ಜಗನ್ ಉಪವಾಸ, ಸೀಮಾಂಧ್ರ ಬಂದ್, ಜನ ತತ್ತರ
ಹೈದರಾಬಾದ್, ಅ.6: ಆಂಧ್ರ ವಿಭಜನೆಗೆ ವಿರೋಧ ವ್ಯಕ್ತಪಡಿಸಿ ವೈಎಸ್ ಆರ್ ಪಕ್ಷ ಸೇರಿದಂತೆ ಹಲವಾರು ಸಂಘಟನೆಗಳು ಕರೆ ನೀಡಿರುವ ಸೀಮಾಂಧ್ರ ಬಂದ್ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ವಿಭಜನೆ ಖಂಡಿಸಿ ವೈಎಸ್ಸಾರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಉಪವಾಸ ಸತ್ಯಾಗ್ರಹ ಎರಡನೇ ದಿನ ಕಂಡಿದೆ. ತಿರುಪತಿ ಬ್ರಹ್ಮೋತ್ಸವ, ಕರ್ನಾಟಕ ಗಡಿಭಾಗದ ಜನ ಸಾಮಾನ್ಯರ ತತ್ತರ, ಗೊಂದಲದಲ್ಲಿ ಕಾಂಗ್ರೆಸ್, ಹಿಂಸಾಚಾರ ಸ್ವರೂಪ ಪಡೆದ ಬಂದ್ ಮುಂತಾದ ಸಚಿತ್ರ ವರದಿ ಇಲ್ಲಿದೆ ಓದಿ
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರ ಬಂದಿರುವ ಜಗನ್ ಮೋಹನ್ ರೆಡ್ಡಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ವಿಭಜನೆ ವಿಚಾರದಲ್ಲಿ ಸರ್ಕಾರ ತರಾತುರಿ ತೀರ್ಮಾನ ಪ್ರಕಟಿಸಿದೆ. ಸರ್ಕಾರದ ಈ ನಿರ್ಧಾರವನ್ನು ಸುಪ್ರೀಂಕೋರ್ಟೀನಲ್ಲಿ ಪ್ರಶ್ನಿಸುವುದಾಗಿ ಘೋಷಿಸಿದ್ದಾರೆ.
ವಿಭಜನೆಗೆ ಸಂಬಂಧಿಸಿ ಅನೇಕ ಕಾನೂನು ತೊಡಕುಗಳಿವೆ. ಇವುಗಳನ್ನು ಪರಿಹರಿಸದೆ. ಸರ್ಕಾರ ಕೇವಲ ಆರು ವಾರಗಳಲ್ಲಿ ಹೇಗೆ ವಿಭಜನೆ ಕುರಿತು ನಿರ್ಧಾರ ತೆಗೆದುಕೊಂಡಿತು ಎಂದು ಜಗನ್ ಪ್ರಶ್ನಿಸಿದ್ದಾರೆ. ವಿಧಾನಸಭೆಯ ಅಂಗೀಕಾರ ಪಡೆಯದೆ ರಾಜ್ಯವೊಂದನ್ನು ವಿಭಜಿಸುವ ತೀರ್ಮಾನ ಪ್ರಕಟಿಸಿದ ಮೊದಲ ಪ್ರಕರಣ ಇದು ಎಂದು ಜಗನ್ ಆರೋಪಿಸಿದ್ದಾರೆ.
ಜನರ ವಿರೋಧದಿಂದಾಗಿ ಜನಪ್ರಾತಿನಿಧ್ಯ ಸುಗ್ರೀವಾಜ್ಞೆಯನ್ನು ಹಿಂಪಡೆಯುವುದು ಸಾಧ್ಯವಾಗಿದ್ದರೆ ಆಂಧ್ರವಿಭಜನೆ ನಿರ್ಧಾರ ಯಾಕೆ ಹಿಂತೆಗೆದುಕೊಳ್ಳಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
ಸೋನಿಯಾ ವಿರುದ್ಧ ವಾಗ್ದಾಳಿ: ವ್ಯಕ್ತಿಯೊಬ್ಬರು ತಮ್ಮ ಪುತ್ರ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಭಜನೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ತೆಲಂಗಾಣ ರಾಜ್ಯರಚನೆ ಹಿಂದೆ ಸೋನಿಯಾ ಕೈವಾಡ ಇದೆ ಎಂದು ಜಗನ್ ಆರೋಪಿಸಿದ್ದಾರೆ. ಸೀಮಾಂಧ್ರದಲ್ಲಿ ನಡೆಯುತ್ತಿರುವ ಬಂದ್ ಬಹುತೇಕ ಶಾಂತಿಯುತವಾಗಿದ್ದರೂ ಅಲ್ಲಲ್ಲಿ ಹಿಂಸಾಚಾರ ನಡೆದಿದೆ ಜನ ಸಾಮಾನ್ಯರ ಮೇಲೆ ಆಗಿರುವ ಪರಿಣಾಮ, ಜಗನ್ ಉಪವಾಸ ವ್ರತದ ಚಿತ್ರಗಳು ಇಲ್ಲಿದೆ ತಪ್ಪದೇ ನೋಡಿ

ವಿಜಯನಗರದಲ್ಲಿ ಕಲ್ಲುತೂರಾಟ
ಸೀಮಾಂಧ್ರದಲ್ಲಿ ನಡೆಯುತ್ತಿರುವ ಬಂದ್ ಬಹುತೇಕ ಶಾಂತಿಯುತವಾಗಿದ್ದರೂ ವಿಜಯನಗರ ಪಟ್ಟಣದಲ್ಲಿ ಕೆಲವು ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ ಘಟನೆ ವರದಿಯಾಗಿದೆ. ಈ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗುಂಪು ಚದುರಿಸಿದ್ದಾರೆ.

ತಿರುಪತಿ ಬಸ್ ಬಂದ್
ಸೀಮಾಂಧ್ರ ಬಂದ್ ಬಿಸಿ ಪ್ರಮುಖ ಧಾರ್ಮಿಕ ಸ್ಥಳ ತಿರುಪತಿ ಮೇಲೂ ತಟ್ಟಿದೆ. ಬಂದ್ ಗೆ ಆಂಧ್ರ ಸಾರಿಗೆ ಸಂಸ್ಥೆ ಸಿಬ್ಬಂದಿ ಕೂಡ ಕೈಜೋಡಿಸಿದ್ದರಿಂದಾಗಿ ತಿರುಪತಿಗೆ ತೆರಳುವ ಭಕ್ತರಿಗೆ ತೊಂದರೆಯಾಗಿದೆ. ಸದಾ ಜನ ಜಂಗುಳಿಯಿಂದ ಗಿಜಿಗಿಡುತ್ತಿದ್ದ ತಿರುಮಲದಲ್ಲಿ ಶನಿವಾರ, ಭಾನುವಾರ ಜನ ಸಂಚಾರ ತೀರಾ ವಿರಳವಾಗಿದೆ. ಬ್ರಹ್ಮೋತ್ಸವಕ್ಕೂ ಬಂದ್ ಬಿಸಿ ತಟ್ಟುವ ಸಾಧ್ಯತೆ ನಿಚ್ಚಳವಾಗಿದೆ.

ಟಿಡಿಪಿಗೂ ಬೀದಿಗಿಳಿದಿದೆ.
ಬಂದ್ ಮೂಲಕ ಮೈಲೇಜ್ ಪಡೆಯಲು ತೆಲುಗುದೇಶಂ ಪಾರ್ಟಿ ಕೂಡಾ ಮುಂದಾಗಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸಿದೆ.

ಸೀಮಾಂಧ್ರ ಫುಲ್ ಬಂದ್
ಸೀಮಾಂಧ್ರವ್ಯಾಪ್ತಿಗೆ ಒಳಪಡುವ ಕೃಷ್ಣಾ, ಗುಂಟೂರು, ಪ್ರಕಾಶಂ, ನೆಲ್ಲೂರು, ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಚಿತ್ತೂರು, ಕರ್ನೂಲು, ಕಡಪ, ಅನಂತಪುರ ಸೇರಿದಂತೆ ಬಹುತೇಕ ಎಲ್ಲ ಕಡೆ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ.

ರಾಜ್ಯ ಸಾರಿಗೆ ಬಸ್ ಸ್ಥಗಿತ
ಸೀಮಾಂಧ್ರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ವಾಣಿಜ್ಯ ಮುಗ್ಗಟ್ಟುಗಳು, ಬಸ್, ಆಟೋ, ಲಾರಿ ಇತರೆ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.
ಬಂದ್ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಆಂಧ್ರಕ್ಕೆ ತೆರಳುವ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಪ್ರತಿಭಟನೆಯ ಕಾವು
ಒಂದು ಮೂಲದ ಪ್ರಕಾರ ಆಂಧ್ರಕ್ಕೆ ಕಳೆದೆರಡು ದಿನಗಳಿಂದ ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತರು ವಾಹನಗಳಿಲ್ಲದೆ ಪರದಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಸರಕು ಸಾಗಣೆ ಲಾರಿಗಳು ಮರಗಳ ಕೆಳಗೆ ಆಶ್ರಯ ಪಡೆದಿವೆ. ಕದಿರಿ, ಧರ್ಮಾವರಂ, ಪೆನುಕೊಂಡ, ಪುಟ್ಟಪರ್ತಿ, ತಿರುಪತಿ ಕಡೆಗೆ ವಾಹನ ಇಲ್ಲದೆ ರೈತರು ಕಂಗಲಾಗಿದ್ದಾರೆ. ಹೈದರಾಬಾದಿನ ವ್ಯಾಪಾರ ವಹಿವಾಟಿಗೆ ತೀವ್ರ ತೊಂದರೆಯಾಗಿದೆ.
ರಾಜೀನಾಮೆ ಪರ್ವ
ಸರ್ಕಾರದ ಕ್ರಮವನ್ನು ವಿರೋಧಿಸಿ ಸಚಿವರಾದ ಕೆ.ಸಿ.ಆರ್.ರಾವ್ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಚಿರಂಜೀವಿ ತಮ್ಮ ರಾಜೀನಾಮೆಯನ್ನು ಫ್ಯಾಕ್ಸ್ ಮೂಲಕ ಪ್ರಧಾನಿ ಕಾರ್ಯಾಲಯಕ್ಕೆ ರವಾನಿಸಿದ್ದಾರೆ.
ಕೇಂದ್ರ ಸಚಿವೆ ಪುರಂದರೇಶ್ವರಿ, ಕೃಪಾರಾಣಿ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕೇಂದ್ರದ ಕೆಲವು ಸಚಿವರು, ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.
ಸಿಎಂ ಕಿರಣ್ ಕುಮಾರ್ ರೆಡ್ಡಿ ಕೂಡ ಅಧಿಕಾರ ತ್ಯಾಗ ಮಾಡಲು ಮುಂದಾಗಿದ್ದಾರೆ.

ತೆಲಂಗಾಣದಲ್ಲಿ ಹರ್ಷ್ಸ
ಹೊಸ ರಾಜ್ಯ ಮತ್ತು ಸೀಮಾಂಧ್ರ ಎರಡಕ್ಕೂ 10 ವರ್ಷಗಳ ಕಾಲ ಹೈದರಾಬಾದ್ ರಾಜಧಾನಿ ಮತ್ತು ಈ ಸಂಬಂಧ ಹಣಕಾಸು ನೆರವಿನ ಹಂಚಿಕೆ, ನೀರು, ವಿದ್ಯುತ್ ಹಾಗೂ ಗಡಿ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ತೆಲಂಗಾಣ ಹೋರಾಟ ಸಮಿತಿ ಓಕೆ ಎಂದಿದೆಯಂತೆ

ಕೆಎಸ್ ಆರ್ ಟಿಸಿಗೆ ನಷ್ಟ
ಚಿತ್ರದಲ್ಲಿ: ಅನಂತಪುರದ ಮುಖ್ಯರಸ್ತೆಯ ದೃಶ್ಯ
ಆಂಧ್ರ ಸಾರಿಗೆ ಸೇವೆಯನ್ನು ನಿಲ್ಲಿಸಿರುವುದರಿಂದ ಕೆಎಸ್ ಆರ್ ಟಿಸಿಗೆ ಪ್ರತಿದಿನ 35 ರಿಂದ 45 ಲಕ್ಷ ರೂ. ಆದಾಯ ನಷ್ಟವಾಗುತ್ತಿದೆ. ಕರ್ನಾಟಕದ ಗಡಿ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ, ಗುಲ್ಬರ್ಗಾ ಹಾಗೂ ಬೀದರ್ ಜಿಲ್ಲೆಗಳ ಗಡಿಭಾಗದವರೆಗೂ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ಸಂಚರಿಸುತ್ತಿವೆ












Click it and Unblock the Notifications