ಉಗ್ರ ಯಾಸಿನ್ ಭಟ್ಕಳ್ ಜೇಬಿನಲ್ಲಿ ಇದ್ದದ್ದಾದರೂ ಏನು?
ಹೈದರಾಬಾದ್, ಜು. 10 : ಭಯೋತ್ಪಾದನೆ ಆರೋಪ ಎದುರಿಸುತ್ತಿರುವ ವಿಚಾರಣಾಧೀನ ಕೈದಿ ಸುಳ್ಳು ಹೇಳಬಹುದು, ಅವರಮ್ಮ ಸುಳ್ಳು ಹೇಳಬಹುದು, ಅಂಥದ್ದೇನೂ ನಡೆದೇ ಇಲ್ಲ ಅಂತ ಜೈಲಧಿಕಾರಿಯೂ ಸುಳ್ಳು ಹೇಳಬಹುದು... ಆದರೆ, ಚಿತ್ರ ಸುಳ್ಳು ಹೇಳಲು ಸಾಧ್ಯವೆ?
ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದಿನ್ ಜನಕ, ಭಯೋತ್ಪಾದಕ ಯಾಸಿನ್ ಭಟ್ಕಳ್ ತನ್ನ ಹೆಂಡತಿಯೊಡನೆ ಮೊಬೈಲಲ್ಲಿ ಮಾತನಾಡುತ್ತ ಜೈಲಿನಿಂದ ಪರಾರಿಯಾಗುತ್ತೇನೆಂದು ಡಂಗುರ ಸಾರಿದ್ದು, ಅದನ್ನು ಜೈಲಧಿಕಾರಿಗಳು ಅಲ್ಲಗಳೆದಿದ್ದು, ಇದರ ಹಿಂದೆ ಪೊಲೀಸರ ಮಸಲತ್ತು ಇದೆ ಎಂದು ಯಾಸಿನ್ ಅಮ್ಮ ಕೆಂಡಕಾರಿದ್ದು ಕಳೆದ ವಾರ ಭಾರೀ ಸುದ್ದಿಯಾಗಿತ್ತು.
ಈ ಲೇಖನದಲ್ಲಿರುವ ಚಿತ್ರವನ್ನು ಸ್ವಲ್ಪ ಗಮನಿಸಿ ನೋಡಿ. ಜೀನ್ಸ್ ಪ್ಯಾಂಟ್ ಹಾಕಿಕೊಂಡಿರುವ, ಕೈಕೊಳ ಧರಿಸಿ ನಸುನಗುತ್ತ ಬರುತ್ತಿರುವ ಗಡ್ಡಧಾರಿ ಯಾಸಿನ್ ಭಟ್ಕಳ ತೊಟ್ಟಿರುವ ಉದ್ದ ತೋಳಿನ ಬಿಳಿ ಶರ್ಟನ್ನು ಒಮ್ಮೆ ಗಮನಿಸಿ ನೋಡಿ. ಆತ ತನ್ನ ಕಿಸೆಯಲ್ಲಿ ಏನಿಟ್ಟಿರಬಹುದೆಂದು ನೀವೇ ಊಹೆ ಮಾಡಿ. [ನನ್ನ ಮಗನ ಕೊಲ್ಲಲು ಪೊಲೀಸ್ ಸಂಚು : ಯಾಸಿನ್ ತಾಯಿ]

ಕಿಸೆಯಲ್ಲಿ ಆಯತಾಕಾರದಲ್ಲಿ ಕಾಣುತ್ತಿರುವುದು ಮೊಬೈಲಾ, ಬುಕ್ಲೆಟ್ಟಾ? ಶುಕ್ರವಾರ ಯಾಸಿನ್ ಭಟ್ಕಳನನ್ನು ಹೈದರಾಬಾದ್ ಕೋರ್ಟಿನಲ್ಲಿ ಹಾಜರುಪಡಿಸಿದಾಗ ಆತನ ಕ್ರೀಂ ಕಲರಿನ ಅಂಗಿಯ ಜೇಬಿನಲ್ಲಿರುವ ವಸ್ತು, ಅಲ್ಲಿ ನೆರೆದಿದ್ದ ಎಲ್ಲ ಪತ್ರಕರ್ತರ ಚರ್ಚೆಯ ವಿಷಯವಾಗಿತ್ತು.
ಕಿಸೆಯಲ್ಲಿ ಇದ್ದದ್ದಾದರೂ ಏನು?
ಅರ್ಧ ಮೊಳ ಉದ್ದ ಗಡ್ಡ ಬಿಟ್ಟಿರುವ ಯಾಸಿನ್ ಭಟ್ಕಳ್, ಎಣ್ಣೆ ಹಾಕಿ ನೀಟಾಗಿ ತಲೆ ಬಾಚಿಕೊಂಡು, ಮುಖಕ್ಕೆ ಪೌಡರ್ ಹಚ್ಚಿಕೊಂಡು, ತಾನು ಏನೂ ಮಾಡೇ ಇಲ್ಲ ಎಂಬಂತೆ ನಸುನಗುತ್ತ ಬರುತ್ತಿದ್ದಾಗ, ಪಕಪಕನೆ ಕಣ್ಣು ಮಿಟುಕಿಸುತ್ತಿದ್ದ ಕ್ಯಾಮೆರಾಗಳ ದೃಷ್ಟಿಗೆ ಬಿದ್ದಿದ್ದು ಕಿಸೆಯಲ್ಲಿರುವ ಆಯತಾಕಾರದ ವಸ್ತು.
ಐಎಸ್ಐಎಸ್ ಸ್ನೇಹಿತರ ಸಹಾಯದಿಂದ ತಾನು ಜೈಲಿನಿಂದ ಪರಾರಿಯಾಗುವ ಕುರಿತು ಹೆಂಡತಿಯೊಡನೆ ಆತ ಮಾತನಾಡಿದ ಸುದ್ದಿ ಸ್ಫೋಟವಾದ ನಂತರ ಆತನನ್ನು ಮೊದಲ ಬಾರಿಗೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗುತ್ತಿತ್ತು. ಜೇಬಿನಲ್ಲಿದ್ದುದು ಮೊಬೈಲೇ ಅಂತ ಒಬ್ಬನೆಂದರೆ, ಎಲ್ಲರಿಗೂ ಕಾಣುವಂತೆ ಮೊಬೈಲ್ ಇಟ್ಟುಕೊಳ್ಳಲು ಅವನು ಅಷ್ಟು ಮೂರ್ಖನಲ್ಲ ಅಂತ ಮತ್ತೊಬ್ಬ. [ಪತ್ನಿಗೆ ಕರೆ ಮಾಡಿದ ಯಾಸಿನ್ ಭಟ್ಕಳ ಇನ್ ಟ್ರಬಲ್!]
ಅದು ಪಾಕೀಟಿನಲ್ಲಿ ಇಟ್ಟುಕೊಳ್ಳಬಹುದಾದ ಪುಟ್ಟ ಕುರಾನ್ ಇರಬಹುದಾ ಎಂಬ ಮಾತುಗಳು ಕೂಡ ಕೇಳಿಬಂದವು. ಯಸ್, ಅದು ಅದೇ ಇರಬಹುದು ಎಂಬ ಸಮ್ಮತಿ ಹಲವರಲ್ಲಿ ಮೂಡಿತ್ತು. ಮಾಧ್ಯಮಗಳಿಗೆ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ, ದಿಕ್ಕುತಪ್ಪಿಸುವಲ್ಲಿ ನಿಸ್ಸೀಮನಾಗಿರುವ ಯಾಸಿನ್ ಬೇಕಂತಲೇ ಆ ಆಟ ಆಡಿರಲೂಬಹುದು.
ಭಲೇ ಕಿಲಾಡಿ ಯಾಸಿನ್ ಭಟ್ಕಳ್
ಇವನು ಎಂತೆಂಥ ಕೃತ್ಯಗಳನ್ನು ಎಸಗಿದ್ದಾನೆಂದರೆ, ಬೆಂಗಳೂರು ಪೊಲೀಸರು, ಮಹಾರಾಷ್ಟ್ರದ ಎಟಿಎಸ್, ದೆಹಲಿಯ ಎನ್ಐಎ ತಂಡಗಳು ಆತನ ವಿಚಾರಣೆಗಾಗಿ ತಹತಹಿಸುತ್ತಿವೆ. ಪ್ರತಿಬಾರಿ ವಿಚಾರಣೆ ನಡೆಸುವಾಗಲೂ ಆತ ಪೊಲೀಸರನ್ನು ಸಾಕಷ್ಟು ಗೋಳು ಹೊಯ್ದುಕೊಂಡಿದ್ದಾನೆ.
ಬೆಂಗಳೂರಿನಲ್ಲಿ ವಿಚಾರಣೆ ಸಮಯದಲ್ಲಿ ಬೆಣ್ಣೆ ದೋಸೆ ಬೇಕೆಂದು ಕ್ಯಾತೆ ತೆಗೆದಿದ್ದರೆ, ಮುಂಬೈ ಮತ್ತು ದೆಹಲಿಯಲ್ಲಿ ವಿಚಾರಣೆ ನಡೆಸುವಾಗ ಮೂರೇಮೂರು ಪ್ರಶ್ನೆಗಳಿಗೆ ಉತ್ತರಿಸಿ, ನಾಲ್ಕನೇ ಪ್ರಶ್ನೆ ಬಂದಾಗ ನಿದ್ದೆ ಬರುತ್ತಿದೆ ಎಂದು ನಾಟಕವಾಡಿ ಪೊಲೀಸರನ್ನು ಆಟವಾಡಿಸಿದ್ದ. ಆದರೆ, ನಮ್ಮ ಪೊಲೀಸರೇನು ಕಡಿಮೆಯಿಲ್ಲ, ಅವರಿಗೆ ಇಂಥವನ ಬಾಯಿ ಹೇಗೆ ಬಿಡಿಸಬೇಕೆಂಬುದೂ ಗೊತ್ತಿದೆ.
ಜೈಲಧಿಕಾರಿಯಿಂದ ವರದಿಗೆ ಆದೇಶ
ಯಾಸಿನ್ ಕೈಗೆ ಮೊಬೈಲ್ ಹೇಗೆ ಬಂತು, ಯಾರೊಂದಿಗೆ ಏನು ಮಾತಾಡಿದ ಎಂಬ ಬಗ್ಗೆ ಚೆರ್ಲಪಲ್ಲಿ ಜೈಲಧಿಕಾರಿಗಳು ವರದಿ ಸಲ್ಲಿಸಬೇಕೆಂದು ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. ಸಿರಿಯಾದ ರಾಜಧಾನಿ ಡಮಸ್ಕಸ್ ನಲ್ಲಿರುವ ಸ್ನೇಹಿತರ ಸಹಾಯದಿಂದ ತಾನು ಜೈಲಿನಿಂದ ಪಾರಾಗುವುದಾಗಿ ತನ್ನ ಹೆಂಡತಿಗೆ ತಿಳಿಸಿದ್ದಾನೆಂಬ ಸಂಗತಿ ಪೊಲೀಸರನ್ನು ಬೆಚ್ಚಿಬೀಳಿಸಿದೆ.












Click it and Unblock the Notifications