ ಜತೆ ಸಂಬಂಧ ಅಂತ್ಯಗೊಳಿಸಲು ಟಿಡಿಪಿ ಸಂಸದರು ಉತ್ಸುಕರಾಗಿದ್ದಾರೆ. ಆದರೆ ಈ ಉತ್ಸಾಹಕ್ಕೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಣ್ಣೀರೆರೆಚಿದ್ದಾರೆ.

ಈ ಕುರಿತು ಮಾತನಾಡಿರುವ ಟಿಡಿಪಿ ನಾಯಕರೊಬ್ಬರು, ಬಿಜೆಪಿ ಜತೆ ಸಂಬಂಧ ಮುರಿದುಕೊಳ್ಳಲು ಇದು ಸಕಾಲವಲ್ಲ ಎಂಬ ಸೂಚನೆ ಬಿಟ್ಟುಕೊಟ್ಟಿದ್ದಾರೆ. ಪಕ್ಷದ ಸಂಸದರ ಸಭೆಯಲ್ಲಿ ನಾಯ್ಡು, "ರಾಜಕೀಯದಲ್ಲಿ ಯಾವತ್ತೂ ನಾಳೆ ಎಂಬುದಿರುತ್ತದೆ. ಇಲ್ಲದಿದ್ದಲ್ಲಿ ನಾಡಿದ್ದು ಇದ್ದೇ ಇರುತ್ತದೆ," ಎಂದಿದ್ದಾರಂತೆ.
ಈ ಸಂಬಂಧ ಹೇಳಿಕೆ ನೀಡಿರುವ ಸಂಸದ ಹಾಗೂ ಕೇಂದ್ರ ಸಚಿವ ವೈ ಸತ್ಯನಾರಾಯಣ ಚೌಧರಿ, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. "ಹೌದು, ಅವರು (ಚಂದ್ರಬಾಬು ನಾಯ್ಡು) ಸಂಪೂರ್ಣ ಹತಾಶರಾಗಿದ್ದಾರೆ. ಆದರೆ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲೇ ಅವರ ರಾಜಕೀಯ ಚತುರತೆ ಪ್ರದರ್ಶನವಾಗುತ್ತದೆ. ಮತ್ತು ಅದರಿಂದಾಗಿ ಬಿಜೆಪಿಯೊಂದಿಗೆ ಮೈತ್ರಿ ಮುರಿಯುವ ಎಲ್ಲಾ ಮಾತುಕತೆಗಳನ್ನು ತಣ್ಣಗಾದವು," ಎಂದಿದ್ದಾರೆ.
ಇದು ಒಂದು ಕಾರಣವಾದರೆ ಬಿಜೆಪಿ ಜತೆಗಿನ ಮೈತ್ರಿ ಮುರಿಯುವುದರಿಂದ ನಾಯ್ಡು ಹಿಂಜರಿಯಲು ಬೇರೆಯೇ ಕಾರಣಗಳಿವೆ ಎನ್ನುತ್ತದೆ ತಳಮಟ್ಟದ ಮಾಹಿತಿ. ಮುಖ್ಯವಾಗಿ ಟಿಡಿಪಿ ಒಂದೊಮ್ಮೆ ಸಂಬಂಧ ಮುರಿದುಕೊಂಡರೆ ಆ ಜಾಗಕ್ಕೆ ವೈಎಸ್ಆರ್ ಕಾಂಗ್ರೆಸ್ ಪ್ರವೇಶ ಪಡೆಯುತ್ತದೆ. ಇದು ಟಿಡಿಪಿಗೆ ಬೇಕಾಗಿಲ್ಲ.
ಇನ್ನೊಂದು ಕಡೆ ಆಂಧ್ರ ಪ್ರದೇಶ ಸರಕಾರ ಕೇಂದ್ರದ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಮುಖ್ಯವಾಗಿ ಅಮರಾವತಿ, ಪೊಲಾವರಂ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರದ ಬೆಂಬಲ ಬೇಕೇ ಬೇಕು. ಈ ಕಾರಣಕ್ಕೆ ಸಂಬಂಧ ಮುರಿದುಕೊಳ್ಳದಿರಲು ನಾಯ್ಡು ತೀರ್ಮಾನಿಸಿದ್ದಾರೆ.
"ನಾವು ಶಿವಸೇನೆ ಅಥವಾ ಬೇರೆ ಪಕ್ಷಗಳ ಹಾಗೆ ಅಲ್ಲ. ನಮ್ಮದು ಶಿಸ್ತಿನ ಪಕ್ಷ ಮತ್ತು ನಾವು ಆ ಗೌರವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕಿದೆ. ನಮ್ಮನ್ನು ನಂಬಿಕಸ್ಥ ಮಿತ್ರಪಕ್ಷವಾಗಿ ನೋಡುತ್ತಾರೆ ಮತ್ತು ನಾವು ಈ ಭಾವನೆಯನ್ನು ಉಳಿಸಿಕೊಳ್ಳಬೇಕಿದೆ. ಬಾಲಿಷ ಹೇಳೀಕೆಗಳಲ್ಲಿ ನಿರತರಾಗಬೇಡಿ. 2019ರಲ್ಲಿ ನಾನು ಕಿಂಗ್ ಮೇಕರ್ ಆಗುತ್ತೇನೆ ಎಂದು ದೆಹಲಿಯ ರಾಜಕೀಯ ಪಡಸಾಲೆಗಳಲ್ಲಿ ನೀವೆಲ್ಲಾ ಹೇಳುತ್ತಾ ಓಡಾಡುತ್ತಿದ್ದೀರಿ. ಆದರೆ ನನ್ನ ಆಸಕ್ತಿ ಇರುವುದು ರಾಜ್ಯದ ಮೇಲೆ ಮಾತ್ರ. ಕಿಂಗ್ ಮೇಕರ್ ಆಗುವುದು ಮತ್ತೊಂದರಲ್ಲಿ ನನಗೆ ಆಸಕ್ತಿಯಿಲ್ಲ," ಎಂದು ಸತ್ಯನಾರಾಯಣ ಚೌಧರಿ ಮತ್ತು ಇತರ ಸಂಸದರ ಭಾಗವಹಿಸಿದ್ದ ಸಭೆಯಲ್ಲಿ ನಾಯ್ಡು ಹೇಳಿದ್ದಾರೆ ಎನ್ನಲಾಗಿದೆ.












Click it and Unblock the Notifications