ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ರಾಮ ದೇಗುಲ ನಿರ್ಮಾಣ, ತನಿಖೆ ಪ್ರಾರಂಭ
ಹೈದರಾಬಾದ್, ಏಪ್ರಿಲ್ 13 : ರಾಮನವಮಿ ದಿನದಂದು ಹೈದರಾಬಾದ್ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಕೆಲ ವಿದ್ಯಾರ್ಥಿಗಳು ರಾಮನ ಸಣ್ಣ ಗುಡಿ ನಿರ್ಮಿಸಿ ಕೇಸರಿ ಬಾವುಟ ಹಾರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೈದರಾಬಾದ್ ವಿಶ್ವವಿದ್ಯಾಲಯವೂ ಸಮಿತಿ ರಚನೆ ಮಾಡಿದ್ದು, ಘಟನೆ ಸಂಬಂಧ ತನಿಖೆ ನಡೆಸುವಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಇನ್ನು ಈ ಕೃತ್ಯವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮಾಡಿದೆ ಎಂದು ಕೆಲ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಆದ್ರೆ ಈ ಆರೋಪವನ್ನು ತಳ್ಳಿ ಹಾಕಿರುವ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆದ ದೇವೆಶ್ ನಿಗಮ್ ಯಾವುದೇ ವಿದ್ಯಾರ್ಥಿ ಸಂಘವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ.

ಜೊತೆಗೆ ಈ ಘಟನೆಗೂ ಮುನ್ನವೇ ಕ್ಯಾಂಪಸ್‌ನಲ್ಲಿ ಬೇರೆ ಹಿಂದೂ ದೇವರುಗಳ ಪೋಟೋಗಳು ಸಹ ಇದ್ದವು. ಹೀಗಾಗಿ ಒಂದಿಬ್ಬರು ವಿದ್ಯಾರ್ಥಿಗಳು ರಾಮನವಮಿ ದಿನದಂದು ಬೇರೆ ದೇವರ ಪೋಟೋಗಳ ಜೊತೆಗೆ ರಾಮನ ಪೋಟೋ ಇಟ್ಟು ಕೇಸರಿ ಬಾವುಟ ಹಾರಿಸಿದ್ದಾರೆ. ಆದ್ರೆ ವಿದ್ಯಾರ್ಥಿಗಳು ಈ ಬಗ್ಗೆ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ. ಸದ್ಯಕ್ಕೆ ವಿಶ್ವವಿದ್ಯಾಲಯವೂ ಈ ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿದ್ದು, ಅದರ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳಲಾಗುತ್ತದೆ ಅಂತ ನಿಗಮ್ ತಿಳಿಸಿದ್ದಾರೆ.

Recommended Video
ಇನ್ನು ವಿದ್ಯಾರ್ಥಿಗಳು ಕಲ್ಲಿನ ಮೇಲೆ ಓಂ ಹಾಗೂ ಸ್ವಸ್ತಿಕ್ ಚಿಹ್ನೆ ಬಳಸಿದ್ದಾರೆ. ಆದ್ರೆ ಈ ವಿದ್ಯಾರ್ಥಿಗಳು ಯಾವುದೇ ವಿದ್ಯಾರ್ಥಿ ಸಂಘಕ್ಕೆ ಸೇರಿದವರಲ್ಲ ಅಂತ ನಿಗಮ್ ತಿಳಿಸಿದ್ದಾರೆ. ಅಲ್ಲದೆ ಕ್ಯಾಂಪಸ್‌ನಲ್ಲಿ ಧರ್ಮಾಧಾರಿತ ಯಾವುದೇ ಗುಡಿ, ದೇವಸ್ಥಾನಗಳ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಆದ್ರೆ ಧಾರ್ಮಿಕ ಆಚರಣೆಗೆ ಅನುಮತಿ ಇದೆ. ಹೀಗಾಗಿ ರಾಮನವಮಿ ದಿನದಂದು ವಿದ್ಯಾರ್ಥಿಗಳು ಆಚರಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಈ ಆಚರಣೆಯೂ ಶಾಂತಿಯುತವಾಗಿ ನೇರವೇರಿದೆ ಅಂತ ನಿಗಮ್ ಸ್ಪಷ್ಟ ಪಡಿಸಿದ್ದಾರೆ.












Click it and Unblock the Notifications